- 157 ತಾಲೂಕುಗಳಲ್ಲಿ ಮಳೆ ಇಲ್ಲ, 17 ತಾಲೂಕುಗಳಲ್ಲಿ ತೀವ್ರ ಬರ । 31 ರೈತರು ಆತ್ಮಹತ್ಯೆ

- - -

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕಳೆದ 100 ವರ್ಷಗಳಲ್ಲಿ ರಾಜ್ಯದಲ್ಲಿ ಕಂಡು ಕೇಳರಿಯದ ಅನಾವೃಷ್ಟಿ ಉಂಟಾಗಿದೆ. ರಾಜ್ಯದಲ್ಲಿ 157 ತಾಲೂಕುಗಳಲ್ಲಿ ಅನಾವೃಷ್ಠಿ ಇದೆ. 17 ತಾಲೂಕುಗಳು ತೀವ್ರ ಬರಪೀಡಿತವಾಗಿದೆ. ಕಳೆದ ಮೂರು ತಿಂಗಳಲ್ಲಿ 31 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೂ ಯಾವ ಅಧಿಕಾರಿ ಕೂಡ ರೈತರ ಜಮೀನಿಗೆ ಹೋಗಿಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಕಿಡಿಕಾರಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಎನ್‌ಡಿಆರ್‌ಎಫ್ ಅನುದಾನವನ್ನು ನೀಡಿ ನೆರವಿಗೆ ಬರಬೇಕು ಎಂದು ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ. ಆದರೆ, ರಾಜ್ಯ ಸರ್ಕಾರ ಇದೂವರೆಗೆ ಎಷ್ಟು ಹೆಕ್ಟೇರ್ ಬೆಳೆ ನಷ್ಟವಾಗಿದೆ ಎಂಬ ವರದಿ ಸೂಚಿಸಿಲ್ಲ. ಅದಕ್ಕಾಗಿ ವಿಶೇಷ ಪ್ರಯತ್ನವನ್ನೂ ಮಾಡಲಿಲ್ಲ. ಕೇವಲ ಪರಿಹಾರ ಕೊಡಿ ಎಂದು ಕೇಂದ್ರಕ್ಕೆ ಪತ್ರ ಬರೆದರೆ ಸಾಕೆ ಎಂದು ಪ್ರಶ್ನಿಸಿದರು.


ರೈತರು ತಾವು ಅನುಭವಿಸುತ್ತಿರುವ ಸಂಕಷ್ಟವನ್ನು ಹೇಳಿಕೊಳ್ಳಲು ರಾಜ್ಯದಲ್ಲಿ ಈಗ ಜಿಲ್ಲಾ ಉಸ್ತುವಾರಿ ಸಚಿವರೂ ಇಲ್ಲವಾಗಿದೆ. ಇನ್ನು ಕ್ಯಾಬಿನೆಟ್ ಪೂರ್ಣ ಮಾಡಲು ಆಗಿಲ್ಲ. ಕೇಂದ್ರದ ಕಾಂಗ್ರೆಸ್ ನಾಯಕರು ರಾಜ್ಯ ನಾಯಕರನ್ನು ಗಣನೆಗೆ ತೆಗೆದುಕೊಂಡಿಲ್ಲ. ಸ್ವತಃ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಯವರು ಸಂಪುಟ ವಿಸ್ತರಣೆಯ ಬಗ್ಗೆ ನನಗೇನೂ ಗೊತ್ತಿಲ್ಲ. ದೆಹಲಿಯಿಂದ ಬಂದವರಿಗೆ ಕೇಳಿ ಅನ್ನುತ್ತಿದ್ದಾರೆ. ನೀವು ಯಾರನ್ನಾದರೂ ಸಚಿವನ್ನಾಗಿ ಮಾಡಿ, ಅದಕ್ಕಿಂತ ಮೊದಲು ಜನರ ಸಂಕಷ್ಟಕ್ಕೆ ಸ್ಪಂದಿಸಿ ಎಂದು ಕುಟುಕಿದರು.

