ಚನ್ನಬಸವೇಶ್ವರ ಸ್ವಾಮೀಜಿ ನಿಧನಕ್ಕೆ ಸುತ್ತಮುತ್ತಲ ಗ್ರಾಮಸ್ಥರ ಕಂಬನಿ

| Published : Nov 12 2025, 01:00 AM IST

ಚನ್ನಬಸವೇಶ್ವರ ಸ್ವಾಮೀಜಿ ನಿಧನಕ್ಕೆ ಸುತ್ತಮುತ್ತಲ ಗ್ರಾಮಸ್ಥರ ಕಂಬನಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಅತಿ ಹೆಚ್ಚು ಭಕ್ತರನ್ನು ಹೊಂದಿದ್ದ ಮಠ ಗುರು ಕಂಬಳೇಶ್ವರ ಮಠ,

ಕನ್ನಡಪ್ರಭ ವಾರ್ತೆ ನಂಜನಗೂಡು

ತಾಲೂಕಿನ ಮಲ್ಲನ ಮೂಲೆಯ ಶ್ರೀ ಗುರು ಕಂಬಳೇಶ್ವರ ಮಠದ ಪೀಠಾಧ್ಯಕ್ಷ ಶ್ರೀ ಚನ್ನಬಸವೇಶ್ವರ ಸ್ವಾಮೀಜಿ ನಿಧನಕ್ಕೆ ಸುತ್ತಮುತ್ತಲಿನ ಗ್ರಾಮಸ್ಥರು ಶೋಕಸಾಗರದಲ್ಲಿ ಮುಳುಗುವ ಮೂಲಕ ಕಂಬನಿ ಮಿಡಿದಿದ್ದಾರೆ.

ತೀವ್ರತರವಾದ ಬಿಪಿ ಮತ್ತು ಶುಗರ್ ನಿಂದ ಬಳಲುತ್ತಿದ್ದ ಶ್ರೀ ಚನ್ನಬಸವೇಶ್ವರ ಸ್ವಾಮೀಜಿಗಳು ಕಳೆದ ಕೆಲ ದಿನಗಳ ಹಿಂದೆ ಪ್ರಸಾದದ ಬಳಿಕ ಕೊಠಡಿಯಲ್ಲಿ ಮಲಗಿದ್ದ ವೇಳೆ ಇದ್ದಕ್ಕಿದ್ದಂತೆ ಕಾಲು ಊತ ಕಂಡಿದೆ, ಕೂಡಲೇ ತಮ್ಮ ಚಾಲಕನನ್ನು ಬರ ಮಾಡಿಕೊಂಡು ಮೈಸೂರಿನ ಜೆಎಸ್ಎಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು, ಅವರ ಕಾಲು ಸೋಂಕಿಗೆ ಒಳಗಾಗಿದ್ದರಿಂದ ಕಾಲಿನ ಚರ್ಮವನ್ನು ತೆಗೆಯಲಾಗಿತ್ತು ಎನ್ನಲಾಗಿದ್ದು, ಕಳೆದ ಒಂದು ತಿಂಗಳಿನಿಂದಲೂ ನಿರಂತರವಾಗಿ ಅವರಿಗೆ ಚಿಕಿತ್ಸೆ ಮುಂದುವರೆದಿತ್ತು, ಕೆಲದಿನ ವಾರ್ಡಿನಲ್ಲಿ ಮತ್ತು ಕೆಲ ದಿನ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು, ಸೋಮವಾರ ಅವರ ಪ್ರಿಯವಾದ ದಿನವೇ ಅವರು ಲಿಂಗೈಕ್ಯರಾಗಿರುವುದು ವಿಶೇಷ.

