ಹಲಗೂರು:
ವಳಗೆರೆದೊಡ್ಡಿ ಗ್ರಾಮದ ವಿದ್ಯಾಧಾರೆ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಪುಟಾಣಿ ಮಕ್ಕಳು ವೈದ್ಯರ ವಸ್ತ್ರವನ್ನು ಧರಿಸಿ ತಮ್ಮ ಸಹಪಾಠಿ ಮಕ್ಕಳಿಗೆ ತಪಾಸಣೆ ನಡೆಸುವ ಮೂಲಕ ವೈದ್ಯರ ದಿನವನ್ನು ವಿಶಿಷ್ಟವಾಗಿ ಆಚರಿಸಿದರು.ಪುಟಾಣಿ ಮಕ್ಕಳು ಸ್ಕೈಥಸ್ಕೋಪು, ವೈದ್ಯರ ವಸ್ತ್ರಗಳನ್ನು ಧರಿಸಿಕೊಂಡು ರೋಗಿಗಳನ್ನು ತಪಾಸಣೆ ಮಾಡುವ ರೀತಿ ಶಾಲೆ ಮಕ್ಕಳನ್ನು ತಪಾಸಣೆ ನಡೆಸಿದರು. ಯಾವ ರೋಗಿಗೆ ಯಾವ ಚಿಕಿತ್ಸೆ ನೀಡಬೇಕು ಎಂಬುದರ ಬಗ್ಗೆ ಸಭೆ ನಡೆಸುವುದು, ತಪಾಸಣೆ ಮಾಡಿಸಿಕೊಳ್ಳಲು ಸಾಲಿನಲ್ಲಿ ವಿದ್ಯಾರ್ಥಿಗಳು ಕುಳಿತಿರುವುದು ಕಂಡು ಬಂತು.
ಶಾಲೆ ಮೇಲ್ವಿಚಾರಕಿ ಎಚ್.ವಿ.ಶ್ವೇತಕುಮಾರಿ ವಿದ್ಯಾರ್ಥಿಗಳಿಗೆ ವೈದ್ಯರು ಉಪಯೋಗಿಸುವ ಸಲಕರಣೆಗಳ ಬಗ್ಗೆ ವಿವರವಾಗಿ ಅರ್ಥವಾಗುವ ರೀತಿಯಲ್ಲಿ ತಿಳಿಸಿಕೊಟ್ಟರು.ಶಾಲೆ ಪ್ರಾಂಶುಪಾಲರಾದ ಸಂಧ್ಯಾರಾಣಿ ಮಾತನಾಡಿ, ಪ್ರತಿ ವರ್ಷ ಜುಲೈ 1 ರಂದು ನಾವು ವೈದ್ಯರ ದಿನ (ಡಾಕ್ಟರ್ಸ್ ಡೇ) ವಾಗಿ ಆಚರಿಸುತ್ತೇವೆ. ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಡಾ.ಬಿಂದನ್ ಚಂದ್ರ ರಾಯ್ ಸ್ಮರಣಾರ್ಥ ಅವರ ಹುಟ್ಟಿದ ದಿನವನ್ನು ವೈದ್ಯರ ದಿನವಾಗಿ ಆಚರಿಸುತ್ತೇವೆ ಎಂದರು.
ಈ ವೇಳೆ ಶಾಲೆ ಸಂಸ್ಥಾಪಕ ಎಚ್.ವಿ.ಅಶ್ವಿನ್ ಕುಮಾರ್ ಸೇರಿದಂತೆ ಶಾಲೆ ಶಿಕ್ಷಕವೃಂದ ಇದ್ದರು.