ಉಡುಪಿ ಜಿಲ್ಲೆ ಆರೋಗ್ಯ ಕೇಂದ್ರಗಳಿಗೆ ಸೌರ ಬೆಳಕು!

| Published : Aug 12 2024, 01:07 AM IST

ಸಾರಾಂಶ

ವಿದ್ಯುತ್ ವ್ಯತ್ಯಯದಿಂದ ಗ್ರಾಮೀಣ ಭಾಗದ ರೋಗಿಗಳಿಗೆ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಯಾವುದೇ ತೊಂದರೆಯಾಗಬಾರದು ಎನ್ನುವುದೇ ಈ ಸಂಸ್ಥೆಗಳ ಮೂಲೊದ್ದೇಶ. 2021ರಲ್ಲಿ ಆರಂಭಗೊಂಡ ಈ ಅಭಿಯಾನ 2024ರ ಸ್ವಾತಂತ್ರ್ಯೋತ್ಸವಕ್ಕೆ ಪೂರ್ಣಗೊಳಿಸುವ ಗುರಿಹೊಂದಿತ್ತು.

ರಾಂ ಅಜೆಕಾರು

ಕನ್ನಡಪ್ರಭ ವಾರ್ತೆ ಕಾರ್ಕಳಸ್ವಾತಂತ್ರ್ಯೋತ್ಸವ ಆಚರಣೆಗೆ ಎಲ್ಲೆಡೆ ತಯಾರಿ ಭರದಿಂದ ನಡೆಯುತ್ತಿದ್ದು, ಸ್ವಾತಂತ್ರ್ಯ ದಿನವನ್ನು ವಿಶೇಷವಾಗಿ ಆಚರಿಸಲು ಸಂಸ್ಥೆಯೊಂದು ಮುಂದಾಗಿದೆ. ಹೌದು, ಸೆಲ್ಕೋ ಸೋಲಾರ್ ಸಂಸ್ಥೆ, ಸ್ಥಳೀಯ ಸಂಸ್ಥೆಗಳ ಸಹಕಾರದಲ್ಲಿ ಜಿಲ್ಲೆಯ ಒಟ್ಟು 61 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸೋಲಾರ್ ಅಳವಡಿಸಿ ಜನಮೆಚ್ಚುಗೆಗೆ ಪಾತ್ರವಾಗಿದೆ.

ಮಳೆಗಾಲದಲ್ಲಿ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿರುವ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಸಾಮಾನ್ಯ. ವಿದ್ಯುತ್ ವ್ಯತ್ಯಯದಿಂದ ಗ್ರಾಮೀಣ ಭಾಗದ ರೋಗಿಗಳಿಗೆ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಯಾವುದೇ ತೊಂದರೆಯಾಗಬಾರದು ಎನ್ನುವುದೇ ಈ ಸಂಸ್ಥೆಗಳ ಮೂಲೊದ್ದೇಶ. 2021ರಲ್ಲಿ ಆರಂಭಗೊಂಡ ಈ ಅಭಿಯಾನ 2024ರ ಸ್ವಾತಂತ್ರ್ಯೋತ್ಸವಕ್ಕೆ ಪೂರ್ಣಗೊಳಿಸುವ ಗುರಿಹೊಂದಿತ್ತು.

