ಹೊನ್ನಾಳಿ ಹಿರೇಕಲ್ಮಠದಲ್ಲಿ ಶ್ರೀ ಚನ್ನಪ್ಪ ಸ್ವಾಮಿ ಅದ್ಧೂರಿ ರಥೋತ್ಸವ

| Published : Aug 31 2024, 01:32 AM IST

ಹೊನ್ನಾಳಿ ಹಿರೇಕಲ್ಮಠದಲ್ಲಿ ಶ್ರೀ ಚನ್ನಪ್ಪ ಸ್ವಾಮಿ ಅದ್ಧೂರಿ ರಥೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಮಧ್ಯ ಕರ್ನಾಟಕದಲ್ಲಿ ತ್ರಿವಿಧ ದಾಸೋಹ ಅನ್ನ, ಅಕ್ಷರ, ನ್ಯಾಯಾದಾನಕ್ಕೆ ಪ್ರಸಿದ್ಧಿಯಾದ ಹೊನ್ನಾಳಿ ಹಿರೇಕಲ್ಮಠದ ಶ್ರೀ ಚನ್ನಪ್ಪ ಸ್ವಾಮಿ ರಥೋತ್ಸವ ಶುಕ್ರವಾರ ಸಹಸ್ರಾರು ಭಕ್ತರ ನಡುವೆ ಅದ್ಧೂರಿಯಾಗಿ ಜರುಗಿತು.

- ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ನೇತೃತ್ವ । ಸಹಸ್ರಾರು ಭಕ್ತರು ಭಾಗಿ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ನಡು ಕರ್ನಾಟಕದಲ್ಲಿ ತ್ರಿವಿಧ ದಾಸೋಹ ಅನ್ನ, ಅಕ್ಷರ, ನ್ಯಾಯಾದಾನಕ್ಕೆ ಪ್ರಸಿದ್ಧಿಯಾದ ಹಿರೇಕಲ್ಮಠದ ಶ್ರೀ ಚನ್ನಪ್ಪ ಸ್ವಾಮಿ ರಥೋತ್ಸವ ಶುಕ್ರವಾರ ಸಹಸ್ರಾರು ಭಕ್ತರ ನಡುವೆ ಅದ್ಧೂರಿಯಾಗಿ ಜರುಗಿತು.

ಹೊನ್ನಾಳಿ ಹಿರೇಕಲ್ಮಠದ ಪಟ್ಟಾಧ್ಯಕ್ಷರಾದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಶ್ರೀ ಮಠದಲ್ಲಿ ಆ.28ರಿಂದ ಪ್ರತಿದಿನ ಶ್ರಾವಣ ಮಾಸದ ವಿವಿಧ ಪೂಜಾ ಕೈಂಕರ್ಯಗಳು, ಧಾರ್ಮಿಕ ಆಚರಣೆಗಳು, ಸಿದ್ಧಾಂತ ಶಿಖಾಮಣೆ ಪುರಾಣ ಪ್ರವಚನ, ಸುಮಾರು 50ಕ್ಕೂ ಹೆಚ್ಚು ಜಂಗಮ ವಟುಗಳಿಗೆ ಹಾಗೂ ಜಂಗಮ ಮಹಿಳೆಯರಿಗೆ ವಿವಿಧ ಮಠಾಧೀಶರ ಸಮ್ಮುಖ ಶಿವದೀಕ್ಷಾ ಕಾರ್ಯಕ್ರಮ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಆ.30ರ ಶುಕ್ರವಾರ ಕೂಡ ಬೆಳಗ್ಗೆ ಕ್ಷೇತ್ರದ ಶ್ರೀ ಜಗದ್ಗುರು ಜಡೆಯ ಶಂಕರ ಶಿವಾಚಾರ್ಯ ಮಹಾಸ್ವಾಮೀಜಿಗಳ ಹಾಗೂ ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳ, ಕರ್ತೃ ಗದ್ದುಗೆಗಳಿಗೆ ಮಹಾ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ದೀಪೋತ್ಸವ ಗಳಂತಹ ಧಾರ್ಮಿಕ ಪೂಜೆಗಳು ಜರುಗಿದವು.

