ಸಾರಾಂಶ
ಪ್ರತಿಯೊಂದು ವಿಷಯವನ್ನು ಕ್ರೀಡಾಮನೋಭಾವನೆಯಿಂದ ನೋಡಿದರೆ ಎಲ್ಲದರಲ್ಲೂ ಒಳ್ಳೆಯದನ್ನೇ ಕಾಣಬಹುದು. ಇದರಿಂದ ಉತ್ತಮ ಆರೋಗ್ಯ ಸಮಾಜವನ್ನು ಸೃಷ್ಟಿಸಬಹುದು.
ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ
ವಿದ್ಯಾರ್ಥಿಗಳು ಉತ್ತಮ ಆರೋಗ್ಯಕ್ಕಾಗಿ ವ್ಯಾಯಾಮ ಹಾಗೂ ದೈಹಿಕ ಮತ್ತು ಮಾನಸಿಕ ದೃಢತೆಗೆ ಕ್ರೀಡೆ ಮುಖ್ಯವಾಗಿದ್ದು, ಎಲ್ಲಾದರಲ್ಲೂ ಕ್ರೀಡಾ ಮನೋಭಾವನೆಯನ್ನು ಇಟ್ಟುಕೊಳ್ಳಿ ಸೋಲು ಗೆಲುವು ಮುಖ್ಯವಲ್ಲ ನಿಮ್ಮ ಭಾಗವಹಿಸುವಿಕೆ ಮುಖ್ಯ ಎಂದು ಶಾಸಕ ಸಿ.ಬಿ. ಸುರೇಶ್‌ಬಾಬು ತಿಳಿಸಿದರು.ಪಟ್ಟಣದ ಕ್ರೀಡಾಂಗಣದಲ್ಲಿ ಮಂಗಳವಾರ ಜಿಪಂ, ಶಾಲಾಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ದೈಹಿಕ ಶಿಕ್ಷಕರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಂದು ವಿಷಯವನ್ನು ಕ್ರೀಡಾಮನೋಭಾವನೆಯಿಂದ ನೋಡಿದರೆ ಎಲ್ಲದರಲ್ಲೂ ಒಳ್ಳೆಯದನ್ನೇ ಕಾಣಬಹುದು. ಇದರಿಂದ ಉತ್ತಮ ಆರೋಗ್ಯ ಸಮಾಜವನ್ನು ಸೃಷ್ಟಿಸಬಹುದು. ಇಂದಿನ ಕ್ರೀಡೆಯಲ್ಲಿ ನಿಮ್ಮ ದೈಹಿಕ ಶಿಕ್ಷಕರ ತೀರ್ಮಾನ ತೀರ್ಪಿಗೆ ಬದ್ದರಾಗಿ ನಿಮ್ಮ ಕ್ರೀಡೆಯಿಂದ ಉತ್ತಮ ದೇಹ ಆರೋಗ್ಯ ಚೆನ್ನಾಗಿರುತ್ತದೆ. ಗೆಲುವೆ ಮುಖ್ಯವಲ್ಲ ಗೆದ್ದವರು ಮುಂದಿನ ಗೆಲುವನ್ನು ನೋಡಿದರೆ ಸೋತವರು ಗೆಲುವನ್ನು ಎದುರು ನೋಡುತ್ತಿರುತ್ತಾರೆ ಅದ್ದರಿಂದ ಕ್ರೀಡಾ ಮನೋಭಾವನೆಯನ್ನು ಬೆಳೆಸಿಕೊಳ್ಳಿ ಎಂದರು.ಗ್ಯಾರಂಟಿ ಯೋಜನೆ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಮಾತನಾಡಿ, ಈ ಹಿಂದೆಲ್ಲ ಗ್ರಾಮೀಣ ಕ್ರೀಡೆಗಳಿದ್ದವು ಹಿಂದೆ ಕ್ರೀಡೆಗೆ ಹೆಚ್ಚು ಒತ್ತು ನೀಡಲಾಗುತ್ತಿತ್ತು. ಅದರೆ ಇತ್ತೀಚೆಗೆ ಕ್ರೀಡೆಗೆ ಉತ್ತೇಜನ ನೀಡುವುದು ಕಡಿಮೆಯಾಗಿದೆ. ಮಕ್ಕಳಲ್ಲೂ ಈ ಕ್ರೀಡೆಯ ಬಗ್ಗೆ ಆಸಕ್ತಿ ಇಲ್ಲದಂತಾಗಿದೆ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಕಾಂತರಾಜು ಮಾತನಾಡಿ, ದೈಹಿಕ ಶಿಕ್ಷಕರು ಉತ್ತಮ ರೀತಿಯಲ್ಲಿ ಪ್ರಾಮಾಣಿಕವಾಗಿ ತೀರ್ಪನ್ನು ನೀಡಿ ಮಕ್ಕಳರಕ್ಷಣೆಯಲ್ಲಿ ಹೆಚ್ಚು ಗಮನಹರಿಸಿ ಜವಾಬ್ದಾರಿಯಿಂದ ನೋಡಿಕೊಂಡು ತಾಲೂಕಿಗೆ ಕೀರ್ತಿತರುವಂತಹ ಕ್ರೀಡಾಪಟುಗಳು ಈ ಕ್ರೀಡೆಯಲ್ಲಿ ಆಯ್ಕೆಮಾಡಿ ಉತ್ತಮ ಫಲಿತಾಂಶವನ್ನು ನೀಡಿ ಎಂದರು. ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅರ್. ಪರಶಿವಮೂರ್ತಿ ಮಾತನಾಡಿ, ಪಾಠವು ಎಷ್ಟು ಮುಖ್ಯವೋ ಅದೇ ರೀತಿ ಕ್ರೀಡೆಯು ಮುಖ್ಯ ಮಕ್ಕಳು ಕ್ರೀಡೆಯಲ್ಲಿ ಹೆಚ್ಚು ತೊಡಗಿದರೆ ಈ ಕ್ರೀಡೆಯಲ್ಲಿ ರಾಜ್ಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿಮ್ಮ ಸಾಧನೆಯಿಂದ ನಿಮ್ಮ ಜೀವನ ಉಜ್ವಲಗೊಳ್ಳುತ್ತದೆ. ಅದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಗಳು ಈ ಕ್ರೀಡೆಯಲ್ಲಿ ಸೋಲುಗೆಲುವನ್ನು ಸಮಾನವಾಗಿ ಸ್ವೀಕರಿಸಿ ಸೋಲು ಗೆಲುವಿನ ಮೆಟ್ಟಿಲು ಎಂದರು. ಕಾರ್ಯಕ್ರಮದಲ್ಲಿ ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಕೇಶವಮೂರ್ತಿ, ಅಕ್ಷರ ದಾಸೋಹದ ಅಧಿಕಾರಿ ಗವಿರಂಗಯ್ಯ, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ವೆಂಕಟರಾಮು ಸೇರಿದಂತೆ ದುರ್ಗಯ್ಯ, ಇತರರು ಇದ್ದರು.