* ಸ್ಥಳೀಯ ಸಂಸ್ಥೆಗಳ ಸಹಕಾರ: ರಾಜ್ಯಕ್ಕೆ ಉಡುಪಿ ಮೊದಲು

ಉಡುಪಿ ಜಿಲ್ಲೆಯಲ್ಲಿ ಸ್ಥಳೀಯ ಖಾಸಗಿ ಸಂಸ್ಥೆಗಳ ಸಹಯೋಗದೊಂದಿಗೆ ರಾಜ್ಯದಲ್ಲೇ ಮೊದಲ ಬಾರಿಗೆ ಬೃಹತ್‌ ಪ್ರಮಾಣದಲ್ಲಿ ಸೋಲಾರ್ ಅಳವಡಿಕೆ ಮಾಡಲಾಗಿದೆ. ಒಟ್ಟು ಖರ್ಚಿನ ಶೆ.50 ಹಣವನ್ನು ಸೆಲ್ಕೋ ಸೋಲಾರ್ ಒದಗಿಸುತ್ತಿದ್ದು, ಉಳಿದ ಹಣವನ್ನು ಜಿಲ್ಲೆಯ 17 ಸಂಘ ಸಂಸ್ಥೆಗಳು ನೀಡುತ್ತದೆ. ಟಿಎಂಜಿ ಸುನಿಧಿ ಫೌಂಡೇಶನ್ ಮಣಿಪಾಲ, ಕ್ಯಾನ್ ಫಿನ್ ಹೋಮ್ಸ್‌, ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಎಆ‌ರ್‌ಎಸ್ ಕಮಿಟಿ ಬೆಳ್ವೆ ಮತ್ತು ಶಂಕರ ನಾರಾಯಣ, ರೋಬೊಸಾಫ್ಟ್‌ ಸಂತೆಕಟ್ಟೆ, ಇನ್‌ವೆಂಜರ್ ಟೆಕ್ನಾಲಜೀಸ್ ಕಟಪಾಡಿ, ಕೆ.ಎಂ.ಉಡುಪ ಫೌಂಡೇಶನ್ ಮಂದಾರ್ತಿ, ಕುಸುಮ ಫೌಂಡೇಶನ್, ರೋಟರಿ ಕ್ಲಬ್ ಸಂತೆಕಟ್ಟೆ, ಬ್ರಾಹ್ಮೀ ದುರ್ಗಾ ಪರಮೇಶ್ವರಿ ದೇವಸ್ಥಾನ ಕಮಲಶಿಲೆ, ಕೆ.ಸಿ. ಹೆಗ್ಡೆ ಫ್ಯಾಮಿಲಿ, ಹಟ್ಟಿಯಂಗಡಿ ಸಿದ್ದಿವಿನಾಯಕ ಶಾಲೆ, ಡಾ.ನವೀನ್ ಬಳ್ಳಾಲ್ ಅಂಬಲಪಾಡಿ ಸ್ಕ್ಯಾನಿಂಗ್ ಸೆಂಟರ್, ರೋಟರಿ ಸಂಸ್ಥೆಗಳು, ಅಸ್ಪೆನ್ ಇನ್ಫ್ರಾ ಪಡುಬಿದ್ರಿ ಈ ಮೊದಲಾದ ಸಂಸ್ಥೆಗಳು ಈ ಸಕಾರ್ಯದಲ್ಲಿ ಸಹಕರಿಸುತ್ತಿವೆ.* 61 ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಳವಡಿಕೆ:

ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರವೊಂದಕ್ಕೆ ಸೋಲಾರ್‌ ಅಳವಡಿಸಲು 5 ಲಕ್ಷ ರು. ವೆಚ್ಚವಾಗುತ್ತಿದೆ. ಈಗಾಗಲೇ ಉಡುಪಿ ಜಿಲ್ಲೆಯ 52 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 1 ಉಪ ಆರೋಗ್ಯ ಕೇಂದ್ರ, 1 ಆಯುರ್ವೇದ ಸೆಂಟರ್, 1 ಜಿಲ್ಲೆಯ ಮುಖ್ಯ ಮಲೇರಿಯಾ ಸೆಂಟರ್‌ಗೆ ಅಳವಡಿಸಲಾಗಿದೆ. ಉಳಿದ 6 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸ್ವಾತಂತ್ರ್ಯೋತ್ಸವಕ್ಕೆ ಮುನ್ನ ಸೋಲಾರ್ ಅಳವಡಿಕೆ ಅಂತಿಮವಾಗಲಿದೆ. ಜಿಲ್ಲೆಯ ಒಟ್ಟು 61 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸ್ವಾತಂತ್ರ್ಯೋತ್ಸವದಂದು ಸೋಲಾರ್ ಅಳವಡಿಕೆ ಪೂರ್ಣಗೊಳ್ಳಲಿದೆ.* 2021ರಲ್ಲಿ ಅಭಿಯಾನ ಆರಂಭ:

