ಕನ್ನಡಪ್ರಭ ವಾರ್ತೆ ಮಂಡ್ಯ

ಕರ್ನಾಟಕ ಅಮೆಚೂರ್ ನೆಟ್‌ಬಾಲ್ ಅಸೋಸಿಯೇಷನ್ ಮತ್ತು ಮಂಡ್ಯ ನೆಟ್‌ಬಾಲ್ ಅಸೋಸಿಯೇಷನ್ ಸಂಯುಕ್ತಾಶ್ರಯದಲ್ಲಿ ರಾಜ್ಯ ಮಟ್ಟದ ಪುರುಷ ಮತ್ತು ಮಹಿಳೆಯರ ನೆಟ್‌ಬಾಲ್ ಪಂದ್ಯಾವಳಿಗೆ ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಭಾನುವಾರ ಅದ್ಧೂರಿ ಚಾಲನೆ ನೀಡಲಾಯಿತು.

ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ರಾಜ್ಯಮಟ್ಟದ ‘ಫಾಸ್ಟ್-ಪೈವ್’ ನೆಟ್‌ಬಾಲ್ ಕ್ರೀಡಾಕೂಟ ಇದಾಗಿದ್ದು, ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ತಲಾ 15 ತಂಡಗಳು ಕಣಕ್ಕಿಳಿದಿವೆ. ರಾಜ್ಯದ ವಿವಿಧೆಡೆಯಿಂದ 500ಕ್ಕೂ ಹೆಚ್ಚು ಕ್ರೀಡಾಪಟುಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಪಿ.ರವಿಕುಮಾರ್, ಕ್ರೀಡೆಯಲ್ಲಿ ಸೋಲು ಮತ್ತು ಗೆಲುವಿಗಿಂತ ಕ್ರೀಡಾಪಟುಗಳ ಭಾಗವಹಿಸುವಿಕೆ ಮುಖ್ಯ. ಭಾರತೀಯರು ನೆಟ್‌ಬಾಲ್ ಕ್ರೀಡೆಯನ್ನು ಹೆಚ್ಚು ಪ್ರೀತಿಸುತ್ತಿದ್ದು, ಇದೀಗ ಒಲಿಂಪಿಕ್ಸ್‌ಗೂ ಸೇರ್ಪಡೆಯಾಗಿದೆ. ಇಂತಹ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಮಂಡ್ಯ ಆತಿಥ್ಯ ವಹಿಸಿರುವುದು ಹೆಮ್ಮೆಯ ವಿಚಾರ ಎಂದರು.

ಮಂಡ್ಯದಲ್ಲಿ ಕ್ರೀಡಾ ಮೂಲಸೌಕರ್ಯಗಳ ಅಭಿವೃದ್ಧಿಗೆ ಸರ್ಕಾರ ಒಟ್ಟು 10 ಕೋಟಿ ರು. ಅನುದಾನವನ್ನು ಬಿಡುಗಡೆ ಮಾಡಿದೆ. ಅಂತಾರಾಷ್ಟ್ರೀಯ ಗುಣಮಟ್ಟದ ಬ್ಯಾಸ್ಕೆಟ್‌ಬಾಲ್ ಕ್ರೀಡಾಂಗಣ ನಿರ್ಮಾಣಕ್ಕಾಗಿ 3.5 ಕೋಟಿ ರು. ಬಿಡುಗಡೆಯಾಗಿದ್ದು, ಮುಂದಿನ ವಾರವೇ ಭೂಮಿಪೂಜೆ ನೆರವೇರಲಿದೆ. ಒಂದು ವರ್ಷದೊಳಗೆ ಇದರ ಕಾಮಗಾರಿ ಪೂರ್ಣಗೊಳ್ಳಲಿದೆ. ಮಂಡ್ಯ ವಿಶ್ವವಿದ್ಯಾಲಯದಲ್ಲಿ ಅಪೂರ್ಣಗೊಂಡಿದ್ದ ಒಳಾಂಗಣ ಕ್ರೀಡಾಂಗಣ ಕಾಮಗಾರಿಗೆ 2 ಕೋಟಿ ರು. ನೀಡಿದ್ದು ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿದೆ. ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣಕ್ಕೆ 1 ಕೋಟಿ ರು. ನೀಡಿ ಕೆಲಸ ಆರಂಭವಾಗಿದೆ. ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣಕ್ಕೆ ಫ್ಲಡ್‌ಲೈಟ್ (ಬೆಳಕಿನ ವ್ಯವಸ್ಥೆ) ಅಳವಡಿಸಲು 3.5 ಕೋಟಿ ರು. ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ವಿವರಿಸಿದರು.


