ಸಾರಾಂಶ
ರಾಜ್ಯದಲ್ಲಿ ಕಬಡ್ಡಿ ಕ್ರೀಡೆಗೆ ಒಂದು ಸಾಂಸ್ಕೃತಿಕ ಪರಂಪರೆ ಇದೆ. ಕ್ರೀಡೆಯಲ್ಲಿ ಸೋಲು ಗೆಲುವುಗಳನ್ನು ಸ್ಪರ್ಧಾತ್ಮಕವಾಗಿ ಭಾವಿಸಿ ನಮ್ಮ ಸೋಲಿಗೆ ಕಾರಣಗಳನ್ನು ಕಂಡುಕೊಳ್ಳಬೇಕು,
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಕ್ರೀಡಾ ಅಭ್ಯಾಸಗಳು ಶಾರೀರಿಕ ಸದೃಢತೆಯನ್ನಷ್ಟೇ ರೂಪಿಸದೆ ವಿದ್ಯಾರ್ಥಿಯ ಪರಿಪೂರ್ಣ ವ್ಯಕ್ತಿತ್ವ ವಿಕಸನಕ್ಕೆ ಬುನಾದಿಯಾಗುತ್ತವೆ. ಪ್ರತಿಯೊಬ್ಬರೂ ವಿದ್ಯಾರ್ಥಿ ಹಂತದಲ್ಲಿ ನಿರಂತರ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಶಾಂತಾ ಶಿಕ್ಷಣ ಸಂಸ್ಥೆಗಳ ಮ್ಯಾನೇಜಿಂಗ್ ಟ್ರಸ್ಟಿ ಡಾ. ಪ್ರೀತಿ ಸುಧಾಕರ್ ಕರೆ ನೀಡಿದರು. ತಾಲೂಕಿನ ಪೆರೇಸಂದ್ರ ಗ್ರಾಮದ ಶಾಂತಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಕರ್ನಾಟಕ ರಾಜ್ಯ ಐಸಿಎಸ್‌ಇ ಶಾಲೆಗಳ ಒಕ್ಕೂಟದ ಪ್ರಾದೇಶಿಕ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಹಾಗೂ ಶಾಂತಾ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಪ್ರಾದೇಶಿಕ ಕಬಡ್ಡಿ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು.ಕಬಡ್ಡಿಗೆ ಸಾಂಸ್ಕೃತಿಕ ಪರಂಪರೆ
ನಮ್ಮ ರಾಜ್ಯದಲ್ಲಿ ಕಬಡ್ಡಿ ಕ್ರೀಡೆಗೆ ಒಂದು ಸಾಂಸ್ಕೃತಿಕ ಪರಂಪರೆ ಇದ್ದು ಇದರಿಂದ ಲಿಂಗ ಸಂವೇದನೆಯೊಂದಿಗೆ ಯುವಕರು ಉದಾತ್ತ ವ್ಯಕ್ತಿತ್ವ ರೂಪಿಸಿಕೊಳ್ಳುತ್ತಾರೆ. ಸೋಲು ಗೆಲುವುಗಳನ್ನು ಸ್ಪರ್ಧಾತ್ಮಕವಾಗಿ ಭಾವಿಸಿ ನಮ್ಮ ಸೋಲಿಗೆ ಕಾರಣಗಳನ್ನು ಕಂಡುಕೊಳ್ಳಬೇಕು, ಹಾಗೆಯೇ ಗೆಲುವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಸುಸ್ಥಿರಗೊಳಿಸುವತ್ತ ಮುನ್ನಡೆಯಬೇಕು ಎಂದು ಕಿವಿ ಮಾತು ಹೇಳಿದರು. ಕ್ರೀಡೆಯಲ್ಲಿ ತೊಡಗಿಸಿಕೊಳ್ಳಿರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಷಣ್ಮುಗಂ ಮಾತನಾಡಿ, ಮಕ್ಕಳು ಶೈಕ್ಷಣಿಕವಾಗಿ, ಕ್ರೀಡೆ, ಸಾಹಿತ್ಯ ಮತ್ತು ಸಾಂಸ್ಕೃತಿಕವಾಗಿ ಬೆಳೆಯುವುದರಿಂದ ಪರಿಪೂರ್ಣ ವ್ಯಕ್ತಿತ್ವ ಗಳಿಕೆಗೆ ಸೂಕ್ತ ನೆಲೆ ಒದಗುತ್ತದೆ ಎಂದು ಅಭಿಪ್ರಾಯ ಪಟ್ಟರು.ಕಾರ್ಯಕ್ರಮದಲ್ಲಿ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಜಂಟಿ ಕಾರ್ಯದರ್ಶಿ ಡಾ.ಅಮರೇಂದ್ರ, ಶಾಂತಾ ಶಿಕ್ಷಣ ಸಂಸ್ಥೆಯ ಸದಸ್ಯ ಮನೋಹರ್, ನಿರ್ದೇಶಕ ಡಾ.ಕೋಡಿರಂಗಪ್ಪ, ಪ್ರಾಂಶುಪಾಲ ಡಾ.ನವೀನ್ ಸೈಮನ್, ಡಾ.ಗೋಪಿನಾಥ್, ಸುರೇಶ್, ನರೇಶ್, ಶಿವು, ಸರವಣನ್ ಕೆ, ಶಕ್ತಿರಾಧಾ, ಆಡಳಿತಾಧಿಕಾರಿ ಕೆನೆತ್, ಉಪಪ್ರಾಂಶುಪಾಲೆ ಕಲ್ಯಾಣಿ, ವಿದ್ಯಾರ್ಥಿಗಳು ಇದ್ದರು.