2021ರಲ್ಲಿ ಉಡುಪಿ ಜಿಲ್ಲೆಯ ಅಂದಿನ ಜಿಲ್ಲಾ ಆರೋಗ್ಯಾಧಿಕಾರಿಯಾಗಿದ್ದ ಡಾ.ನಾಗಭೂಷಣ ಉಡುಪ, ಸೆಲ್ಕೋ ಇಂಡಿಯಾ ಸಂಸ್ಥೆಯ ಈ ಕ್ರಾಂತಿಗೆ ಮುನ್ನುಡಿ ಬರೆದರು. ಹಳ್ಳಿಹೊಳೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೊದಲು ಸೊಲಾರ್ ಅಳವಡಿಕೆ ಅಭಿಯಾನ ಆರಂಭಗೊಂಡಿತು. 2024ರ ಸ್ವಾತಂತ್ರ್ಯೋತ್ಸವಕ್ಕೆ ಈ ಯೋಜನೆಯನ್ನು ಪೂರ್ಣಗೊಳಿಸುವ ಗುರಿ ಹೊಂದಿತ್ತು.

2021ರ ಕೊರೋನಾ ಕಾಲಘಟ್ಟದಲ್ಲಿ ಸೋಲಾರ್ ಆಧರಿತ ಕಿಯೋಸ್ಕ್ ಸ್ವಾಬ್ ಕಲೆಕ್ಷನ್ ಸೆಂಟರ್ ಹಾಗೂ ಸೋಲಾರ್ ಆಧರಿತ ಮೊಬೈಲ್ ಸ್ವಾಬ್ ಕಲೆಕ್ಷನ್ ಸೆಂಟರನ್ನು ಸೆಲ್ಕೋ ಸೋಲಾರ್ ರೂಪಿಸಿತ್ತು.

* ವಿದ್ಯುತ್ ವೆಚ್ಚ ಉಳಿತಾಯ

ಸೋಲಾರ್ ಅಳವಡಿಕೆ ಮೊದಲು 61 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ತಿಂಗಳೊಂದಕ್ಕೆ ಐದು ಲಕ್ಷ ರು.ಗೂ ಹೆಚ್ಚು ವಿದ್ಯುತ್ ಬಿಲ್ ಮೆಸ್ಕಾಂಗೆ ಪಾವತಿಯಾಗುತಿತ್ತು. ಆದರೆ ಈಗ ಸೋಲಾರ್ ಅಳವಡಿಕೆಯಿಂದ ಲಕ್ಷಾಂತರ ರು. ಉಳಿತಾಯವಾಗಲಿದೆ. ದಿನದ 24 ಗಂಟೆ ವಿದ್ಯುತ್ ಪೂರೈಕೆಯಾಗಲಿದೆ.

* ಇಡೀ ರಾಜ್ಯದಲ್ಲಿ ವಿಸ್ತರಣೆ:

ರಾಜ್ಯದಲ್ಲಿರುವ 2500 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪೈಕಿ 1152 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸೆಲ್ಕೋ ಫೌಂಡೇಶನ್ ಹಾಗೂ ರಾಜ್ಯ ಸರ್ಕಾರ ಸಹಯೊಗದಲ್ಲಿ ಸೋಲಾರ್ ವ್ಯವಸ್ಥೆ ಕಲ್ಪಿಸುವ ಯೋಜನೆ ಹಾಖಿಕೊಳ್ಳಲಾಗಿದೆ. ಮಧ್ಯ ಕರ್ನಾಟಕ, ಕಲ್ಯಾಣ ಕರ್ನಾಟಕ, ಮುಂಬೈ ಕರ್ನಾಟಕದ ಭಾಗಗಳಲ್ಲಿ ರಾಜ್ಯ ಸರ್ಕಾರ ಹಾಗೂ ಸೆಲ್ಕೋ ಸೋಲಾರ್ ಜಂಟಿ ಸಹಯೋಗದಲ್ಲಿ ಸೋಲಾರ್ ಅಳವಡಿಕೆ ಮಾಡಲಾಗುತ್ತಿದ್ದು, ಒಟ್ಟು 18 ಜಿಲ್ಲೆಗಳಲ್ಲಿ ಈಗಾಗಲೇ ಈ ಅಭಿಯಾನ ಯಶಸ್ವಿಯಾಗಿದೆ. ಉಳಿದ ಜಿಲ್ಲೆಗಳಲ್ಲಿ 2027ರಲ್ಲಿ ಪೂರ್ಣಗೊಳಿಸಲಾಗುತ್ತದೆ.

