- ವಾಲ್ಮೀಕಿ ಸಮುದಾಯಕ್ಕೆ ಶೇ.7 ಮೀಸಲಾತಿಗಾಗಿ ಹೋರಾಟ: ಮಾಜಿ ಸಚಿವ ರಮೇಶ ಜಾರಕಿಹೊಳಿ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ವಾಲ್ಮೀಕಿ ನಾಯಕ (ಎಸ್‌ಟಿ) ಸಮುದಾಯಕ್ಕೆ ಸಿಗಬೇಕಾಗಿದ್ದ ಶೇ.7 ಮೀಸಲಾತಿ ಕಸಿದು, ಶೇ.3ಕ್ಕೆ ಇಳಿಸಿದ ಕಾಂಗ್ರೆಸ್ ಸರ್ಕಾರವು ಶಿಕ್ಷಣ ಮತ್ತು ಉದ್ಯೋಗದಲ್ಲಿ ಎಸ್‌ಟಿ ಸಮುದಾಯಕ್ಕೆ ಮಾಡುತ್ತಿರುವ ಘೋರ ಅನ್ಯಾಯ ಖಂಡಿಸಿ, ಶೇ.7ಕ್ಕೆ ಮೀಸಲಾತಿ ಹೆಚ್ಚಿಸುವಂತೆ ಒತ್ತಾಯಿಸಿ ಶೀಘ್ರವೇ ಬೀದರ್‌ನಿಂದ ಚಾಮರಾಜ ನಗರವರೆಗೆ ಬೃಹತ್ ಹೋರಾಟ ಹಮ್ಮಿಕೊಳ್ಳುವುದಾಗಿ ಶಾಸಕ, ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ.

ಇಲ್ಲಿನ ವಿನೋಬ ನಗರದ ದಾವಣಗೆರೆ- ಹರಿಹರ ಅರ್ಬನ್ ಕೋ ಬ್ಯಾಂಕ್ ಸಮುದಾಯ ಭವನದಲ್ಲಿ ಭಾನುವಾರ ಬಿಜೆಪಿ ಎಸ್‌ಟಿ ಮೋರ್ಚಾದಿಂದ ಸಂವಿಧಾನ ಬದ್ಧ ಶೇ.7ರ ಎಸ್‌ಟಿ ಮೀಸಲಾತಿ ಜಾರಿ ಆಗಲೇಬೇಕು ಎಂಬ ಕುರಿತು ಸಾಮಾಜಿಕ ನ್ಯಾಯಕ್ಕಾಗಿ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ಬೀದರ್‌ನಿಂದ ಚಾಮರಾಜ ನಗರದವರೆಗೆ ಹೋರಾಟವನ್ನು ನಡೆಸುವ ಮೂಲಕ ಎಸ್‌ಟಿ ಸಮುದಾಯಕ್ಕೆ ಸಿಗಬೇಕಾದ ಸಾಮಾಜಿಕ ನ್ಯಾಯ ಪಡೆಯುತ್ತೇವೆ ಎಂದರು.

ನಮ್ಮ ಸಮುದಾಯದ ನಾಯಕರೆಲ್ಲಾ ಒಂದೇ ವೇದಿಕೆಗೆ ಬಂದು, ರಾಜ್ಯಕ್ಕೆ ಒಳ್ಳೆಯ ಸಂದೇಶ ನೀಡಿದ್ದಾರೆ. ನಮ್ಮ ಹೋರಾಟ ಕೇವಲ ಶಾಸಕನಾಗುವುದಕ್ಕೆ ಮಾತ್ರ ಸೀಮಿತವಾಗಬಾರದು. ಸೋತಾಗ ಒಂದು ರೀತಿ, ಗೆದ್ದಾಗ ಮತ್ತೊಂದು ರೀತಿ ಆಗಬಾರದು. ನಾವೆಲ್ಲರೂ ಒಟ್ಟಾಗಿ ಹೋರಾಡಬೇಕು. ನಾನು ಸೇರಿದಂತೆ ಯಾರಿಂದಲೇ ತಪ್ಪಾಗಿದ್ರೂ ನಮ್ಮ ತಪ್ಪಿನಿಂದ ಸಮಾಜಕ್ಕೆ ಅನ್ಯಾಯ ಆಗಬಾರದು. ಸಮಾಜದ ಹೋರಾಟಕ್ಕೆ ನಾವು ಸದಾ ಸಿದ್ಧವಾಗಿರಬೇಕು ಎಂದು ಅವರು ತಿಳಿಸಿದರು.


ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಎಸ್‌ಟಿ ಸಮುದಾಯದ ಮೀಸಲಾತಿಯನ್ನು ಶೇ.3ರಿಂದ ಶೇ.7ಕ್ಕೆ ಹೆಚ್ಚಿಸಿತ್ತು. ಕಾಂಗ್ರೆಸ್ ಸರ್ಕಾರದಿಂದಾದ ಅನ್ಯಾಯ ವಿರುದ್ಧ ಹೋರಾಟ ಆರಂಭಿಸಿದ್ದೇವೆ. ಯಾರೋ ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ತಂದಿದ್ದು, ಇದರ ಹಿಂದೆಯೂ ಸಾಕಷ್ಟು ಜನರಿದ್ದಾರೆ. ತೋರಿಕೆಗೆ ಒಬ್ಬರ ಮುಖ ಕಂಡರೂ, ಅದರ ಹಿಂದೆ ದೊಡ್ಡ ದೊಡ್ಡ ಕೈಗಳಿವೆ. ರಾಜ್ಯ ಸರ್ಕಾರ ತಕ್ಷಣವೇ ಪ್ರಕಟಣೆ ಹೊರಡಿಸಿ, ಈಗ ನಡೆಯುತ್ತಿರುವ ಹುದ್ದೆಗಳ ಭರ್ತಿ ಪ್ರಕ್ರಿಯೆಯನ್ನು ಮುಂದುವರಿಸಲಿ. ಬೇರೆ ಜಾತಿಯ ಮಕ್ಕಳಿಗೂ ಉದ್ಯೋಗ ಸಿಗಲಿ. ಅದಕ್ಕೆ ನಮ್ಮ ಅಭ್ಯಂತರ ಇಲ್ಲ. ಆದರೆ, ಅದನ್ನು ಬಾಕಿ ಇಟ್ಟು, ನಮ್ಮ ಸಮಾಜಕ್ಕೆ ಬರಬೇಕಾದ ಮುಂದಿನ ಶೇ.4 ಮೀಸಲಾತಿ ನೌಕರಿಗಳನ್ನು ತುಂಬಿಕೊಳ್ಳಬೇಕು ಎಂದು ಹೇಳಿದರು.

ಹೋರಾಟಕ್ಕೆ ಸಜ್ಜಾಗಬೇಕು:

ಮಾಜಿ ಸಚಿವ ಬಿ.ಶ್ರೀರಾಮುಲು ಮಾತನಾಡಿ, ರಾಮಾಯಣದ ಹನುಮಂತನಿಗೆ ತನ್ನ ಶಕ್ತಿಯೇ ಅರಿವಿಲ್ಲದಿದ್ದಾಗ ಜಾಂಬವಂತ ಸೇರಿದಂತೆ ವಾನರ ಸೇನೆ, ಪ್ರಭು ಶ್ರೀರಾಮಚಂದ್ರ ಎಲ್ಲರೂ ಸೇರಿ, ಆಂಜನೇಯನಿಗೆ ಶಕ್ತಿಯನ್ನು ನೆನಪಿಸುತ್ತಾರೆ. ಆಗ ಹನುಮಂತನಿಗೆ ತನ್ನ ಅಪಾರ ಶಕ್ತಿಯ ಅರಿವಾಗುತ್ತದೆ. ಅದೇ ರೀತಿ ವಾಲ್ಮೀಕಿ ನಾಯಕ ಸಮುದಾಯ ಬಾಂಧವರು ಸಹ ಈಗ ಶೇ.7 ಮೀಸಲಾತಿಗಾಗಿ ಒಂದಾಗಿ ಹೋರಾಟಕ್ಕೆ ಸಜ್ಜಾಗಬೇಕು. ನಾವೆಲ್ಲರೂ ಹಿಂದಿನ ನಮ್ಮ ಸರ್ಕಾರ ನೀಡಿದ್ದ ಶೇ.7 ಮೀಸಲಾತಿ ನೀಡುವಂತೆ ಹೋರಾಟ ನಡೆಸಿದ್ದು, ಸಮುದಾಯವೂ ಈ ಹೋರಾಟಕ್ಕೆ ಶಕ್ತಿ ತುಂಬಬೇಕು ಎಂದು ಮನವಿ ಮಾಡಿದರು.

