ಕನ್ನಡಪ್ರಭ ವಾರ್ತೆ ತುಮಕೂರು
ಯುವ ಬ್ಯಾಡ್ಮಿಂಟನ್ ಕ್ರೀಡಾಪಟುಗಳಿಗೆ ವೇದಿಕೆ ಒದಗಿಸುವ ನಿಟ್ಟಿನಲ್ಲಿ ಆರಂಭಗೊಂಡಿರುವ ತುಮಕೂರು ಬ್ಯಾಡ್ಮಿಂಟನ್ ಲೀಗ್-2026 ಕ್ಕೆ ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು ದೀಪ ಬೆಳಗಿಸುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದರು.ಹಿರಿಯ ಕ್ರೀಡಾಪಟುಗಳಾದ ಸೋಮೇಶ್, ಸ್ವಾಮಿ, ಲಿಖಿತ,ರೆಡ್ಡಿ, ಜೋತಿ ಪ್ರಕಾಶ್ ಅವರ ಅವಿರತ ಪರಿಶ್ರಮರ ಫಲವಾಗಿ ತುಮಕೂರು ಬ್ಯಾಡ್ಮಿಂಟನ್ ಲೀಗ್-2026 ಹುಟ್ಟಿಕೊಂಡಿದ್ದು, ಟೀಮ್ ಸ್ಯಾಷರ್ಸಶ್ ಮತ್ತು ವಿನ್ನೇಜ್ ಇವೆಂಟ್ಸ್ ಇವರು ಆಯೋಜಿಸಿದ್ದು, ಕೆನರಾ ಬ್ಯಾಂಕ್, ವಿಶ್ವಾಸ್ ಜ್ಯಯಲರ್ಸ್, ಕರಣ್ ಟೆಕ್ಸ್ ಟೈಲ್, ವಿದ್ಯಾವಾಹಿನಿ, ಆದಿತ್ತ ಕೀಲು ಮತ್ತು ಮೂಳೆ ಆಸ್ಪತ್ರೆ, ಎಚ್.ಡಿ.ಎಫ್.ಸಿ ಬ್ಯಾಂಕ್ ಪ್ರಯೋಜಕತ್ವ ನೀಡಿವೆ.
ತುಮಕೂರು ಬ್ಯಾಡ್ಮಿಟನ್ ಲೀಗ್-2026ಕ್ಕೆ ಚಾಲನೆ ನೀಡಿ ಮಾತನಾಡಿದ ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ಐಪಿಎಲ್ ಮಾದರಿಯಲ್ಲಿ ಬ್ಯಾಡ್ಮಿಟನ್ ಕ್ರೀಡೆಯನ್ನು ಉತ್ತುಂಗಕ್ಕೆ ತೆಗದುಕೊಂಡು ಹೋಗಲು ಇಂತಹ ಇವೆಂಟ್‌ಗಳು ಸಹಕಾರಿಯಾಗಲಿವೆ. ಕ್ರೀಡಾಪ್ರಿಯರಿಗೆ ಇಂದು ಹೆಚ್ಚು ಸಂತೋಷ ತರುವ ವಿಚಾರವಾಗಿದೆ. ಈ ಮೊದಲು ಬ್ಯಾಡ್ಮಿಂಟನ್ ಆಟವಾಡಲು ಟೌನ್‌ಕ್ಲಬ್, ಹೇಮಾವತಿ ಅಫೀಸಿಯಲ್ ಕ್ಲಬ್‌ಗಳಿಗೆ ಹೋಗಬೇಕಾಗಿತ್ತು. ಆದರೆ ಪ್ರವೀಣರವರು ಉತ್ತಮವಾದ ಅಂಕಣವನ್ನು ನಿರ್ಮಿಸಿಕೊಟ್ಟಿದ್ದಾರೆ. ಇಲ್ಲಿ ರಾಜ್ಯ ಮಟ್ಟದ ಲೀಗ್ ಮ್ಯಾಚ್‌ಗಳನ್ನು ಆಯೋಜಿಸುವಂತಾಗಲಿ ಎಂದರು.