ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಮತದಾರರ ಹಕ್ಕು ದುರುಪಯೋಗ ಆಗಬಾರದು ಎಂಬ ನಿಟ್ಟಿನಲ್ಲಿ ದೇಶಾದ್ಯಂತ ಚುನಾವಣಾ ಆಯೋಗ ಕೈಗೊಂಡಿರುವ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣಾ (ಎಸ್‌ಐಆರ್) ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ. ಇದರಲ್ಲಿ ಯಾವುದೇ ಗೊಂದಲ ಬೇಡ ಎಂದು ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ತಿಳಿಸಿದರು.ತಾಲೂಕಿನ ಶಾಂತಿಕೊಪ್ಪಲು ಗ್ರಾಮದ ತೋಟದ ಸರ್ಕಲ್ ಬಳಿ ಇರುವ ಖಾಸಗಿ ಕಲ್ಯಾಣ ಮಂಟಪದಲ್ಲಿ ಜೆಡಿಎಸ್ ಪಕ್ಷದಿಂದ ಹಮ್ಮಿಕೊಂಡಿದ್ದ ಎಸ್‌ಐಆರ್, ಬಿಎಲ್‌ಎ-2 ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಮತದಾರರ ಪಟ್ಟಿಯಲ್ಲಿನ ಲೋಪ ದೋಷಗಳ ಸರಿಪಡಿಸಿಕೊಳ್ಳುವ ಜೊತೆಗೆ ಕೆಲವರು ಮತದಾನ ಹಕ್ಕಿದ್ದರೂ ಸಹ ಮತದಾನಕ್ಕೆ ನಿರ್ಲಕ್ಷ್ಯ ತೋರುವುದು ಅಲ್ಲದೇ, ಎರಡೆರಡು ಕಡೆಗಳಲ್ಲಿ ನೋಂದಣಿ ಆಗಿರುವ ಅನರ್ಹ ಮತದಾರರನ್ನು ತೆಗೆದುಹಾಕಿ ಬೂತ್ ಸ್ವಚ್ಚಗೊಳಿಸಲು ಬಿಎಲ್‌ಎಗಳಿಗೆ ಇದರ ಜವಾಬ್ದಾರಿ ಹೆಚ್ಚಿದೆ. ಇದಕ್ಕೆ ಅಚ್ಚುಕಟ್ಟಾದ ಮತದಾರರ ಪಟ್ಟಿ ತಯಾರಿಸಲು ಆಯೋಗ ಸಹ ಸಿದ್ದತೆ ನಡೆಸಿದೆ. ಅದಕ್ಕೆ ನಾವು ಕೈ ಜೋಡಿಸಬೇಕು ಎಂದರು.ಶ್ರೀರಂಗಪಟ್ಟಣ ಕ್ಷೇತ್ರವ್ಯಾಪ್ತಿಯ ಕಸಬಾ ಮತ್ತು ಬೆಳಗೊಳ ಹೋಬಳಿ ಗ್ರಾಮಗಳು ಮೈಸೂರು ನಗರಕ್ಕೆ ಹೊಂದಿಕೊಂಡತ್ತಿವೆ. ಮೈಸೂರಿನ ರಮ್ಮನಹಳ್ಳಿ, ಕಾಳಿಸಿದ್ದನಹುಂಡಿ, ಕಾಮನಕೆರೆಹುಂಡಿ ಸೇರಿದಂತೆ ವಿವಿಧೆಡೆಗಳಲ್ಲಿ ನೆಲೆಸಿರುವ ಮತದಾರರನ್ನು ಕರೆ ತಂದು ಮೈಸೂರು ಹಾಗೂ ನಮ್ಮ ಕ್ಷೇತ್ರ ವ್ಯಾಪ್ತಿಯಲ್ಲೂ ಮತದಾನ ಮಾಡುವ ಮೂಲಕ ಎರಡೆರಡು ಕಡೆಗಳಲ್ಲಿ ಮತ ಹಾಕುತ್ತಾರೆ. ಇಂತಹ ಕಾನೂನು ಬಾಹಿರ ಕ್ರಮಗಳನ್ನು ತಡೆಯುವುದು ಆಯೋಗದ ಉದ್ದೇಶವೂ ಆಗಿದೆ. ಇದಕ್ಕೆ ಸಹಕಾರ ನೀಡಬೇಕು ಎಂದರು.
