ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ: ತರಬೇತಿ ಕಾರ್ಯಾಗಾರ

| Published : Sep 13 2025, 02:05 AM IST

ಸಾರಾಂಶ

ಕೊಡಗು ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಸಂಬಂಧ ಜಿಲ್ಲಾಮಟ್ಟದ ಮಾಸ್ಟರ್ ತರಬೇತಿದಾರರಿಗೆ ಕಾರ್ಯಾಗಾರ ನಡೆಯಿತು.

ಶೇ.100ರಷ್ಟು ಸಮೀಕ್ಷೆ ನಡೆಸುವಂತೆ ಜಿಲ್ಲಾಧಿಕಾರಿ ನಿರ್ದೇಶನ

ಕನ್ನಡಪ್ರಭ ವಾರ್ತೆ ಮಡಿಕೇರಿ

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಜಿಲ್ಲೆಯ ಎಲ್ಲ ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಬಗ್ಗೆ ಸಮೀಕ್ಷೆ ನಡೆಯಲಿದ್ದು, ಸಮೀಕ್ಷೆಯಲ್ಲಿ ಯಾರೂ ಸಹ ಬಿಟ್ಟು ಹೋಗದಂತೆ ಶೇ.100ರಷ್ಟು ಸಮೀಕ್ಷೆ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ನಿರ್ದೇಶನ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಸಂಬಂಧ ಜಿಲ್ಲಾಮಟ್ಟದ ಮಾಸ್ಟರ್ ತರಬೇತಿದಾರರಿಗೆ ಶುಕ್ರವಾರ ಏರ್ಪಡಿಸಲಾಗಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಆದಿವಾಸಿ ಕುಟುಂಬಗಳ ಬಗ್ಗೆ ಗಮನ:

ಜಿಲ್ಲೆಯಲ್ಲಿ ಆದಿವಾಸಿ ಕೆಲವು ಕುಟುಂಬಗಳು ಇಂದಿಗೂ ಸಹ ಆಧಾರ ಕಾರ್ಡ್ ಪಡೆದಿಲ್ಲ. ಹಾಗೆಯೇ ಕೆಲವು ಕುಟುಂಬಗಳಲ್ಲಿ ಪಡಿತರ ಚೀಟಿ ಕೂಡ ಇಲ್ಲ. ಇಂತಹ ಕುಟುಂಬಗಳಿಗೆ ಐಟಿಡಿಪಿ ಇಲಾಖೆ ಜೊತೆಗೂಡಿ ಆಧಾರ್ ಕಾರ್ಡ್ ನೋಂದಣಿ ಮಾಡಿಸುವಂತೆ ಆಧಾರ್ ಕಾರ್ಡ್ ಮಾಡಿಸುವಂತಾಗಬೇಕು ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು.

ಸಮೀಕ್ಷೆ ವೇಗ ಹೆಚ್ಚಲಿ:

ಸಮೀಕ್ಷೆ ಸಂದರ್ಭದಲ್ಲಿ ಪ್ರಮುಖವಾಗಿ ಆಧಾರ್ ಕಾರ್ಡ್, ಪಡಿತರ ಚೀಟಿ, ವಿದ್ಯುತ್ ಸಂಪರ್ಕ ಹಾಗೂ ಮೊಬೈಲ್ ಸಂಪರ್ಕ ಇಲ್ಲದ ಕಡೆಗಳಲ್ಲಿ ಹೆಚ್ಚಿನ ಗಮನಹರಿಸುವುದು ಅತ್ಯಗತ್ಯವಾಗಿದೆ. ದಸರಾ ರಜಾ ವೇಳೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಯುವುದರಿಂದ ಸೆ.22 ಆರಂಭದಲ್ಲಿಯೇ ಸಮೀಕ್ಷೆಯ ವೇಗವನ್ನು ಹೆಚ್ಚಿಸಬೇಕು. ಪ್ರತೀ ನಾಗರಿಕ ಕುಟುಂಬವನ್ನು ಸಮೀಕ್ಷೆಗೆ ಒಳಪಡಿಸಬೇಕು ಎಂದು ಹೇಳಿದರು.

ಸಮೀಕ್ಷೆ ನಂತರ ಬೇಕಂತಲೇ ಸಮೀಕ್ಷೆಗೆ ಬಂದಿಲ್ಲ ಎಂಬ ದೂರುಗಳು ಸಹ ಬರುತ್ತವೆ. ಆದ್ದರಿಂದ ಈ ಬಗ್ಗೆ ಎಚ್ಚರವಹಿಸಬೇಕು. ಶೇ.100ರಷ್ಟು ಸಮೀಕ್ಷೆ ನಡೆಸುವುದರ ಜೊತೆಗೆ ಡೂಪ್ಲಿಕೇಟ್(ನಕಲು) ಆಗದಂತೆಯೂ ಸಹ ಎಚ್ಚರವಹಿಸಬೇಕು. ಸಮೀಕ್ಷೆ ಸಂದರ್ಭ ಸುಮಾರು 60 ಪ್ರಶ್ನಾವಳಿಗಳಿದ್ದು, ಕುಟುಂಬಗಳಿಂದ ಮಾಹಿತಿ ಪಡೆದು ಆ್ಯಪ್ ಮೂಲಕವೇ ಸಮೀಕ್ಷೆ ಮಾಡಲಾಗುತ್ತದೆ ಎಂದರು.

