ವಿಶೇಷ ಪ್ರಾರ್ಥನೆ,ಪರ್ಜನ್ಯ ಜಪದಲ್ಲಿ ಪಾಲ್ಗೊಂಡ ಶಾಸಕ ಟಿ.ಡಿ.ರಾಜೇಗೌಡ

- ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್,

ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಸೂಚನೆ

- ಸೋಲಾರ್, ವಿಂಡ್ ಇತರೆ ಮೂಲಗಳಿಂದ ವಿದ್ಯುತ್‌ಗೆ ಪರ್ಯಾಯ ವ್ಯವಸ್ಥೆ

ಕನ್ನಡಪ್ರಭ ವಾರ್ತೆ, ಶೃಂಗೇರಿ


ಮಲೆನಾಡಿನ ಪ್ರಸಿದ್ಧ ಮಳೆದೇವರು ಶೃಂಗೇರಿ ತಾಲೂಕಿನ ಕಿಗ್ಗಾ ಶ್ರೀ ಋಷ್ಯಶೃಂಗೇಶ್ವರ ದೇವಾಲಯದಲ್ಲಿ ಶುಕ್ರವಾರ ಮಳೆಗಾಗಿ ಶಾಸಕ ಟಿ.ಡಿ.ರಾಜೇಗೌಡ ವಿಶೇಷ ಪೂಜೆ ಸಲ್ಲಿಸಿ ದೇವರಲ್ಲಿ ಪ್ರಾರ್ಥಿಸಿದರು.

ಬೆಳಿಗ್ಗೆ ದೇವಾಲಯಕ್ಕೆ ಆಗಮಿಸಿದ ಶಾಸಕರು ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ವೇಳೆ ವಿಶೇಷ ಪೂಜೆ ಸಹಿತ ಪರ್ಜನ್ಯ ಜಪ ನೆರವೇರಿತು. ಮಳೆ ಬೆಳೆ, ನಾಡಿನ ಸಮೃದ್ಧಿಗಾಗಿ ಶಾಸಕರು ಪ್ರಾರ್ಥನೆ ಮಾಡಿದರು. ರಾಜ್ಯದಲ್ಲಿ ವಿದ್ಯುತ್ ಕೊರತೆ ನೀಗಿಸಲು ಸರ್ಕಾರದಿಂದ ಪರ್ಯಾಯ ವ್ಯವಸ್ಥೆ: ಶಾಸಕ

ರಾಜ್ಯದಲ್ಲಿ ಈ ಬಾರಿ ಸಾಕಷ್ಟು ಮಳೆಯಿಲ್ಲದ ಕಾರಣ ಡ್ಯಾಂಗಳು ತುಂಬಿಲ್ಲ. ವಿದ್ಯುತ್ ಉತ್ಪಾದನೆಗೂ ಕೊರತೆಯಾಗಿದೆ. ಇದನ್ನು ನೀಗಿಸಲು ಸರ್ಕಾರದಿಂದ ಸೋಲಾರ್, ವಿಂಡ್ ಇತರೆ ಮೂಲಗಳಿಂದ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ವಿವರಿಸಿದರು.

ತಾಲೂಕಿನ ಕಿಗ್ಗಾದಲ್ಲಿ ಮಳೆಗಾಗಿ ವಿಶೇಷ ಪೂಜೆ ಸಲ್ಲಿಸಿದ ನಂತರ ಮಾತನಾಡಿದರು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ 2000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಚಾಲನೆ ನೀಡಿದ್ದಾರೆ. ಈಗಾಗಲೇ 600 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಅನುಮತಿ ಸಿಕ್ಕಿದೆ. ಸರ್ಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದೆ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಸೂಚನೆಯಂತೆ ಮಳೆ ದೇವರಲ್ಲಿ ವಿಶೇಷ ಪೂಜೆ,ಪರ್ಜನ್ಯ ಜಪ ನಡೆಸಲಾಗುತ್ತಿದೆ. ಈ ಹಿಂದೆ ಡಿ.ಕೆ.ಶಿವಕುಮಾರ್ ಅವರು ಡಿಸಿಎಂ ಆಗಿದ್ದಾಗ ಮಳೆಯಿಲ್ಲದೇ ರಾಜ್ಯದಲ್ಲಿ ಬರಗಾಲ ಉಂಟಾದ ಸಂದರ್ಭದಲ್ಲಿ ಇಲ್ಲಿಗೆ ಆಗಮಿಸಿ ಮಳೆಗಾಗಿ ವಿಶೇಷ ಪೂಜೆ, ಪರ್ಜನ್ಯ ಜಪ ನೆರವೇರಿಸಿದ್ದರು. ನಂತರ ರಾಜ್ಯದೆಲ್ಲೆಡೆ ಉತ್ತಮ ಮಳೆ ಸುರಿದಿತ್ತು ಎಂದು ಸ್ಮರಿಸಿದ ಅವರು ಈ ಭಾರಿ ನಿರೀಕ್ಷೆಯಂತೆ ಮಳೆ ಬಂದಿಲ್ಲ. ಮಲೆನಾಡಿನಲ್ಲಿಯೂ ಮಳೆ ಇಲ್ಲದೇ ರೈತರು, ಜನಸಾಮಾನ್ಯರು ಕಂಗಾಲಾಗಿದ್ದಾರೆ.

ನದಿಗಳಲ್ಲಿ ,ಡ್ಯಾಮ್ ಗಳಲ್ಲಿ ನೀರು ತುಂಬಿಲ್ಲ. ನೀರಿನ ಅಭಾವ ತಲೆದೋರುವ ಲಕ್ಷಣ ಹಾಗೂ ಮಳೆ ಅಭಾವದಿಂದ ಕಂಗಾಲಾಗಿರುವ ರೈತಾಪಿ ವರ್ಗ, ಜನತೆಗೆ ಮಳೆ ಬಂದು ಅನುಕೂಲವಾಗಲಿ. ಮಳೆ ಬೆಳೆ ಸಮೃದ್ಧಿಯಾಗಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ತಾಲೂಕು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ರಮೇಶ್ ಭಟ್, ಕೆಪಿಸಿಸಿ ವಕ್ತಾರ ಸುದೀರ್ ಕುಮಾರ್ ಮುರೋಳ್ಳಿ, ಸ್ಥಳೀಯ ಕಾಂಗ್ರೇಸ್ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

3 ಶ್ರೀ ಚಿತ್ರ 4-

ಶೃಂಗೇರಿ ಮಳೆ ದೇವರು ಕಿಗ್ಗಾ ಶ್ರೀ ಋಷ್ಯಶೃಂಗೇಶ್ವರ ದೇವಾಲಯ ಸನ್ನಿದಿಯಲ್ಲಿ ಶಾಸಕ ಟಿ.ಡಿ.ರಾಜೇಗೌಡ ವಿಶೇಷ ಪ್ರಾರ್ಥನೆ,ಪೂಜೆ ಸಲ್ಲಿಸಿದರು.