ಕೊಪ್ಪಳ: ವಿದ್ಯಾರ್ಥಿಗಳ ಜೀವನದಲ್ಲಿ ಅತ್ಯುತ್ತಮ ಘಟ್ಟವಾಗಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಕ್ಷಣಗಣನೆ ಆರಂಭವಾಗಿದೆ. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ 23989 ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ನೀಡಲಾಗಿದ್ದು, 74ಪರೀಕ್ಷಾ ಕೇಂದ್ರಗಳಲ್ಲಿ ಬುಧವಾರದಿಂದ ಪರೀಕ್ಷೆ ಬರೆಯಲಿದ್ದಾರೆ.
ಕಳೆದ ವರ್ಷ ಜಿಲ್ಲೆ ರಾಜ್ಯಮಟ್ಟದಲ್ಲಿ 30ನೇ ಸ್ಥಾನಕ್ಕೆ ಕುಸಿದಿತ್ತು. ಹೀಗಾಗಿ ಈ ಬಾರಿ 20ನೇ ಸ್ಥಾನದೊಳಗೆ ಬರುವುದಕ್ಕಾಗಿ ಶತಪ್ರಯತ್ನ ಮಾಡುತ್ತಿದೆ. ಹೀಗಾಗಿ ಈ ಬಾರಿ ಫಲಿತಾಂಶ ಹೆಚ್ಚಳ ಮಾಡುವುದಕ್ಕಾಗಿ ಶೈಕ್ಷಣಿಕ ಚಟುವಟಿಕೆ ಆರಂಭದ ದಿನಗಳಿಂದಲೇ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಮೇಲೆ ವಿಶೇಷ ನಿಗಾಯಿಟ್ಟು ಶಿಕ್ಷಣ ಇಲಾಖೆ ಕೆಲಸ ಆರಂಭಿಸಿದೆ. ಇದೀಗ ಕೊನೆಯ ಹಂತದ ಭಾಗವಾಗಿ ಪರೀಕ್ಷೆ ಆರಂಭವಾಗುತ್ತಿದ್ದು, ಶಿಕ್ಷಣ ಇಲಾಖೆ ಕೈಗೊಂಡ ಫಲ ಎಷ್ಟರ ಮಟ್ಟಿಗೆ ಫಲ ಕೊಡಲಿದೆ ಎಂಬುದು ಫಲಿತಾಂಶ ಬಂದ ತಿಳಿಯಲಿದೆ.ಅಧಿಕಾರಿಗಳಿಂದ ಶಾಲೆಗಳ ದತ್ತು, ಮಿಷನ್-40, ವಸತಿ ಶಾಲೆಗಳಿಗೆ ಸ್ಫೂರ್ತಿ ನಡೆ ಸೇರಿ ವಿವಿಧ ವಿಶೇಷ ಕಾರ್ಯಕ್ರಮ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಹಮ್ಮಿಕೊಂಡು ಫಲಿತಾಂಶ ಹೆಚ್ಚಳಕ್ಕೆ ಆದ್ಯತೆ ನೀಡಿರುವುದು ವಿಶೇಷವಾಗಿದೆ.