ಬ್ಯಾಡ್ಮಿಟನ್ ಕ್ರೀಡೆಯನ್ನು ಕೆಲವರು ದೈಹಿಕ ಸಾಮರ್ಥ್ಯ ಕಾಪಾಡಿಕೊಳ್ಳಲು ಆಟವಾಡಿದರೆ, ಇನ್ನೂ ಕೆಲವರು ದೈನಂದಿಕ ಚಟುವಟಿಕೆಯಾಗಿ ಬಳಕೆ ಮಾಡುತ್ತಾರೆ. ಆದರೆ ಬಹುತೇಕ ಯುವಜನರು ಈ ಕ್ರೀಡೆಯನ್ನು ತಮ್ಮ ಕೆರಿಯರ್ ಆಗಿ ತೆಗೆದುಕೊಂಡಿದ್ದಾರೆ.ಅಂತವರಲ್ಲಿ ಕೆಲವರಿಗಾದರೂ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸುವಂತೆ ಅವಕಾಶ ಲಭಿಸಿದರೆ, ಈ ಕ್ರೀಡಾಕೂಟ ಆಯೋಜಿಸಿದ್ದಕ್ಕೂ ಸಾರ್ಥಕ ಎನಿಸುತ್ತದೆ.ಈ ನಿಟ್ಟಿನಲ್ಲಿ ಆಯೋಜಕರ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗುವಂತಾಗಲಿ ಎಂದು ಶಾಸಕ ಜೋತಿಗಣೇಶ್ ಶುಭ ಹಾರೈಸಿದರು.
ಆದಿತ್ಯ ಕೀಲು ಮತ್ತು ಮೂಳೆ ಆಸ್ಪತ್ರೆಯ ವೈದ್ಯ ಡಾ.ತ್ಯಾಗರಾಜು ಮಾತನಾಡಿ, ಕ್ರಿಕೆಟ್ ರೀತಿಯಲ್ಲಿ ಬ್ಯಾಡ್ಮಿಂಟನ್‌ಗೂ ಒಳ್ಳೆಯ ದಿನಗಳು ಬರುತ್ತೀವೆ. ಎಲ್ಲರೂ ಕ್ರೀಡಾಸ್ಪೂರ್ತಿಯಿಂದ ಆಟವಾಡಿ ಎಂದು ಶುಭ ಹಾರೈಸಿದರು. ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಡಿವೈಎಸ್ಪಿ ಪರಮೇಶರಯ್ಯ ಮಾತನಾಡಿ, ತುಮಕೂರಿನಲ್ಲಿ ಇಂತಹ ಒಂದು ಕ್ರೀಡಾಕೂಟ ನಡೆಯುತ್ತಿರುವುದು ಹೆಮ್ಮೆಯ ವಿಚಾರವಾಗಿದೆ.ಎಲ್ಲರೂ ಕ್ರೀಡಾ ನಿಯಮಗಳನ್ನು ಪಾಲಿಸಿ, ಕ್ರೀಡಾಸ್ಪೂರ್ತಿಯಿಂದ ಆಟವಾಡಿ. ತುಮಕೂರಿನಲ್ಲಿ ಇಂತಹ ಸುಸಜ್ಜಿತ ಅಂಕಣ ನಿರ್ಮಾಣವಾಗಿದೆ. ಇದರ ಸದ್ಬಳಕೆಯಾಗಲಿ ಎಂದರು. ವೀರಶೈವ ಬ್ಯಾಂಕಿನ ಅಧ್ಯಕ್ಷ ಗೋವಿಂದರಾಜು ಮಾತನಾಡಿ, ನಾನು, ನನ್ನ ಮಗ, ಮೊಮ್ಮಗ ಎಲ್ಲರೂ ಬ್ಯಾಡ್ಮಿಟನ್ ಆಟಗಾರರು, ತುಮಕೂರಿನಲ್ಲಿ ರಾಜ್ಯಮಟ್ಟದ ಟೂರ್ನಾಮೆಂಟ್ ನಡೆಸಲು ಶಾಸಕರ ಸಹಕಾರ ಬೇಕಿದೆ ಎಂದರು.
----------------------
ಪೋಟೋ: ತುಮಕೂರು ಬ್ಯಾಡ್ಮಿಂಟನ್ ಲೀಗ್-2026 ಕ್ಕೆ ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ಅವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.