ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಸರ್ಕಾರದ ವಿವಿಧ ಯೋಜನೆಗಳು ಹಾಗೂ ಇಲಾಖೆಗಳ ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಿ, ಸಾರ್ವಜನಿಕರ ಸಮಸ್ಯೆಗಳಿಗೆ ಕಾಲಮಿತಿಯೊಳಗೆ ಪರಿಹಾರ ಕಲ್ಪಿಸುವುದು ಪ್ರಜಾಸೇವಾ ಅಭಿಯಾನದ ಉದ್ದೇಶವಾಗಿದೆ. ಮುಖ್ಯಮಂತ್ರಿ ಅವರ ಆಶಯದಂತೆ ಜನರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿ ಗ್ರಾಮದಲ್ಲಿಯೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಶಾಸಕ ಉಮೇಶ ಮೇಟಿ ಹೇಳಿದರು.ಬಾಗಲಕೋಟೆ ತಾಲೂಕಿನ ಸುತಗುಂಡಾರ ಗ್ರಾಮದ ಕರವೀರೇಶ್ವರ ಪ್ರೌಢಶಾಲೆ ಆವರಣದಲ್ಲಿ ಪ್ರಜಾ ಸೇವಾ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪಿಂಚಣಿ, ಅಂಗವಿಕಲರ ಸೌಲಭ್ಯ, ವಸತಿ ಯೋಜನೆ, ಪಡಿತರ ಚೀಟಿ, ಜಮೀನಿನ ದಾಖಲೆ, ಖಾತೆ ಬದಲಾವಣೆ, ರಸ್ತೆ ದುರಸ್ತಿ, ಕುಡಿಯುವ ನೀರು, ಸರ್ಕಾರಿ ಶಾಲೆಗಳ ದುರಸ್ತಿ, ಉದ್ಯೋಗ ಹಾಗೂ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಸೇರಿ ವಿವಿಧ ಸರ್ಕಾರಿ ಯೋಜನೆಗಳಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಸಾರ್ವಜನಿಕರು ಅರ್ಜಿ ಸಲ್ಲಿಸಬಹುದು. ಸ್ವೀಕರಿಸಿದ ಅರ್ಜಿಗಳನ್ನು ಸಂಬಂಧಿಸಿದ ಇಲಾಖೆಗಳ ಮೂಲಕ ಪರಿಶೀಲಿಸಿ, ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಬಾಗಲಕೋಟೆ ಉಪವಿಭಾಗಾಧಿಕಾರಿ ಮಹೇಶ ಮಾಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಜಾಸೇವಾ ಅಭಿಯಾನ ಉದ್ದೇಶ, ಅರ್ಜಿ ಸಲ್ಲಿಸುವ ವಿಧಾನ ಹಾಗೂ ಅರ್ಜಿಗಳ ವಿಲೇವಾರಿ ಪ್ರಕ್ರಿಯೆ ಕುರಿತು ಮಾಹಿತಿ ನೀಡಿದರು. ಸಾರ್ವಜನಿಕರು ಸಲ್ಲಿಸುವ ಅರ್ಜಿಗಳನ್ನು ಸಂಬಂಧಿಸಿದ ಅಧಿಕಾರಿಗಳು ಪರಿಶೀಲಿಸಿ, ವಿವಿಧ ಹಂತಗಳಲ್ಲಿ ಮೇಲ್ವಿಚಾರಣೆ ನಡೆಸುವ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ವಿವರಿಸಿದರು.ತಹಸೀಲ್ದಾರ್ ವಾಸುದೇವ ಸ್ವಾಮಿ, ತಾಪಂ ಇಒ ಸುಭಾಷ ಸಂಪಗಾವಿ, ಜಿಪಂ ಮಾಜಿ ಅಧ್ಯಕ್ಷ ಬಸವಂತಪ್ಪ ಮೇಟಿ, ಬಾಗಲಕೋಟೆ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಸ್.ಎನ್. ರಾಂಪುರ, ರಮೇಶ ಸುಳಿಕೇರಿ, ಜಟೆಪ್ಪ ಮಾದಾಪುರ, ರಾಯಪ್ಪ ವಾಲಿಕಾರ, ಶ್ರೀಕರ್ ದೇಸಾಯಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.