ಇಂದಿನಿಂದ ಪರೀಕ್ಷೆ: ಮಾ.18ರಂದು ಪ್ರಥಮ ಭಾಷೆ, ಮಾ.23ಕ್ಕೆ ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ, ಮಾ.25ರಂದು ದ್ವಿತೀಯ ಭಾಷೆ, ಮಾ.28ಕ್ಕೆ ಗಣಿತ, ಸಮಾಜಶಾಸ್ತ್ರ,ಮಾ.30ರಂದು ತೃತೀಯ ಭಾಷೆ ಹಾಗೂ ಎನ್‌ಎಸ್‌ಕ್ಯೂಎಫ್ ವಿಷಯಗಳು, ಏ.1ಕ್ಕೆ ಜಿಟಿಎಸ್ ವಿಷಯಗಳು ಮತ್ತು ಏ.2ರಂದು ಸಮಾಜ ವಿಜ್ಞಾನ ವಿಷಯ ಪರೀಕ್ಷೆ ಇರಲಿದೆ.ಕೊಪ್ಪಳ ತಾಲೂಕಿನಲ್ಲಿ-21, ಗಂಗಾವತಿ-14, ಕುಷ್ಟಗಿ-15, ಯಲಬುರ್ಗಾ-07, ಕೂಕನೂರು-08, ಕಾರಟಗಿ-05, ಕನಕಗಿರಿ ತಾಲೂಕಿನಲ್ಲಿ 4 ಸೇರಿ ಒಟ್ಟು 74 ಪರೀಕ್ಷಾ ಕೇಂದ್ರಗಳಲ್ಲಿ 11803ಬಾಲಕರು,12186ಬಾಲಕಿಯರು ಸೇರಿ 23989 ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ನೀಡಲಾಗಿದ್ದು, ಪರೀಕ್ಷೆ ಬರೆಯಲಿದ್ದಾರೆ.
ಒಟ್ಟು 25556ವಿದ್ಯಾರ್ಥಿಗಳು ಪ್ರಸಕ್ತ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪ್ರವೇಶಾತಿಗೆ ನೋಂದಣಿ ಮಾಡಿಕೊಂಡಿದ್ದರು. ಆದರೆ, ಹಾಜರಾತಿ ಕೊರತೆ ಸೇರಿ ನಾನಾ ಕಾರಣಗಳಿಂದ 1567ವಿದ್ಯಾರ್ಥಿಗಳಿಗೆ ಎಕ್ಸಾಮ್ ಪ್ರವೇಶ ಪತ್ರ ವಿತರಣೆಯಾಗಿಲ್ಲ ಎಂದು ತಿಳಿದು ಬಂದಿದೆ.
ಪರೀಕ್ಷಾ ಕೇಂದ್ರಕ್ಕೆ ಒಬ್ಬ ಮುಖ್ಯ ಅಧೀಕ್ಷಕರು ಹಾಗೂ ಪ್ರಶ್ನೆ ಪತ್ರಿಕೆ ಅಭಿರಕ್ಷಕರನ್ನು ನೇಮಿಸಲಾಗಿದೆ. 30ಮಾರ್ಗ ರಚಿಸಿದ್ದು, ತಲಾ ಒಬ್ಬರು ಮಾರ್ಗಾಧಿಕಾರಿ ನೇಮಿಸಲಾಗಿದೆ. ಮೊಬೈಲ್ ಸ್ಕಾಡ್ ನೇಮಿಸಲಾಗಿದ್ದು, ಪ್ರತಿ ಪರೀಕ್ಷಾ ಕೇಂದ್ರಕ್ಕೆ ಹಾಗೂ ಕುಷ್ಟಗಿ, ಕೊಪ್ಪಳ, ಗಂಗಾವತಿ, ಯಲಬುರ್ಗಾ ಕ್ಷೇತ್ರ ಶಿಕ್ಷಣಾಧಿಕಾರಿ ಆಯಾ ವಿಭಾಗಗಳ ಪ್ರಶ್ನೆ ಪತ್ರಿಕೆ ಪಾಲಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಎಸ್ಸೆಸ್ಸೆಲ್ಸಿ ಪರೀಕ್ಷೆ ಅಚ್ಚುಕಟ್ಟಾಗಿ ನಡೆಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ.ಇಂದಿನಿಂದ ಏಪ್ರಿಲ್ 2ರವರೆಗೆ ಪರೀಕ್ಷೆ ನಡೆಯಲಿವೆ. ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಯಾವುದೇ ತೊಂದರೆಯಾಗದಂತೆ ನೋಡಿಕೊಂಡು ಸೂಸೂತ್ರವಾಗಿ ಪರೀಕ್ಷೆ ನಡೆಸಲಾಗುವುದು ಎಂದು ಕೊಪ್ಪಳ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕ ಸೋಮಶೇಖರಗೌಡ ಪಾಟೀಲ್ ತಿಳಿಸಿದ್ದಾರೆ.