ಸಾರಾಂಶ
ಬಳ್ಳಾರಿ/ ಹೊಸಪೇಟೆ : ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಹಾಗೂ ಹೊಸಪೇಟೆಯಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದಾರೆ. ಮಾಜಿ ಸಚಿವ ಬಿ.ನಾಗೇಂದ್ರ ಅವರ ಆಪ್ತನ ಮನೆಯಲ್ಲೂ ವಿವಿಧ ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ.
ಗುರುವಾರ ಬೆಳ್ಳಂಬೆಳಿಗ್ಗೆ ಬಳ್ಳಾರಿಯ ತಾಳೂರು ರಸ್ತೆಯ ರೇವಣಸಿದ್ದೇಶ್ವರ ಅಪಾರ್ಟ್‌ಮೆಂಟ್‌ನಲ್ಲಿರುವ ನಾಗೇಂದ್ರ ಅವರ ಆಪ್ತ ಕುರುಬ ನಾಗರಾಜ್ ಮನೆಯ ಮೇಲೆ ಇ.ಡಿ. ದಾಳಿ ನಡೆಸಿದ್ದು, 10ಕ್ಕೂ ಹೆಚ್ಚು ಅಧಿಕಾರಿಗಳು ಸುಮಾರು 3 ಗಂಟೆ ಶೋಧ ಕಾರ್ಯ ನಡೆಸಿದ್ದಾರೆ. ಈ ವೇಳೆ ನಾಗರಾಜ್ ಮನೆಯಲ್ಲಿ ಇರಲಿಲ್ಲ. ಅವರ ಮೈನಿಂಗ್ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಇ.ಡಿ. ಸಂಗ್ರಹಿಸಿದೆ ಎಂದು ತಿಳಿದು ಬಂದಿದೆ.
ಬೇಲೆಕೇರಿ ಅದಿರು ಪ್ರಕರಣದಲ್ಲಿ ಈ ಹಿಂದೆ ಕೆ.ನಾಗರಾಜ್ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು. ಬಳಿಕ ಜಾಮೀನು ಪಡೆದುಕೊಂಡು ಬಿಡುಗಡೆ ಆಗಿದ್ದಾರೆ.
ಹೊಸಪೇಟೆಯಲ್ಲೂ ದಾಳಿ:
ಹೊಸಪೇಟೆಯ ಹೋಟೆಲ್ ಉದ್ಯಮಿ ಶ್ರೀನಿವಾಸರಾವ್ (ಸೀನಬಾಬು) ಅವರ ಮನೆ ಹಾಗೂ ಅವರ ಮಾಲೀಕತ್ವದ ಪ್ರಿಯದರ್ಶಿನಿ ಹೋಟೆಲ್ ಮೇಲೆಯೂ ಜಾರಿ ನಿರ್ದೇಶನಾಲಯದ 6 ಅಧಿಕಾರಿಗಳು ದಾಳಿ ನಡೆಸಿದ್ದು, ಹೋಟೆಲ್‌ನ ಕಚೇರಿಯಲ್ಲಿನ ಕಡತಗಳನ್ನು ಪರಿಶೀಲನೆ ನಡೆಸಿದ್ದಾರೆ. ಪ್ರಿಯದರ್ಶಿನಿ ಹೋಟೆಲ್ ಸೇರಿದಂತೆ ವಿವೇಕಾನಂದ ನಗರದ ಮನೆ, ಅಪಾರ್ಟ್‌ಮೆಂಟ್ ಮೇಲೂ ದಾಳಿ ನಡೆಸಿ, ಮಾಹಿತಿಯನ್ನು ಸಂಗ್ರಹಿಸಲಾಗಿದೆ ಎಂದು ತಿಳಿದು ಬಂದಿದೆ.