----------ಹಳ್ಳಿಹೊಳೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರಂಭಗೊಂಡ ಅಭಿಯಾನ ಇಂದು ಉಡುಪಿ ಜಿಲ್ಲೆಯ ಒಟ್ಟು 61 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೋಲಾರ್ ಮೂಲಕ ಬೆಳಕಾಗಿರುವುದು ಖುಷಿ ತಂದಿದೆ. ಸೆಲ್ಕೋ ಸೋಲಾರ್ ಹಾಗೂ ಇತರ ಸಂಘ ಸಂಸ್ಥೆಗಳ ಸೇವಾ ಕಾರ್ಯ ಮೆಚ್ಚುವಂಥದ್ದು.

। ಡಾ.ನಾಗಭೂಷಣ ಉಡುಪ, ನಿಕಟಪೂರ್ವ ಜಿಲ್ಲಾ ವೈದ್ಯಾಧಿಕಾರಿ-----------

ಸೆಲ್ಕೋ ಇಂಡಿಯಾ ಫೌಂಡೇಶನ್, ಸೇವಾ ಸಂಸ್ಥೆಗಳ ಸಹಕಾರದಿಂದ ಉಡುಪಿ ಜಿಲ್ಲೆಯ 58 ಪ್ರಾಥಮಿಕ ಆರೋಗ್ಯ ಕೇಂದ್ರ, 1 ಆರೋಗ್ಯ ಉಪಕೇಂದ್ರ, 1 ಆಯುರ್ವೇದಿಕ್ ಸೆಂಟರ್, 1 ಮಲೇರಿಯಾ ಸೆಂಟರ್‌ಗಳಲ್ಲಿ ಸೋಲಾರ್‌ ಅಳವಡಿಸಿದೆ. ಇದರಿಂದ ವಿದ್ಯುತ್ ಪೂರೈಕೆಯಲ್ಲಿ ಅಡಚಣೆಯಾಗುವುದಿಲ್ಲ. ಗ್ರೀನ್ ಎನರ್ಜಿ ಸ್ವಾತಂತ್ರ್ಯೊತ್ಸವದ ಉಡುಗೊರೆಯಾಗಿದೆ.

। ಡಾ.ಗಡಾಹದ್, ಜಿಲ್ಲಾ ಆರೋಗ್ಯಾಧಿಕಾರಿ, ಉಡುಪಿ

---------

ಸೌರಶಕ್ತಿ ಮಾನವ ಪ್ರಕೃತಿಗೆ ಪೂರಕವಾಗಿ ಬದುಕಲು ಸಹಕಾರಿಯಾಗಿದೆ. 2021ರಲ್ಲಿ ಆರೋಗ್ಯ ಕೇಂದ್ರಗಳಲ್ಲಿ ಸೋಲಾರ್‌ ಅಳವಡಿಕೆ ಅಭಿಯಾನವನ್ನು ಆರಂಭಿಸಿದ್ದು, 2024ರ ಸ್ವಾತಂತ್ರ್ಯೋತ್ಸವಕ್ಕೆ ಪೂರ್ಣಗೊಳಿಸುವ ಗುರಿ ಹೊಂದಲಾಗಿತ್ತು.

। ಗುರುಪ್ರಕಾಶ್ ಶೆಟ್ಟಿ, ಡಿಜಿಎಂ ಸೆಲ್ಕೋ ಸೋಲಾರ್

---------ಎನರ್ಜಿ ಫಾರ್ ಹೆಲ್ತ್ ಕಾರ್ಯಕ್ರಮವದ ಮೂಲಕ ಜನರ ಆರೋಗ್ಯ ಕಾಪಾಡಲು ಸೆಲ್ಕೋ ಮುಂದಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಗುಣಮಟ್ಟದ ಆರೋಗ್ಯ ನೀಡಲು, ಆರೋಗ್ಯ ಕೇಂದ್ರಗಳ ಮೆಲ್ದರ್ಜೆಗೆ ಏರಿಸಲು ಸೋಲಾರ್ ಘಟಕಗಳು ಸಹಕಾರಿ.

। ಮೋಹನ್ ಭಾಸ್ಕರ ಹೆಗ್ಡೆ, ಸಿಇಒ ಸೆಲ್ಕೋ