ಪ್ರೆಂಡ್ಸ್ ಕ್ರಿಕೆಟ್‌ ಕಪ್‌-2026 ಪಂದ್ಯಾವಳಿಗೆ ಚಾಲನೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಕ್ರೀಡಾಕೂಟಗಳು ಮನುಷ್ಯನ ಶಾರೀಕರ ಹಾಗೂ ದೈಹಿಕ ಚಟುವಟಿಕೆಗೆ ಸಹಕಾರಿ. ದಿನದ ಕೆಲವು ಗಂಟೆಗಳನ್ನು ದೈಹಿಕ ವ್ಯಾಯಾಮಕ್ಕೆ ಮೀಸಲಿಡುವುದು ಅತ್ಯಗತ್ಯ ಎಂದು ನಗರಸಭೆ ಪೌರಾಯುಕ್ತ ಬಿ.ಸಿ.ಬಸವರಾಜ್ ಹೇಳಿದರು.ನಗರದ ಎಐಟಿ ಕಾಲೇಜು ಆವರಣದಲ್ಲಿ ಭಾನುವಾರ ಪ್ರೆಂಡ್ಸ್ ಕ್ರಿಕೆಟ್‌ ಕಪ್‌-2026 ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ

ಕೆಲಸ ಹಾಗೂ ಇನ್ನಿತರೆ ಒತ್ತಡಗಳಿಂದ ಬದುಕುವ ಮನುಷ್ಯ ಕೆಲ ಸಮಯವನ್ನು ಕ್ರೀಡೆಗೆ ಮುಡಿಪಿಡಬೇಕು. ಕೇವಲ ಕೆಲಸ ಕ್ಕಾಗಿ ಬದುಕು ಮೀಸಲಿಟ್ಟರೆ, ಆರೋಗ್ಯ, ಅನಾರೋಗ್ಯವಾಗಿ ಪರಿಣಾಮಿಸಲಿದೆ. ಹೀಗಾಗಿ, ಪ್ರತಿಯೊಬ್ಬ ಮನುಷ್ಯನಿಗೆ ವ್ಯಾಯಮ ಎನ್ನುವುದು ಅತಿಮುಖ್ಯ ಎಂದರು.ಪೌರ ನೌಕರರ ಮಕ್ಕಳು ವಾರಕ್ಕೊಮ್ಮೆ ಈ ರೀತಿ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ. ಆದರೆ, ಕೆಲವು ಯುವಜನತೆ ವಾರದ ರಜೆಯಲ್ಲಿ ಮದ್ಯಪಾನ, ಧೂಮಪಾನದಂತಹ ಕೆಟ್ಟ ಚಟಗಳಿಗೆ ಬಲಿಯಾಗುತ್ತಿದ್ದು, ಇದು ಭವಿಷ್ಯದಲ್ಲಿ ಆರೋಗ್ಯದ ಮೇಲೆ ಅಡ್ಡಪರಿಣಾಮ ಬೀರಲಿದೆ ಎಂದರು.ನಗರಸಭೆ ಸದಸ್ಯ ಶಾದಮ್ ಆಲಂಖಾನ್ ಮಾತನಾಡಿ, ಭಾರತದಲ್ಲಿ ಕ್ರಿಕೆಟ್‌ ಅತ್ಯಂತ ಹೆಚ್ಚು ಮನ್ನಣೆ ಪಡೆದುಕೊಂಡಿರುವ ಕ್ರೀಡೆ. ದೇಶದ ಗಲ್ಲಿ ಗಲ್ಲಿಗಳಲ್ಲಿ ಕ್ರಿಕೆಟ್‌ ಅನ್ನು ಆಟವಾಡುವ ಯುವ ಸಮೂಹವಿದೆ. ಹೀಗಾಗಿ ಆಸಕ್ತಿ ಹೊಂದಿರುವ ಕ್ರೀಡಾಕ್ಷೇತ್ರದಲ್ಲಿ ಇಂದಿನ ಯುವಜನತೆ ಪಾಲ್ಗೊಳ್ಳಬೇಕು ಎಂದರು.ಪೌರ ನೌಕರರ ಸಂಘದ ಅಧ್ಯಕ್ಷ ಅಣ್ಣಯ್ಯ ಮಾತನಾಡಿದರು. ಈ ವೇಳೆ ಬಿಜೆಪಿ ಮುಖಂಡ ನವೀನ್, ವಿವಿಧ ಕ್ರಿಕೆಟ್‌ ನಾಯಕರು ಉಪಸ್ಥಿತರಿದ್ದರು.