ಮಂಗಳೂರು: ದೇಶದ ಹೊರಗಿನ ಶತ್ರುಗಳಿಂದ ದೇಶವನ್ನು ಸೈನಿಕರು ಕಾಯುತ್ತಾರೆ. ದೇಶದ ಒಳಗಿನ ಶತ್ರುಗಳ ಬಗ್ಗೆ ಎಚ್ಚರ ವಹಿಸಬೇಕಾದ್ದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ. ಅದನ್ನು ನಾವು ಪಾಲಿಸಬೇಕು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜೀ ಹೇಳಿದರು.
ಅವರು ಶನಿವಾರ ರಾಮಕೃಷ್ಣ ಆಶ್ರಮದ ಸಭಾಂಗಣದಲ್ಲಿ ಶ್ರೀಶಾ ಸೌಹಾರ್ದ ಸೊಸೈಟಿಯ ವತಿಯಿಂದ 27ನೇ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಇಂದಿನ ದಿನ ಭಾರತೀಯರ ಪಾಲಿಗೆ ಅತೀ ಪವಿತ್ರವಾದದ್ದು. ಮೋಸದಿಂದ ನಮ್ಮ ದೇಶದ ಕಾರ್ಗಿಲ್ ಗಡಿಯೊಳಗೆ ನುಗ್ಗಿದ ಪಾಕಿಸ್ತಾನದ ಸೈನಿಕರನ್ನು ಗಡಿಯಾಚೆಗೆ ಹೊರಗಟ್ಟಿ ದೇಶದ ಗಡಿಯನ್ನು ಮರಳಿ ಪಡೆದ ದಿನ. ನಮ್ಮ ವೀರ ಯೋಧರ ತ್ಯಾಗ ಬಲಿದಾನಗಳನ್ನು ಸ್ಮರಿಸುವ ದಿನ. ಈ ಉತ್ತಮ ಕೆಲಸವನ್ನು ಶ್ರೀಶಾ ಸೌಹಾರ್ದ ಸೊಸೈಟಿ ತುಂಬಾ ಶಿಸ್ತು ಮತ್ತು ಶ್ರದ್ಧೆಯಿಂದ ಆಯೋಜಿಸಿದೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಮಾತನಾಡಿ, ದೇಶದ ಭದ್ರತೆಯ ದೃಷ್ಟಿಯಿಂದ ಎಲ್ಲರೂ ಸೈನಿಕರಾಗಿ ಒಳ ಶತ್ರುಗಳಿಂದ ರಕ್ಷಿಸಬೇಕು. ದೇಶ ಮೊದಲು ಎಂಬುದು ನಮಗೆ ಮೊದಲು ಮನದಟ್ಟಾಗಬೇಕು. ಇಂತಹ ಕಾರ್ಯಕ್ರಮಗಳಿಗೆ ಮಕ್ಕಳು ಹೆಚ್ಚು ಭಾಗವಹಿಸುವಂತೆ ಮಾಡಬೇಕು. ಅವರಲ್ಲಿ ಸೈನಿಕರ ತ್ಯಾಗ ಬಲಿದಾನಗಳ ಬಗ್ಗೆ ಅರಿವು ಮೂಡಿಸಬೇಕು. ಶ್ರೀಶಾ ಸೊಸೈಟಿಯಂತ ಒಂದು ಆರ್ಥಿಕ ಸಂಸ್ಥೆ ಇಂತಹ ಸಮಯೋಚಿತ ದೇಶ ಕಟ್ಟುವ ಕೆಲಸ ಮಾಡುತ್ತಿರುವುದು ನಮಗೆ ಹೆಮ್ಮೆ ತಂದಿದೆ ಎಂದರು.ನಿವೃತ್ತ ಕರ್ನಲ್ ಎನ್.ಎಸ್.ಭಂಡಾರಿ ಕಾರ್ಗಿಲ್ ಯುದ್ಧದ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಪರಮವೀರಚಕ್ರವನ್ನು ಪದಕಗಳನ್ನು ಮರಣೋತ್ತರವಾಗಿ ಪಡೆದ ಯೋಧರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಲಾಯಿತು. ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದ ಗ್ರೂಪ್ ಕ್ಯಾಪ್ಟನ್ ಸುಧೀರ್ ಜಿ.ಅಮೀನ್, ಕರ್ನಲ್ ಪದ್ಮನಾಭ ಪ್ರಭು, ಕಮೊಡೋರ್ ಅತುಲ್ ಕುಮಾರ್ ರಸ್ತೋಗಿ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಬೆಂಗಳೂರು ನಿರ್ದೇಶಕಿ ಭಾರತಿ ಜಿ.ಭಟ್ ಮಾತನಾಡಿದರು.
ಶ್ರೀಶಾ ಸೌಹಾರ್ದ ಸೊಸೈಟಿಯ ಅಧ್ಯಕ್ಷ ಎಂ.ಎಸ್.ಗುರುರಾಜ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಶಾ ಸೊಸೈಟಿಯ ನಿರ್ದೇಶಕ ಪ್ರಸನ್ನ ಕುಮಾರ ವಂದಿಸಿದರು. ಸೊಸೈಟಿಯ ರಂಜನಾ ಹೆಗಡೆ ಮತ್ತು ಕುಸುಮಾ ಐತಾಳ್ ಪ್ರಾರ್ಥಿಸಿದರು. ನಿರೂಪಕ ಆರ್‌ಜೆ ಪ್ರಸನ್ನ ನಿರೂಪಿಸಿದರು.ಬಳಿಕ ಡಾ.ಸಿಂಧು ಭಟ್ ಅವರು ನಿರೂಪಿಸಿ, ತಯಾರಿಸಿದ ಕಾರ್ಗಿಲ್ ಯುದ್ಧ ಕುರಿತ ಸಾಕ್ಷಚಿತ್ರ ಪ್ರದರ್ಶಿಸಲಾಯಿತು.
-----