ಸಾರಾಂಶ
ಅರಸೀಕೆರೆ: ಕ್ಷೇತ್ರದ ನಾಗರಿಕರು ಹಾಗೂ ರೈತರ ಹತ್ತಾರು ಸಮಸ್ಯೆಗಳನ್ನು ಶೀಘ್ರವಾಗಿ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಬಗೆಹರಿಸುವಂತೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಜನ ಸಂಪರ್ಕ ಸಭೆಯಲ್ಲಿ ಖಡಕ್ ಸೂಚನೆ ನೀಡಿದರು.
ನಗರದ ತಾಲೂಕು ಸಂಭಾಗಣದಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ರೈತರು , ಹಿರಿಯ ನಾಗರಿಕರು ,ಮಹಿಳೆಯರು ತಮ್ಮ ಸಮಸ್ಯೆಗಳ ಇತ್ಯರ್ಥಕ್ಕಾಗಿ ಸರತಿ ಸಾಲಿನಲ್ಲಿ ನಿಂತು ಅರ್ಜಿಗಳನ್ನು ಸಲ್ಲಿಸಿದರು. ಹಕ್ಕು ಪತ್ರ ವಿತರಣೆ, ವನ್ಯಜೀವಿಗಳ ಹಾವಳಿ, ಸರ್ಕಾರದ ಸೌಲಭ್ಯಗಳು, ವಿದ್ಯುತ್ ಸಮಸ್ಯೆ , ಜೆಜೆಎಂ ವ್ಯವಸ್ಥೆ, ಸರ್ಕಾರಿ ಜಮೀನುಗಳಲ್ಲಿ ರೈತರ ಸಾಗುವಳಿ ಜಮೀನು ,ಗ್ರಾಪಂಗಳ ವ್ಯಾಪ್ತಿಯಲ್ಲಿ ಮನೆ ಮಂಜೂರು, ಆಶ್ರಯ ಮನೆ ಹೀಗೆ ಹತ್ತಾರು ಸಮಸ್ಯೆಗಳ ಬಗ್ಗೆ ಬಗೆಹರಿಸುವಂತೆ ಮನವಿ ಸಲ್ಲಿಸಿದರು.ಶಾಸಕ ಕೆ.ಎಂ.ಶಿವಲಿಂಗೇಗೌಡ ಸಂಬಂಧಪಟ್ಟ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿ, ಬಗೆಹರಿಸುವ ಪ್ರಯತ್ನ ಮಾಡಿದರು. ಇನ್ನಿತರ ಅರ್ಜಿಗಳನ್ನು ತಿಂಗಳೊಳಗಾಗಿ ಬಗೆಹರಿಸುವುದಾಗಿ ಭರವಸೆ ನೀಡಿದರು.
ಗ್ರಾಮ ಪಂಚಾಯಿತಿ ಪಿಡಿಒ ಅಧಿಕಾರಿಗಳಿಗೆ ತಮ್ಮ ಕೆಲಸವನ್ನು ದಕ್ಷತೆಯಿಂದ ಪ್ರಾಮಾಣಿಕವಾಗಿ ನಿರ್ವಹಿಸಲು ಸೂಚನೆ ನೀಡಿದರು. ಅರಣ್ಯ ಇಲಾಖೆಯವರು ಪ್ರಾಣಿಗಳಿಗೆ ಕುಡಿಯುವ ನೀರಿಗಾಗಿ ಹೊಂಡಗಳನ್ನು ನಿರ್ಮಿಸಲು ಕಾಡುಗಳಲ್ಲಿ ಪ್ರಾಣಿಗಳಿಗೆ ಬೇಕಾದ ಮೇವು ,ಹಣ್ಣುಗಳನ್ನು ಬೆಳೆಯಲು ಸಲಹೆ ನೀಡಿದರು.ಪ್ರತಿ ತಿಂಗಳು ಜನ ಸಂಪರ್ಕ ನಡೆಸುವುದಾಗಿ ಸಾರ್ವಜನಿಕರು ತಮ್ಮ ಕುಂದುಕೊರತೆಗಳನ್ನು ಮುಕ್ತವಾಗಿ ನಮ್ಮೊಂದಿಗೆ ಹಂಚಿಕೊಳ್ಳಬೇಕು. ಸಂಬಂಧಪಟ್ಟ 28 ಇಲಾಖೆಗಳ ಅಧಿಕಾರಿಗಳು ,ತಹಸೀಲ್ದಾರ್, ಗ್ರಾಪಂ ಅಧ್ಯಕ್ಷರು ,ಸದಸ್ಯರು , ನೌಕರರು ಸಭೆಯಲ್ಲಿ ಹಾಜರು ಇರುತ್ತಾರೆ. ಕೆಲವೊಂದು ಅರ್ಜಿಗಳು ಈ ತಿಂಗಳು ಇತ್ಯರ್ಥವಾಗದಿದ್ದರೆ ಮುಂದಿನ ತಿಂಗಳು ಅಂತಹ ಅರ್ಜಿಗಳಿಗೆ ಪ್ರಾಮುಖ್ಯತೆ ನೀಡಲಾಗುವುದು. ಸಭೆಯಲ್ಲಿ ವೈಯಕ್ತಿಕ ಸಮಸ್ಯೆಗಳ ಜತೆಗೆ ಗ್ರಾಮದ ಅಭಿವೃದ್ಧಿಗಳ ಬಗ್ಗೆ ಮಾಹಿತಿ ನೀಡಬೇಕು. ಸಾರ್ವಜನಿಕರು ಸಭೆಯನ್ನು ಸದುಪಯೋಗಪಡೆಸಿಕೊಳ್ಳಬೇಕು. ರಾಜ್ಯದಲ್ಲೇ ಮಾದರಿ ಕ್ಷೇತ್ರವಾಗಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ಹೇಳಿದರು.
ನಗರದ ಗುಂಡ್ಕನಹಳ್ಳಿ ಗ್ರಾಮ ಸೇರಿದಂತೆ ಕೆಲವು ಗಡಿ ಪ್ರದೇಶಗಳನ್ನು ನಗರಸಭೆಗೆ ಸೇರಿಸಲು ಮನವಿ ಸ್ವೀಕರಿಸಿ ಬೋರ್ಡ್‌ಮೀಟಿಂಗ್‌ನಲ್ಲಿ ಪ್ರಸ್ಥಾಪಿಸಿ ಸೇರಿಸುವುದಾಗಿ ನಗರಸಭಾ ಅಧ್ಯಕ್ಷ ಎಂ.ಸಮ್ಮಿವುಲ್ಲಾ ತಿಳಿಸಿದರು.ಸಭೆಯಲ್ಲಿ ತಹಸೀಲ್ದಾರ್ ಸಂತೋಷ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ಕುಮಾರ್, ತಾಪಂ ಕಾರ್ಯನಿರ್ವಹಣಾಧಿಕಾರಿ ಸತೀಶ್, ಮಾಡಾಳು ಗ್ರಾಪಂ ಅಧ್ಯಕ್ಷ ಯೋಗೀಶ್ , ಮುರುಂಡಿ ಗ್ರಾಪಂ ಅಧ್ಯಕ್ಷ ಗುರುಸಿದ್ದಪ್ಪ ,ಪೌರಯುಕ್ತ ಕೃಷ್ಣಮೂರ್ತಿ, ಉಪಾಧ್ಯಕ್ಷ ಮನೋಹರ್ ಮೇಸ್ತ್ರಿ ಹಾಗೂ ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು, ಗ್ರಾಪಂ ಅಧ್ಯಕ್ಷರು, ಸದಸ್ಯರು ಇದ್ದರು.