ಕನಕಗಿರಿ: ಸಿಎಂ ಡಿ.ಕೆ.ಶಿವಕುಮಾರ ನೂತನ ಸಚಿವ ಸಂಪುಟದಲ್ಲಿ ಕನಕಗಿರಿ ಶಾಸಕ ಶಿವರಾಜ ತಂಗಡಗಿ ಹೆಸರು ಅಧೀಕೃತವಾಗುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಇಲ್ಲಿನ ವಾಲ್ಮೀಕಿ ವೃತ್ತದಲ್ಲಿ ಪಟಾಕಿ ಸಿಡಿಸಿ ಸೋಮವಾರ ಸಂಭ್ರಮಿಸಿದರು.

ಯುವ ಮುಖಂಡ ರಾಮಣ್ಣ ಆಗೋಲಿ ಮಾತನಾಡಿ, ಸಿದ್ರಾಮಯ್ಯನವರ ಆಡಳಿತಾವಧಿಯಲ್ಲಿ ಶಿವರಾಜ ತಂಗಡಗಿ ಜನರಿಗೆ ಹತ್ತಿರವಾಗಿ ಕೆಲಸ ಮಾಡಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಹೊಸ ಕ್ರಾಂತಿ ಮಾಡಿ ದಕ್ಷತೆ ಮೆರೆದಿದ್ದಾರೆ. ಯಾವುದೇ ಕಪ್ಪುಚುಕ್ಕೆ ಇಲ್ಲದೆ ಉತ್ತಮ ಆಡಳಿತ ನೀಡಿರುವ ಶಿವರಾಜ ತಂಗಡಗಿಗೆ ಸಿಎಂ ಡಿ.ಕೆ.ಶಿವಕುಮಾರ ಸಂಪುಟದಲ್ಲಿ ಸಚಿವ ಸ್ಥಾನ ದೊರೆತಿರುವುದು ಖುಷಿ ತಂದಿದೆ ಎಂದರು.

ಇದಕ್ಕೂ ಮೊದಲು ಕಾರ್ಯಕರ್ತರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಡಿ.ಕೆ.ಶಿವಕುಮಾರ, ಡಿಸಿಎಂ ಪರಮೇಶ್ವರ, ಮಾಜಿ ಸಿಎಂ ಸಿದ್ರಾಮಯ್ಯ ಹಾಗೂ ಸಚಿವ ಶಿವರಾಜ ತಂಗಡಗಿಗೆ ಜೈಕಾರ ಕೂಗಿದರು. ಬಳಿಕ ವಾಲ್ಮೀಕಿ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಪಟಾಕಿ ಸಿಡಿಸಿ ಪರಸ್ಪರ ಸಿಹಿ ಹಂಚಿ ಸಂಭ್ರಮಾಚರಿಸಿದರು.

ಈ ವೇಳೆ ಪಪಂ ಸದಸ್ಯರಾದ ಸಂಗಪ್ಪ ಸಜ್ಜನ್, ಸಿದ್ದೇಶ ಕಲುಬಾಗಿಲಮಠ, ರಾಕೇಶ ಕಂಪ್ಲಿ, ವೆಂಕಟೇಶ ಕುಲಕರ್ಣಿ, ಹೊನ್ನೂರುಸಾಬ್‌ ಉಪ್ಪು,ಶರೀಫ ವಟಪರವಿ, ತಿಮ್ಮಣ್ಣ ಚಲುವಾದಿ, ರುದ್ರಮುನಿ, ಸಂತೋಷ ಹಾದಿಮನಿ, ಮಹಾಂತೇಶ ಕುಂಬಾರ, ನಿರುಪಾದಿ ಗೊಲ್ಲರ್, ಬಸವರಾಜ ಭಾವಿಕಟ್ಟಿ, ರಾಮಣ್ಣ ವಡ್ಡರ್ ಸೇರಿದಂತೆ ಇತರರು ಇದ್ದರು.

ಮೂರನೇ ಬಾರಿಗೆ ಆಯ್ಕೆಯಾದ ಶಿವರಾಜ ತಂಗಡಗಿ ನಾಲ್ಕನೇ ಬಾರಿ ಪ್ರಮಾಣ ಸ್ವೀಕರಿಸಿ ರಾಜ್ಯದ ಮಂತ್ರಿಯಾಗಿದ್ದಾರೆ. ಹೊಸ ಹೊಸ ಯೋಜನೆಗಳ ಮೂಲಕ ಕ್ಷೇತ್ರ ಅಭಿವೃದ್ಧಿಪಡಿಸಲಿದ್ದಾರೆ. ಮಾಜಿ ಸಿಎಂ ಹಾಗೂ ಹಾಲಿ ಸಿಎಂಗಳ ಆಡಳಿತಾವಧಿಯಲ್ಲಿ ತಂಗಡಗಿ ಸಚಿವರಾಗಿರುವುದಕ್ಕೆ ಸಂತೋಷವಾಗಿದೆ ಎಂದು ಪಪಂ ಉಪಾಧ್ಯಕ್ಷ ಕಂಠಿರಂಗಪ್ಪ ತಿಳಿಸಿದ್ದಾರೆ.