ಮಾಜಿ ಸಚಿವ ರಾಜು ಗೌಡ ಮಾತನಾಡಿ, ನಾವೆಲ್ಲರೂ ಹುಟ್ಟು ಹೋರಾಟಗಾರರಾಗಿದ್ದು, ಹುಟ್ಟು ನಾಯಕರು. ಹುಟ್ಟುತ್ತಲೇ ನಾಯಕರಾಗಿದ್ದಕ್ಕೆ ಇಂದು ನಮಗೆ ಇಂತಹ ಪರಿಸ್ಥಿತಿ ಬಂದಿದೆ. ಭಕ್ತ ಕಣ್ಣಪ್ಪ ಶಿವನಿಗೆ ಕಣ್ಣನ್ನು ಕೊಟ್ಟವನು. ಏಕಲವ್ಯ ಗುರು ಭಕ್ತಿಯಾಗಿ ತನ್ನ ಹೆಬ್ಬರಳನ್ನೇ ಕತ್ತರಿಸಿ ಕೊಟ್ಟವನು. ಅಂದಿನಿಂದ ಇಂದಿನವರೆಗೂ ನಮ್ಮ ಸಮುದಾಯದವರು ಎಲ್ಲ ತ್ಯಾಗ ಮಾಡಿಕೊಂಡೇ ಬಂದಿದ್ದಾರೆಯೇ ಹೊರತು, ಯಾರಿಗೂ ಏನನ್ನೂ ಕೇಳಿಲ್ಲ. ಹಿಂದಿನ ನಮ್ಮ ಸರ್ಕಾರದಲ್ಲಿ ಶ್ರೀರಾಮುಲುಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲಿಲ್ಲ. ರಮೇಶ ಜಾರಕಿಹೊಳಿ ಸಚಿವ ಸ್ಥಾನವನ್ನೂ ಕಿತ್ತುಕೊಳ್ಳಲಾಯಿತು. ಆದರೂ ಯಾರೂ ಅದನ್ನು ಪ್ರಶ್ನೆಸಲೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು, ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ, ಎಚ್.ಪಿ. ರಾಜೇಶ, ವಿಪ ಸದಸ್ಯ ಶಾಂತರಾಮ ಸಿದ್ಧಿಕಿ, ವಿಪ ಸದಸ್ಯೆ ಹೇಮಲತಾ ನಾಯಕ, ಮೈಸೂರಿನ ಅಪ್ಪಣ್ಣ, ಡಿ.ಎಂ.ಸಾಲಿ, ವಾದಿರಾಜು, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ದಕ್ಷಿಣ ಕ್ಷೇತ್ರದ ಪರಾಜಿತ ಅಭ್ಯರ್ಥಿ ಶ್ರೀನಿವಾಸ ಟಿ.ದಾಸಕರಿಯಪ್ಪ, ಬಸವರಾಜ ಕುಂದುಗಿ, ಶಿವಕುಮಾರ, ಶಿವಪ್ರಕಾಶ, ಮಾಜಿ ಶಾಸಕರಾದ ಸೋಮಲಿಂಗಪ್ಪ, ಸಿದ್ದರಾಜು, ತಿಪ್ಪುರಾಜು, ಮಾಜಿ ಸಂಸದ ಸಣ್ಣ ಫಕೀರಪ್ಪ ಇತರರು ಇದ್ದರು.

- - -

-14ಕೆಡಿವಿಜಿ1ಜೆಪಿಜಿ:

ದಾವಣಗೆರೆಯಲ್ಲಿ ಭಾನುವಾರ ಬಿಜೆಪಿ ಎಸ್‌ಟಿ ಮೋರ್ಚಾದಿಂದ ಸಂವಿಧಾನ ಬದ್ಧ ಶೇ.7ರ ಎಸ್‌ಟಿ ಮೀಸಲಾತಿ ಜಾರಿ ಆಗಲೇಬೇಕು ಎಂಬ ಕುರಿತು ನಡೆದ ಸಾಮಾಜಿಕ ನ್ಯಾಯಕ್ಕಾಗಿ ಜಾಗೃತಿ ಸಮಾವೇಶವನ್ನು ಬಿ.ಶ್ರೀರಾಮುಲು, ರಮೇಶ ಜಾರಕಿಹೊಳಿ, ರಾಜು ಗೌಡ ಇನ್ನಿತರ ಗಣ್ಯರು ಉದ್ಘಾಟಿಸಿದರು.