ಎಸ್.ಬಿ.ಎಜುಕೇಷನ್ ಟ್ರಸ್ಟ್‌ನ ಕಾರ್ಯದರ್ಶಿ ಡಾ.ಮೀರಾ ಶಿವಲಿಂಗಯ್ಯ ಮಾತನಾಡಿ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಆರಂಭವಾದ ನೆಟ್‌ಬಾಲ್ ಕ್ರೀಡೆ ಪ್ರಸ್ತುತ ಪ್ರಪಂಚದಾದ್ಯಂತ ಅತ್ಯಂತ ಜನಪ್ರಿಯವಾಗುತ್ತಿದೆ. ಕಾಮನ್‌ವೆಲ್ತ್ ಗೇಮ್ಸ್‌ನಲ್ಲೂ ಆಡಲಾಗುತ್ತಿದೆ. ಇದೀಗ ಈ ಆಟವನ್ನು ಒಲಿಂಪಿಕ್ಸ್‌ ಸಮಿತಿಯೂ ಒಪ್ಪಿಕೊಂಡಿದ್ದು, ಮುಂಬರುವ ದಿನಗಳಲ್ಲಿ ಇದು ಅಧಿಕೃತ ಒಲಿಂಪಿಕ್ ಕ್ರೀಡೆಯಾಗಿ ರೂಪುಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಾಗತಿಕ ಮಟ್ಟದಲ್ಲಿ ಕ್ರೀಡಾಕ್ಷೇತ್ರದಲ್ಲಿ ಮಹಿಳಾ ತರಬೇತುದಾರರ ಕೊರತೆ ಎದ್ದು ಕಾಣುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಶೇ. 23ರಷ್ಟು ಮಾತ್ರ ಮಹಿಳಾ ಕೋಚ್‌ಗಳಿದ್ದರು ಹಾಗೂ ಭಾರತದಲ್ಲಿ ಈ ಪ್ರಮಾಣ ಕೇವಲ ಶೇ. 13ರಷ್ಟಿದೆ ಎಂದು ಅಂಕಿ-ಅಂಶಗಳನ್ನು ನೀಡಿದರು. ಈ ನಿಟ್ಟಿನಲ್ಲಿ ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಪ್ರೋತ್ಸಾಹಿಸಿದರು.

ವೇದಿಕೆ ಕಾರ್ಯಕ್ರಮದಲ್ಲಿ ಜಿಲ್ಲಾ ನೆಟ್‌ಬಾಲ್ ಅಸೋಸಿಯೇಷನ್ ಅಧ್ಯಕ್ಷ ಎಂ.ಆರ್. ಮಂಜು ಮುತ್ತಗೆರೆ, ಸಮಾಜ ಸೇವಕ ಯೋಗಾನಂದ ಕೆರಗೋಡು, ‘ಎಲ್ಲರೊಳಗು ಒಂದಾಗು’ ಟ್ರಸ್ಟ್‌ನ ಅಧ್ಯಕ್ಷ ವಿನಯ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ನಾಗೇಶ್, ಅಂಬರೀಶ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಬೇಲೂರು ಸೋಮಶೇಖರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.