ಜೆಡಿಎಸ್ ಪಕ್ಷದ ಎಸ್‌ಐಆರ್ ಮಾಹಿತಿ ಅಧಿಕಾರಿ ಪ್ರಸನ್ನಕುಮಾರ್ ಮಾತನಾಡಿ, ಪ್ರತಿ 20 ವರ್ಷಗಳಿಗೊಮ್ಮೆ ಕೇಂದ್ರ ಚುನಾವಣಾ ಆಯೋಗ ಮತದಾರರ ಪಟ್ಟಿ ಪರಿಷ್ಕರಣೆ ನಡೆಸುತ್ತಿದೆ. ಆದರೆ, ಇದನ್ನು ಕೇಂದ್ರ ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದು ಕಾಂಗ್ರೆಸ್ ನವರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದರು.
ಈಗಾಗಲೇ 12 ರಾಜ್ಯಗಳಲ್ಲಿ ಪರಿಷ್ಕರಣೆ ಆಗಿದೆ. ಲಕ್ಷಾಂತರ ಅನರ್ಹ ಮತದಾರರು ಪಟ್ಟಿಯಿಂದ ಡಿಲಿಟ್ ಆಗಿದೆ. ಶ್ರೀರಂಗಪಟ್ಟಣ ಕ್ಷೇತ್ರ ವ್ಯಾಪ್ತಿ ಕನಿಷ್ಠ 20 ಸಾವಿರ ಅನರ್ಹ ಮತದಾರರ ಡಿಲೀಟ್ ಆಗಲಿವೆ ಎಂದರು.
ಮತದಾರರ ಪಟ್ಟಿಯಲ್ಲಿ ಎರಡೆರಡು ಕಡೆಗಳಲ್ಲಿ ಹೆಸರು ಇರುತ್ತವೆ ಇಲ್ಲವೇ ನಿಧನರಾಗಿರುತ್ತಾರೆ. ಅಲ್ಲದೆ ಬೇರೆ ಕಡೆಗಳಲ್ಲಿ ವಲಸೆ ಹೋಗಿ ಅಲ್ಲಿಯೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿರುತ್ತಾರೆ. ಅಂತಹವುಗಳನ್ನು ತೆಗೆದುಹಾಕುವ ಸಲುವಾಗಿ ಬಿಎಲ್‌ಎ-2 ಸಹಕಾರ ನೀಡಬೇಕು ಎಂದರು.ಮುಂದಿನ ತಾಲೂಕು ಪಂಚಾಯ್ತಿ, ಜಿಲ್ಲಾ ಹಾಗೂ ಗ್ರಾಮ ಪಂಚಾಯ್ತಿ ಸೇರಿದಂತೆ ಎಲ್ಲಾ ಚುನಾವಣೆಗಳಿಗೂ ಮತದಾರರ ಪರಿಷ್ಕರಣೆ ಅಗತ್ಯವಾಗಿದೆ. ಪ್ರತಿ ಬೂತ್‌ನಲ್ಲೂ ನಾಯಕನನ್ನು ತಯಾರು ಮಾಡಲು ಜೆಡಿಎಸ್ ಯುವ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ನಿರ್ಧರಿಸಿದ್ದಾರೆ. ಹಾಗಾಗಿ ಮುಂದಿನ ನಾಯಕರಿಗೆ ಇದೊಂದು ಸವಾಲಿನ ಕೆಲಸವೂ ಆಗಿದೆ. ಪ್ರತಿಯೊಬ್ಬರೂ ಎಸ್‌ಐಆರ್‌ನಲ್ಲಿ ಭಾಗಿಯಾಗಬೇಕು. ಅರ್ಹ ಮತದಾರರನ್ನು ಪಟ್ಟಿಗೆ ಸೇರಿಸಿ, ಅನರ್ಹರನ್ನು ತೆಗೆದುಹಾಕಬೇಕು ಎಂದು ಸಲಹೆ ನೀಡಿದರು.
