ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ತಾಲೂಕಿನ ಜೋಳದಾಳು ಹಿರಿಯ ಪ್ರಾಥಮಿಕ ಶಾಲೆಯನ್ನು ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಲ್ಲಿ ಮೈಲಿಮನೆ ಗ್ರಾಮ ಪಂಚಾಯಿತಿ ಶಾಲೆಗೆ ಸಂಯೋಜನೆ ಮಾಡಿ ಮುಚ್ಚಲಾಗುತ್ತಿದೆ ಎಂದು ಆರೋಪಿಸಿ ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ಗ್ರಾಮಸ್ಥರು ಜೋಳದಾಳು ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು.ಪ್ರತಿಭಟನೆ ಉದ್ದೇಶಿಸಿ ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆ ಜಿಲ್ಲಾ ಸಂಚಾಲಕಿ ಚೈತ್ರ ಮಾತನಾಡಿ, ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಲ್ಲಿ ಜೋಳದಾಳು ಹಿರಿಯ ಪ್ರಾಥಮಿಕ ಶಾಲೆ ಮುಚ್ಚಿ ವಿದ್ಯಾರ್ಥಿಗಳನ್ನು ಮೈಲಿಮನೆ ಶಾಲೆಗೆ ಕಳುಹಿಸ ಲಾಗುತ್ತಿದೆ. ಈ ರೀತಿ ಚಿಕ್ಕಮಗಳೂರಿನಲ್ಲಿ ಅಂದಾಜು ಒಂದು ಸಾವಿರ ಶಾಲೆಗಳನ್ನು ಮುಚ್ಚಲು ಪಟ್ಟಿ ತಯಾರಿಸಲಾಗಿದೆ. ರಾಜ್ಯವ್ಯಾಪಿ 40 ಸಾವಿರಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುತ್ತಿದೆ ಎಂದು ದೂರಿದರು.
ಸಾವಿತ್ರಿಬಾಯಿ- ಜ್ಯೋತಿಬಾ ಫುಲೆ ಹೋರಾಟ ಮತ್ತು ಪರಿಶ್ರಮದ ಫಲವಾಗಿ ಹಳ್ಳಿಗಳಲ್ಲಿ ಸರ್ಕಾರಿ ಶಾಲೆಗಳು ಆರಂಭ ವಾಗಿವೆ.ಈ ಎಲ್ಲ ಮಹಾತ್ಮರ ಆಶಯ ಗಾಳಿಗೆ ತೂರಿ ಶಾಲೆಗಳನ್ನು ಮುಚ್ಚಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಅ.15ರಂದು ಹೊರಡಿಸಿದ ಆದೇಶದಲ್ಲಿ ಆಯ್ದ ಕೆಪಿಎಸ್ ಮ್ಯಾಗ್ನೆಟ್ ಶಾಲೆಗೆ 5ಕಿಮೀ ವ್ಯಾಪ್ತಿ ಶಾಲೆಗಳನ್ನು ಜೋಡಿಸು ವುದಾಗಿ ಸ್ಪಷ್ಟಪಡಿಸಿದೆ. ಆದರೆ ಶಿಕ್ಷಣ ಮಂತ್ರಿಗಳು ಒಂದೆಡೆ ಒಂದೇ ಒಂದು ಶಾಲೆಯನ್ನೂ ಮುಚ್ಚುವುದಿಲ್ಲ ಎಂದು ಸುಳ್ಳು ಹೇಳುತ್ತ ಇನ್ನೊಂದೆಡೆ ಹಳ್ಳಿಗಳಿಗೆ ಬಸ್ ಬಿಡುವುದಾಗಿ ಹೇಳುತ್ತಿದ್ದಾರೆ. ಈ ಬಸ್ ಒದಗಿಸುವ ಜವಾಬ್ದಾರಿ ಕೂಡ ಎಸ್‌ಡಿ ಎಂಸಿ ಮೇಲೆ ಹೇರಲಾಗಿದೆ. ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಇತ್ತೀಚಿಗೆ ಮಂಗಳೂರಿನ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಲಾರಿಯಲ್ಲಿ ಶೈಕ್ಷಣಿಕ ಪ್ರವಾಸಕ್ಕೆ ಕರೆದೊಯ್ಯಲಾಗಿದೆ. ಹೀಗಿರುವಾಗ ಸರ್ಕಾರ ಯಾವ ಬಸ್ ನಲ್ಲಿ ಮಕ್ಕಳನ್ನು ಕರೆದೊಯ್ಯುತ್ತದೆ ಎಂದು ಪ್ರಶ್ನಿಸಿದರು.