ಶುಕ್ರವಾರ ಶ್ರೀ ಮಠದ ಆವರಣದಲ್ಲಿ ಶ್ರೀ ವೀರಭದ್ರೇಶ್ವರ ಕೆಂಡದರ್ಚನೆ ನಡೆಯಿತು. ಶ್ರೀ ಮಠದ ಪೀಠಾಧಿಪತಿ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಪೂಜೆ ಸಲ್ಲಿಸಿ, ಕೆಂಡಾರ್ಚನೆಗೆ ಚಾಲನೆ ನೀಡಿದರು.

ಅನಂತರ ವಿವಿಧ ಬಣ್ಣಗಳ ಬಾವುಟಗಳು, ವಿವಿಧ ಹೂವುಗಳಿಂದ ಸುಂದರವಾಗಿ ಅಲಂಕರಿಸಿದ ರಥದವರೆಗೆ ಸ್ವಾಮೀಜಿಯವರು ವಿವಿಧ ಮಂಗಳವಾದ್ಯಗಳೊಂದಿಗೆ ಆಗಮಿಸಿ ರಥಕ್ಕೆ ಪೂಜೆ ಸಲ್ಲಿಸಿದರು. ಬಳಿಕ ರಥದಲ್ಲಿ ಆಸೀನರಾಗಿ ಹಿರೇಕಲ್ಮಠದಿಂದ ಸಹಸ್ರಾರು ಭಕ್ತರೊಂದಿಗೆ, ನಂದಿಕೋಲು, ಕೀಲು ಕುದುರೆ, ವೀರಗಾಸೆ ಕರಡಿ ಮಜಲುಗಳಂತಹ ಜಾನಪದ ಕಲಾಮೇಳಗೊಂದಿಗೆ ಹಾಗೂ ಅಲಂಕೃತಗೊಂಡ ಆನೆ, ಒಂಟೆ, ಬಸವಣ್ಣ ಗಳೊಂದಿಗೆ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ರಥದ ಮೆರವಣಿಗೆ ಜರುಗಿತು.

ಶಾಲಾ ಮಕ್ಕಳು, ಕಲಾವಿದರು ವಿವಿಧ ವೇಷಭೂಷಣಗಳೊಂದಿಗೆ, ಸ್ಥಬ್ಧಚಿತ್ರಗಳೊಂದಿಗೆ ಮೆರವಣೆಗೆಯಲ್ಲಿ ನೃತ್ಯ ಮಾಡುತ್ತ, ಸಾಗಿದರೆ ರಸ್ತೆಯ ಪಕ್ಕದಲ್ಲಿ ನಿಂತ ಭಕ್ತರು ರಥಕ್ಕೆ ಪೂಜೆ ಸಲ್ಲಿಸಿದರು. ರಥಕ್ಕೆ ಬಾಳೆಹಣ್ಣು ಉತ್ತತ್ತಿ ಎಸೆದು ಭಕ್ತಿ ಸಲ್ಲಿಸಿದರು.

ರಥ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಸಾಗಿ ಪುನಃ ಶ್ರೀಮಠದ ಕಡೆಗೆ ಸಾಗಿ ಬಂತು. ರಥೋತ್ಸವ ಅಂಗವಾಗಿ ಶ್ರೀ ಮಠದಲ್ಲಿ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ರಥೋತ್ಸವ ಹಿನ್ನೆಲೆ ಹಿರೇಕಲ್ಮಠದ ಆವರಣದಲ್ಲಿ ವಿವಿಧ ವಸ್ತುಗಳ ನೂರಾರು ಅಂಗಡಿಗಳನ್ನು ಹಾಕಲಾಗಿತ್ತು. ಜನರು ಅಂಗಡಿಗಳಲ್ಲಿ ವಸ್ತುಗಳನ್ನು ಖರೀದಿಸಿ, ಸಂಭ್ರಮಿಸಿದರು.

- - - -30ಎಚ್.ಎಲ್.ಐ1:

ಹೊನ್ನಾಳಿ ಹಿರೇಕಲ್ಮಠದ ಶ್ರೀ ಚನ್ನಪ್ಪ ಸ್ವಾಮಿ ರಥೋತ್ಸವ ಶುಕ್ರವಾರ ಸಹಸ್ರಾರು ಭಕ್ತರ ಸಮ್ಮುಖ ಅದ್ಧೂರಿಯಾಗಿ ನಡೆಯಿತು.