ಬೇಲೆಕೇರಿ ಬಂದರಿನಲ್ಲಿ ಲಂಗರು ಹಾಕಿದ್ದ ಇನ್ನೊಂದು ಬೋಟ್‌ ಮುಳುಗಡೆ

| Published : Oct 12 2025, 01:01 AM IST

ಬೇಲೆಕೇರಿ ಬಂದರಿನಲ್ಲಿ ಲಂಗರು ಹಾಕಿದ್ದ ಇನ್ನೊಂದು ಬೋಟ್‌ ಮುಳುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಬೇಲೆಕೇರಿ ಬಂದರು ಪ್ರದೇಶದಲ್ಲಿ ಲಂಗರು ಹಾಕಿ ನಿಂತಿದ್ದ ಮೀನುಗಾರಿಕಾ ಬೋಟ್‌ ಮುಳುಗಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಒಂದೇ ವಾರದಲ್ಲಿ ಎರಡನೇ ಬೋಟ್‌ ಮುಳುಗಡೆ । ಸಂಕಷ್ಟದಲ್ಲಿ ಬೋಟ್‌ ಮಾಲೀಕರು, ಮೀನುಗಾರರು

ಕನ್ನಡಪ್ತಭ ವಾರ್ತೆ ಅಂಕೋಲಾ

ತಾಲೂಕಿನ ಬೇಲೆಕೇರಿ ಬಂದರು ಪ್ರದೇಶದಲ್ಲಿ ಲಂಗರು ಹಾಕಿ ನಿಂತಿದ್ದ ಮೀನುಗಾರಿಕಾ ಬೋಟ್‌ ಮುಳುಗಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.ಕಳೆದ ಎರಡು ದಿನದ ಹಿಂದಷ್ಟೆ ಇದೇ ಪ್ರದೇಶದಲ್ಲಿ ಮತ್ತೊಂದು ಬೋಟ್‌ ಮುಳುಗಿದ್ದ ಘಟನೆಗೆ ಮಾಸುವ ಮುನ್ನವೇ ಇನ್ನೊಂದು ಬೋಟ್ ಮುಳುಗಿದ ಘಟನೆ ಮೀನುಗಾರರಲ್ಲಿ ಆತಂಕ ಮೂಡಿಸಿದೆ. ಒಂದೇ ವಾರದಲ್ಲಿ ಎರಡು ಬೋಟಗಳ ನಷ್ಟದಿಂದ ಸ್ಥಳೀಯ ಬೋಟ್‌ ಮಾಲೀಕರು ಹಾಗೂ ಮೀನುಗಾರರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಶ್ರೀಕಾಂತ ತಾಂಡೇಲ ಅವರಿಗೆ ಸೇರಿದ್ದ ಶ್ರೀ ದುರ್ಗಾಪ್ರಸಾದ ಪರ್ಶಿಯನ್ ಬೋಟ್ ಇದಾಗಿದ್ದು ಇವರಿಗೆ ಲಕ್ಷಾಂತರ ರೂಪಾಯಿ ಹಾನಿಯಾಗಿದೆ.

ಬೇಲೆಕೇರಿ ಬಂದರು ಸಮುದ್ರ ಪ್ರದೇಶದಲ್ಲಿ ಕಳೆದ ಹಲವು ವರ್ಷಗಳಿಂದ ಹೂಳಿನಿಂದ ತುಂಬಿ ಆಳ ಕಡಿಮೆಯಾಗಿರುವುದರಿಂದ ಬೋಟ್‌ಗಳಿಗೆ ಸುರಕ್ಷಿತ ಲಂಗರು ಹಾಕಲು ಅನುವು ಇಲ್ಲದಂತಾಗಿದೆ. ಹೂಳಿನಿಂದ ಬಂದರು ತಳ ತುಂಬಿಕೊಂಡು ಬೋಟ್‌ಗಳು ನಿಲ್ಲಿಸಲು ಆಗದೆ ಅಲೆಗಳ ರಬಸಕ್ಕೆ ಬಡಿದು ಮುಳುಗುವ ಸ್ಥಿತಿ ನಿರ್ಮಾಣವಾಗಿದೆ. ಸರಕಾರ ಅಥವಾ ಬಂದರು ಇಲಾಖೆಯವರು ಹೂಳೆತ್ತುವ ಕಾರ್ಯ ಕೈಗೊಂಡಿಲ್ಲದಿರುವುದು ಸ್ಥಳೀಯ ಮೀನುಗಾರರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಬೋಟ್ ಎತ್ತಲು ಕ್ರೇನ್, ಪಂಪ್ ಯಂತ್ರ, ತಾಂತ್ರಿಕ ಸಹಾಯ ಎಲ್ಲವೂ ಲಕ್ಷಾಂತರ ವೆಚ್ಚ ಮಾಡಬೇಕಾಗುತ್ತದೆ. ಬೋಟ್‌ ಎತ್ತಿದ ಬಳಿಕವೂ ಎಂಜಿನ್ ಹಾಗೂ ಮೀನುಗಾರಿಕಾ ಸಾಧನಗಳು ಹಾನಿಗೊಳಗಾಗುತ್ತವೆ. ಇದರಿಂದ ಬೋಟ್‌ ಮಾಲೀಕರಿಗೆ ನೇರ ನಷ್ಟ ಮಾತ್ರವಲ್ಲದೆ, ಕೆಲಸವಿಲ್ಲದೆ ಉಳಿದ ಮೀನುಗಾರ ಕುಟುಂಬಗಳು ಸಂಕಷ್ಟಕ್ಕೀಡಾಗಿವೆ.

ಸರ್ಕಾರ ಹಾಗೂ ಬಂದರು ಇಲಾಖೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಮೀನುಗಾರರು ಮನವಿ ಮಾಡಿದ್ದಾರೆ. ಸರ್ಕಾರ ಹೂಳೆತ್ತುವ ಕಾರ್ಯ ತುರ್ತಾಗಿ ಪ್ರಾರಂಭಿಸುವುದು, ತಡೆಗೋಡೆ ನಿರ್ಮಾಣಕ್ಕೆ ನಿಧಿ ಬಿಡುಗಡೆ ಮಾಡುವುದು ಮತ್ತು ಮುಳುಗಿದ ಬೋಟ್‌ಗಳಿಗೆ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.