ಜಿ.ಪಂ. ಸಿಇಒ ಆನಂದ್ ಪ್ರಕಾಶ್ ಮೀನಾ ಮಾತನಾಡಿ, ಜಿಲ್ಲೆಯ ಎಲ್ಲ ಮನೆಗಳ ವಿದ್ಯುತ್ ಮೀಟರ್ ರೀಡರ್‌ಗಳಿಂದ ಕುಟುಂಬಗಳ ಪಟ್ಟಿ ಮಾಡಿ ಈ ಕುರಿತು ಮನೆಗಳಿಗೆ ಜಿಯೋ ಟ್ಯಾಗ್ ಸ್ಟಿಕ್ಕರ್‌ಗಳನ್ನು ಅಳವಡಿಸುವ ಕಾರ್ಯವನ್ನು ಶೀಘ್ರ ಪೂಣಗೊಳಿಸುವಂತೆ ಸೂಚಿಸಿದರು.

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯವು ಸೆ.22 ರಿಂದ ಅ.7ರ ವರೆಗೆ ನಡೆಯಲಿದೆ. ಸಮೀಕ್ಷೆಗಾಗಿ ವಿಶೇಷ ಆ್ಯಪ್ ನಿಗದಿಪಡಿಸಲಾಗಿದೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಮಾತನಾಡಿ, ಜಿಲ್ಲಾ ಹಂತದಲ್ಲಿ ಆಯ್ಕೆ ಮಾಡಿದ್ದ ಮಾಸ್ಟರ್ ಟ್ರೈನರ್ ತರಬೇತಿ ನೀಡುತ್ತಿದ್ದು, ಸಂಶಯಗಳಿದ್ದಲ್ಲಿ ಮೇಲಾಧಿಕಾರಿಗಳ ಗಮನಕ್ಕೆ ತರುವಂತಾಗಬೇಕು ಎಂದು ಸಲಹೆ ನೀಡಿದರು.

ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ದೀಪಕ್ ಮಾಹಿತಿ ನೀಡಿ, ಸಮೀಕ್ಷೆಯಲ್ಲಿ 150 ಕುಟುಂಬಕ್ಕೆ ಒಬ್ಬ ಸಮೀಕ್ಷೆದಾರರನ್ನು ನೇಮಿಸಲಾಗುತ್ತದೆ ಎಂದರು.

ಈಗಾಗಲೇ ಪ್ರತೀ ಕುಟುಂಬಕ್ಕೂ ಸಾಮಾಜಿಕ ಮತ್ತು ಶೈಕ್ಷಣಿಕ ಸಂಬಂಧ ಮನೆಮನೆಗೆ ಸ್ಟಿಕ್ಕರ್ ಅಳವಡಿಸಿಕೊಂಡು ಬರಲಾಗುತ್ತಿದ್ದು, ಶೇ.75ರಷ್ಟು ಪ್ರಗತಿ ಸಾಧಿಸಲಾಗಿದೆ. ಉಳಿದಂತೆ ಸ್ಟಿಕ್ಕರ್‌ಗಳನ್ನು ಅಳವಡಿಸುವ ಕಾರ್ಯ ಮುಂದುವರಿದಿದೆ ಎಂದು ಹೇಳಿದರು.

ಮಾಸ್ಟರ್ ತರಬೇತಿದಾರರಾದ ಪ್ರಸನ್ನ, ಕೃಷ್ಣಮೂರ್ತಿ, ಜೀವನ್ ಕುಮಾರ್, ನಾರಾಯಣ, ಗುರುಸ್ವಾಮಿ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಸಂಬಂಧ ಆ್ಯಪ್ ಮೂಲಕ ಸಮೀಕ್ಷೆ ನಡೆಸುವ ಬಗ್ಗೆ ವಿವರಿಸಿದರು.

ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಸವರಾಜು, ತಹಸೀಲ್ದಾರ್ ಪ್ರವೀಣ್ ಕುಮಾರ್, ಶ್ರೀಧರ, ಕಿರಣ್ ಗೌರಯ್ಯ, ಕೃಷ್ಣಮೂರ್ತಿ, ಮೋಹನ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಹೇಶ್, ಆನಂದ, ಕೃಷ್ಣಪ್ಪ, 30 ಮಂದಿ ಮಾಸ್ಟರ್ ತರಬೇತಿದಾರರು, ತಾ.ಪಂ. ಇಒಗಳು, ಇತರರು ಇದ್ದರು.