ಎಡಿಬಿ ಬ್ಯಾಂಕಿನಿಂದ ₹2,500 ಕೋಟಿ ಸಾಲ ಪಡೆದು ಕೆಪಿಎಸ್ ಶಾಲೆ ತೆರೆಯಲಾಗುತ್ತಿದೆ. ಈ ಶಾಲೆಗಳನ್ನು ಖಾಸಗಿ ಕಂಪನಿ ಗಳಿಗೆ ಹೊರಗುತ್ತಿಗೆ ಕೊಡಲಾಗುತ್ತದೆ. ಪ್ರತಿ ಶಾಲೆ ಆದಾಯ ಸಂಗ್ರಹಿಸಬೇಕು. ಸರ್ಕಾರ ಶಿಕ್ಷಣದ ಜವಾಬ್ದಾರಿ ಯಿಂದ ನುಣುಚಿಕೊಂಡು ಸಾರ್ವಜನಿಕ ಶಿಕ್ಷಣವನ್ನು ಕಾರ್ಪೊರೇಟ್ ಕಂಪನಿಗಳಿಗೆ ದಾನ ಮಾಡುವ ಹುನ್ನಾರ ರಚಿಸಿದೆ. ಇದರ ವಿರುದ್ಧ ಒಗ್ಗಟ್ಟಾಗಿ ಹೋರಾಡುವುದೇ ಜನರ ಮುಂದಿನ ಪರಿಹಾರ. ಏನೇ ಬಂದರೂ ಹೋರಾಟದಿಂದ ಹಿಂದೆ ಸರಿಯ ಬಾರದು ಎಂದು ಕರೆ ನೀಡಿದರು.
ಗ್ರಾಮದ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಸದಸ್ಯ ಮಹೇಶ್ ಮಾತನಾಡಿ, 6ನೇ ತರಗತಿಯಿಂದ ಕೆಪಿಎಸ್ ಶಾಲೆ ಯಲ್ಲಿ ಅಡಕೆ ಸುಲಿಯುವುದು ಸೇರಿದಂತೆ ಇತರೆ ಕಸುಬು ಕಲಿಸುವುದಾಗಿ ಸರ್ಕಾರ ಹೇಳಿದೆ. ಸಮಾಜದ ತಳ ಸಮುದಾಯದ ಮಕ್ಕಳ ವಿದ್ಯೆ ಕಸಿದು ಕೂಲಿಗೆ ಕಳಿಸುವ ಸರ್ಕಾರದ ಹುನ್ನಾರ ನಾವು ಒಪ್ಪಲ್ಲ. ಈ ಯೋಜನೆ ರದ್ದಾಗು ವವರೆಗೂ ನಿರಂತರ ಹೋರಾಟ ನಡೆಸುತ್ತೇವೆ. ನಮ್ಮ ಶಾಲೆ ಮುಚ್ಚಲು ನಾವು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದ ಪಾಲಕರು, ಹಿರಿಯರು, ಯುವಕರು ಹಾಗೂ ಗ್ರಾಮಸ್ಥರು ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ತೀವ್ರವಾಗಿ ವಿರೋಧಿಸಿದರು. ಈ ಯೋಜನೆ ರದ್ದುಗೊಳಿಸುವವರೆಗೂ ಶಾಲೆ ಉಳಿಸಲು ಹೋರಾಡುವ ಸಂಕಲ್ಪ ತೆಗೆದುಕೊಂಡರು. ಶಾಲೆ ಉಳಿಸುವ ಹೋರಾಟಕ್ಕಾಗಿ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ರಚಿಸಲಾಯಿತು.ಪ್ರತಿಭಟನೆಯಲ್ಲಿ ಸಂಘಟನೆ ಅಧ್ಯಕ್ಷೆ ಚೈತ್ರಾ , ಉಪಾಧ್ಯಕ್ಷ ಪುರುಷೋತ್ತಮ್, ಜೋಳದಾಳು ಗ್ರಾಮಸ್ಥರಾದ ಮಹೇಶ್, ಶೇಖರ್, ಭರತ್, ಕಮಲಾಕ್ಷಿ, ನಿರ್ಮಲ, ಪರಮೇಶ್, ಪುಟ್ಟಸ್ವಾಮಿ, ಹರೀಶ್, ಮನೋಹರ್, ಶಾರದಾ, ಪವಿತ್ರ, ಸುನೀತಾ ಇದ್ದರು.ಫೋಟೊ:
ಚಿಕ್ಕಮಗಳೂರು ತಾಲೂಕಿನ ಜೋಳದಾಳು ಗ್ರಾಮದಲ್ಲಿ ಗ್ರಾಮಸ್ಥರೊಂದಿಗೆ ಸೇರಿ ಪ್ರತಿಭಟನೆ ನಡೆಸಿದ ಎಐಡಿಎಸ್ಓ ಸಂಘಟನೆ ಕಾರ್ಯಕರ್ತರು ಜೋಳದಾಳು ಹಿರಿಯ ಪ್ರಾಥಮಿಕ ಶಾಲೆಯನ್ನು ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಲ್ಲಿ ಮೈಲಿಮನೆ ಗ್ರಾಮ ಪಂಚಾಯಿತಿ ಶಾಲೆಗೆ ಸಂಯೋಜನೆ ಮಾಡುವ ಮೂಲಕ ಮುಚ್ಚಲಾಗುತ್ತಿದೆ ಎಂದು ಆರೋಪಿಸಿದರು.