ರಾಜ್ಯದಲ್ಲಿ ಅತಿ ಹೆಚ್ಚು ಭಕ್ತರನ್ನು ಹೊಂದಿದ್ದ ಮಠ ಗುರು ಕಂಬಳೇಶ್ವರ ಮಠ, ಈ ಮಠದ ಹಿಂದಿನ ಸ್ವಾಮೀಜಿ ಸಿದ್ದಲಿಂಗ ಸ್ವಾಮೀಜಿ ಅವರಿಂದ ಪಟ್ಟಾಧಿಕಾರ ಸ್ವೀಕರಿಸಿದ್ದ ಚನ್ನಬಸವೇಶ್ವರ ಶ್ರೀಗಳು, ಈ ಶತಮಾನ ಕಂಡ ಸರಳ ಜೀವನ ಸರಳ ವೇಷಭೂಷಣದಲ್ಲಿ ಸಿದ್ದೇಶ್ವರ ಶ್ರೀಗಳ ನಂತರ ಎರಡನೇ ಸ್ಥಾನದಲ್ಲಿದ್ದರು, ಅಲ್ಲದೆ ಮಠದಲ್ಲಿ ಸಾವಿರಾರು ಅನಾಥ ಮಕ್ಕಳಿಗೆ ಆಶ್ರಯದಾತರಾಗಿ, ಅಕ್ಷರ ಮತ್ತು ಅನ್ನದಾಸೋಹ ನಡೆಸುತ್ತಿದ್ದರು, ಇವರು ಪಟ್ಟಾಧಿಕಾರ ಸ್ವೀಕರಿಸಿದ ನಂತರ ಮಠವು ಒಂದು ರೀತಿ ಅಭಿವೃದ್ಧಿ ಕಂಡಿತಲ್ಲದೆ, ಶಿಕ್ಷಣಕ್ಕೆ ಆದ್ಯತೆ ನೀಡಿ ಇವರು ಇವರ ಅವಧಿಯಲ್ಲಿ ಒಂದು ಶಿಕ್ಷಣ ಸಂಸ್ಥೆಯನ್ನು ತೆರೆದರು.

ನೇರ ನಡೆ-ನುಡಿಗೆ ಹೆಸರುವಾಸಿಯಾಗಿದ್ದ ಚನ್ನಬಸವೇಶ್ವರ ಶ್ರೀಗಳು, ಕೆಲ ಮಠಗಳಲ್ಲಿ ಇರುವಂತೆ ವಿಐಪಿ ಆಥಿತ್ಯದ ಸಂಸ್ಕೃತಿ ಮಲ್ಲನ ಮೂಲೆ ಮಠದಲ್ಲಿ ಇರಲಿಲ್ಲ, ಅವರು ಪಾದಪೂಜೆಗೆ ಭಕ್ತರ ಮನೆಗೆ ತೆರಳುವ ವೇಳೆಯಲ್ಲಿ ಬಡವ ಬಲಿದ ಎಂದು ಯಾರನ್ನು ನೋಡದೆ ಎಲ್ಲ ಭಕ್ತರನ್ನು ಒಂದಾಗಿ ನೋಡುತ್ತಿದ್ದರು, ಜೊತೆಗೆ ರಾಜಕಾರಣಕ್ಕೆ ಅಂಟಿಕೊಳ್ಳದ ಸ್ವಾಮೀಜಿ ರಾಜಕಾರಣಿಗಳನ್ನು ಸಹ ಸಾಮಾನ್ಯ ಭಕ್ತರಂತೆ ನಡೆಸಿಕೊಳ್ಳುತ್ತಿದ್ದು ವಿಶೇಷ. ನಂಜನಗೂಡಿನಲ್ಲಿ ನಡೆದ 1034ನೇ ಶಿವರಾತ್ರಿಶ್ವರ ಜಯಂತಿಯ ನೇತೃತ್ವ ವಹಿಸಿದ್ದ ಶ್ರೀಗಳು ಜಯಂತ್ಯುತ್ಸವವನ್ನು ವಿಜೃಂಭಣೆಯಿಂದ ನಡೆಸಿದ್ದ ಕೀರ್ತಿ ಅವರಿಗೆ ಸಲ್ಲುತ್ತದೆ, ಅವರ ಅಕಾಲಿಕವಾಗಿ ಲಿಂಗೈಕ್ಯರಾಗಿರುವುದು, ಲಕ್ಷಾಂತರ ಭಕ್ತರು ಶೋಕ ಸಾಗರದಲ್ಲಿ ಮುಳುಗಿದ್ದಾರೆ.

ನಂಜನಗೂಡು ಪಟ್ಟಣ, ತಾಲೂಕಿನ ತಾಂಡವಪುರ, ಬಸವನಪುರ ಸೇರಿದಂತೆ ಎಲ್ಲ ಗ್ರಾಮಗಳಲ್ಲಿ ಗ್ರಾಮಸ್ಥರು ಹಾಗೂ ಸಂಘ-ಸಂಸ್ಥೆಯ ಮುಖಂಡರು ಅವರ ಭಾವಚಿತ್ರವನ್ನು ಅಳವಡಿಸಿ, ಶ್ರದ್ಧಾಂಜಲಿ ಸಮರ್ಪಿಸಿದರು.

ನಂಜನಗೂಡು ತಾಲೂಕಿನ ಎಲ್ಲ ರಾಜಕೀಯ ಮುಖಂಡರು ಮತ್ತು ಸಂಘ ಸಂಸ್ಥೆಗಳ ಮುಖಂಡರು ಅವರ ಅಂತಿಮ ದರ್ಶನ ಪಡೆದು ಭಕ್ತಿ ಸಮರ್ಪಿಸಿದರು.