ಈ ವೇಳೆ ತಾಲೂಕು ಅಧ್ಯಕ್ಷ ದಶರಥ, ಜಿಪಂ ಮಾಜಿ ಸದಸ್ಯ ಮರೀಗೌಡ, ತಾಪಂ ಮಾಜಿ ಸದಸ್ಯ ದೇವೇಗೌಡ, ಮುಖಂಡರಾದ ದೇವರಾಜು, ತಗ್ಗಹಳ್ಳಿ ಪ್ರಸನ್ನ, ಕಾರ್ಯಾಧ್ಯಕ್ಷ ತಿಲಕ್, ಯುವ ಅಧ್ಯಕ್ಷ ಕಡತನಾಳು ಸಂಜಯ್, ಎಸ್‌ಸ್ಸಿ ಎಸ್‌ಟಿ ಮೋರ್ಚಾ ಅಧ್ಯಕ್ಷ ಪುಟ್ಟಸ್ವಾಮಿ, ಸುರೇಶ್, ನಾರಾಯಣಪ್ಪ, ಅಶ್ವತ್ಥ್, ಬೋರೇಗೌಡ, ಶಂಕರೇಗೌಡ ಸೇರಿದಂತೆ ಇತರರು ಇದ್ದರು.ತಕ್ಷಣ ನಾಲೆಗಳಿಗೆ ನೀರು ಹರಿಸಿ: ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಒತ್ತಾಯ
ಶ್ರೀರಂಗಪಟ್ಟಣ:ಕಾವೇರಿ ಕಣಿವೆ ವ್ಯಾಪ್ತಿ ಬೆಳೆದಿರುವ ಬೆಳೆಗಳನ್ನು ರಕ್ಷಿಸಲು ತಕ್ಷಣವೇ ಕೆಆರ್‌ಎಸ್ ಅಣೆಕಟ್ಟೆಯಿಂದ ನಾಲೆಗಳಲ್ಲಿ ನೀರು ಹರಿಸಬೇಕು ಎಂದು ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಜಿಲ್ಲಾಡಳಿತ ಹಾಗೂ ಸರ್ಕಾರವನ್ನು ಆಗ್ರಹಿಸಿದರು.
ನಿತ್ಯ ನಡೆದಾಡುವ ದಾರಿಗಳ ಪಕ್ಕದಲ್ಲೇ ಕಬ್ಬು ಸೇರಿದಂತೆ ರೈತರು ಬೆಳೆದ ಇತರೆ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ. ಈ ಭಾಗದಲ್ಲಿ ಓಡಾಡುವ ಜಿಲ್ಲೆಯ ಶಾಸಕರುಗಳಿಗೆ ಕಣ್ಣಿಲ್ಲವೇ ಎಂದು ಪ್ರಶ್ನಿಸಿದರು.ಸ್ಥಳೀಯ ನಾಲೆಗಳಿಗೆ ನೀರು ಹರಿಸದೆ ನದಿ ಮೂಲಕ ತಮಿಳುನಾಡಿಗೆ ನೀರು ಹರಿಸುತ್ತಿರುವ ಬಗ್ಗೆ ರೈತರು ಕರೆ ಮಾಡಿ ತಿಳಿಸುತ್ತಿದ್ದಾರೆ. ರೈತರ ವಿಷಯದಲ್ಲಿ ಇಷ್ಟರ ಮಟ್ಟಿಗೆ ನಿರ್ಲಕ್ಷ್ಯೆ ತೋರುವುದಾದರೆ ನಾವು ಇದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಶಾಸಕರ ವಿರುದ್ಧ ಕಿಡಿಕಾರಿದರು.
ಕೆಆರ್ ಎಸ್ ಅಣೆಕಟ್ಟೆಯಲ್ಲಿ ಇನ್ನು 81ಅಡಿ ನೀರಿದೆ. ಈ ಹಿಂದೆ 70 ಅಡಿ ವರೆವಿಗೂ ನೀರು ಹರಿಸಿರುವ ಉದಾಹರಣೆಗಳಿಗೆ. ಹಾಗಾಗಿ ಬೆಳೆದು ನಿಂತಿರುವ ಬೆಳೆಗಳನ್ನ ರಕ್ಷಣೆ ಮಾಡಿಕೊಳ್ಳಲು ತಕ್ಷಣವೇ ನಾಲೆಗಳಲ್ಲಿ ಒಂದು ಕಟ್ಟು ನೀರು ಹರಿಸಬೇಕು. ಇಲ್ಲದಿದ್ದರೆ ಬೆಳೆ ಕೈಗೆ ಬಾರದೆ ರೈತರು ನಷ್ಟ ಅನುಭವಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.ತಪ್ಪುಗಳನ್ನು ಪ್ರಶ್ನೆ ಮಾಡಿದರೆ ವೇದಾಂತಿಗಳಂತೆ ಮಾತನಾಡುವ ಕೆಲ ನಾಯಕರು ರೈತರ ಜಮೀನುಗಳಿಗೆ ತೆರಳಿ ನೋಡಬೇಕು. ನಿಮ್ಮನ ಆಯ್ಕೆ ಮಾಡಿದ ರೈತರ ಬೆಳೆಗಳನ್ನು ಒಣಗಿಸಬೇಡಿ. ಅವರ ಶಾಪಕ್ಕೆ ಗುರಿಯಾಗಬೇಡಿ ಎಂದು ಆಗ್ರಹಿಸಿದರು.