ಬಣಗಳ ನಡುವೆ ಪೈಪೋಟಿ:

ರಾಜ್ಯ ಸರ್ಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಣಗಳ ನಡುವಿನ ಪೈಪೋಟಿಯಿಂದ ಸಚಿವ ಸಂಪುಟ ವಿಸ್ತರಣೆ ವಿಳಂಬವಾಗಿದೆ. ಅದರ ಪರಿಣಾಮವಾಗಿ ಆಡಳಿತ ಸಂಪೂರ್ಣ ಕುಂಠಿತಗೊಂಡಿದೆ. ಸಿದ್ದರಾಮಯ್ಯ ಅವರದ್ದೇ ಒಂದು ಸಚಿವರ ಪಟ್ಟಿ, ಡಿ.ಕೆ. ಶಿವಕುಮಾರ್ ಅವರದ್ದೇ ಮತ್ತೊಂದು ಪಟ್ಟಿ. ಇಬ್ಬರೂ ತಮ್ಮ ತಮ್ಮ ಬೆಂಬಲಿಗರಿಗೆ ಸಚಿವ ಸ್ಥಾನ ಕೊಡಿಸಲು ಪಟ್ಟು ಹಿಡಿದಿರುವುದರಿಂದ ಸಂಪುಟ ವಿಸ್ತರಣೆ ಸಾಧ್ಯವಾಗುತ್ತಿಲ್ಲ. ಕಳೆದ ಹಲವು ತಿಂಗಳುಗಳಿಂದ ಇದೇ ಗೊಂದಲ ಮುಂದುವರಿದಿದೆ. ಕೂಡಲೇ ಸಂಪುಟ ವಿಸ್ತರಣೆ ಮಾಡಬೇಕು. ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಿಸಿ, ರೈತರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಷ್ಟ್ರಭಕ್ತರ ಬಳಗದ ಪ್ರಮುಖರಾದ ಕೆ.ಈ. ಕಾಂತೇಶ್, ಬಾಲು, ಈ.ವಿಶ್ವಾಸ್, ಮೋಹನ್ ಜಾದವ್, ಅನಿತಾ, ಕೆಂಪಮ್ಮ, ಶಿವಾಜಿ, ಮಂಜುನಾಥ್, ದೊರೆ, ಸುಧಾ, ಉಮೇಶ್ ಆರಾಧ್ಯ ಮತ್ತಿತರರಿದ್ದರು.

- - -

(ಕೋಟ್‌) ಅನೇಕ ಜಿಲ್ಲೆಗಳಲ್ಲಿ ಶೇ.81ರಷ್ಟು ಮಳೆ ಕೊರತೆಯಾಗಿದೆ. ಮಳೆ ಇಲ್ಲದೆ ಬಿತ್ತನೆ ನಾಶವಾಗಿದೆ. ಮೇವು ಸೀಗದ ಕಾರಣ ರೈತರು ₹1.50 ಲಕ್ಷ ಬೆಲೆಬಾಳುವ ರಾಸುಗಳನ್ನು ಕೇವಲ ₹50 ಸಾವಿರಗಳಿಗೆ ಮಾರುತ್ತಿದ್ದಾರೆ. ಇನ್ನೂ ಕೆಲವೆಡೆ ಅತಿ ಕಡಿಮೆ ಬೆಲೆಗೂ ದನಗಳನ್ನು ಮಾರಾಟ ಮಾಡುತ್ತಿದ್ದಾರೆ. ಇವೆಲ್ಲವೂ ಕಸಾಯಿಖಾನೆಗೆ ಹೋಗುತ್ತಿವೆ. ಜಾನುವಾರುಗಳಿಗೆ ಮೇವಿಲ್ಲ. ಇಷ್ಟೊಂದು ಬೇಜಾವಾಬ್ದಾರಿ ಸರ್ಕಾರ ರಾಜ್ಯದ ಇತಿಹಾಸದಲ್ಲಿ ಕಂಡಿರಲಿಲ್ಲ.

- ಕೆ.ಎಸ್‌.ಈಶ್ವರಪ್ಪ, ಮಾಜಿ ಡಿಸಿಎಂ.

- - -

(ಟಾಪ್‌ ಕೋಟ್‌) ಸಿಂಗಟಾಲೂರು ಏತ ನೀರಾವರಿಯಿಂದ ಸಂಗ್ರಹಿಸಿದ ನೀರು ತಡೆಗೋಡೆ ಬಿರುಕು ಕಂಡಿದ್ದರಿಂದ ೩ವರೆ ಟಿಎಂಸಿಯಷ್ಟು ನೀರು ಪೋಲಾಗಿದೆ. ಜನ ಧಂಗೆ ಏಳುವ ಮುಂಚೆ ಸರ್ಕಾರ ಎಚ್ಚೆತ್ತು ಸಮರೋಪಾದಿಯಲ್ಲಿ ಬರ ನಿರ್ಮೂಲನೆಗೆ ನೆರವಾಗಬೇಕು.

- ಕೆ.ಎಸ್‌.ಈಶ್ವರಪ್ಪ, ಮಾಜಿ ಸಚಿವ.

- - -

-18ಎಸ್‌ಎಂಜಿಕೆಪಿ06:

ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಶನಿವಾರ ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.