ರಾಣಿಬೆನ್ನೂರು ಚೌಡೇಶ್ವರಿ ಜಾತ್ರೆಯಲ್ಲಿ ಪ್ರಾಣಿ ಬಲಿ ತಡೆಯಿರಿ-ದಯಾನಂದ ಸ್ವಾಮೀಜಿ

| Published : Jan 10 2025, 12:45 AM IST

ರಾಣಿಬೆನ್ನೂರು ಚೌಡೇಶ್ವರಿ ಜಾತ್ರೆಯಲ್ಲಿ ಪ್ರಾಣಿ ಬಲಿ ತಡೆಯಿರಿ-ದಯಾನಂದ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಣಿಬೆನ್ನೂರು ನಗರದಲ್ಲಿ ಜ.12ರಿಂದ 18ರವರೆಗೆ ನಡೆಯುವ ಗಂಗಾಜಲ ಶ್ರೀ ಚೌಡೇಶ್ವರಿದೇವಿಯ ಜಾತ್ರಾಮಹೋತ್ಸವದಲ್ಲಿ ಪ್ರಾಣಿ ಬಲಿ ತಡೆಯಲು ಜಿಲ್ಲಾಡಳಿತ ದಿಟ್ಟ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಅಧಿಕಾರಿಗಳ ಮೇಲೆ ನ್ಯಾಯಾಂಗ ನಿಂದನೆ ಕೇಸ್ ಹಾಕಲಾಗುವುದು ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿಯ ಅಧ್ಯಕ್ಷ ದಯಾನಂದ ಸ್ವಾಮೀಜಿ ಎಚ್ಚರಿಸಿದರು.

ಹಾವೇರಿ: ರಾಣಿಬೆನ್ನೂರು ನಗರದಲ್ಲಿ ಜ.12ರಿಂದ 18ರವರೆಗೆ ನಡೆಯುವ ಗಂಗಾಜಲ ಶ್ರೀ ಚೌಡೇಶ್ವರಿದೇವಿಯ ಜಾತ್ರಾಮಹೋತ್ಸವದಲ್ಲಿ ಪ್ರಾಣಿ ಬಲಿ ತಡೆಯಲು ಜಿಲ್ಲಾಡಳಿತ ದಿಟ್ಟ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಅಧಿಕಾರಿಗಳ ಮೇಲೆ ನ್ಯಾಯಾಂಗ ನಿಂದನೆ ಕೇಸ್ ಹಾಕಲಾಗುವುದು ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿಯ ಅಧ್ಯಕ್ಷ ದಯಾನಂದ ಸ್ವಾಮೀಜಿ ಎಚ್ಚರಿಸಿದರು. ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐದು ವರ್ಷಕ್ಕೊಮ್ಮೆ ನಡೆಯುವ ರಾಣಿಬೆನ್ನೂರಿನ ಗಂಗಾಜಲ ಶ್ರೀ ಚೌಡೇಶ್ವರಿದೇವಿ ಜಾತ್ರೆಯ ಸಂದರ್ಭದಲ್ಲಿ ದೇವರ ಹೆಸರಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪ್ರಾಣಿಬಲಿ ಕೊಡುತ್ತಿರುವ ಮಾಹಿತಿ ಇದೆ. ಇದು ಶಿಕ್ಷಾರ್ಹ ಅಪರಾಧ. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯವರು ಜಾತ್ರೆ ಮೊದಲೇ ಜನಜಾಗೃತಿ ಮೂಡಿಸಬೇಕು. ದೇವರ ಹೆಸರಲ್ಲಿ ಹರಕೆ ಹೊತ್ತು ಪ್ರಾಣಿ ಬಲಿ ನೀಡುವ ಬದಲು ಜೀವರಕ್ಷಾತ್ಮಕ ಹರಕೆ ಹೊರಬೇಕು. ಧರ್ಮ ಹಾಗೂ ದೇವರ ಹೆಸರಲ್ಲಿ ಪ್ರಾಣಿ ಬಲಿ ಕೊಡುವುದು ಕೊನೆಯಾಗಬೇಕು ಎಂದರು. ದೇವಾಲಯಗಳ ಆವರಣದಲ್ಲಿ ಪ್ರಾಣಿಗಳನ್ನು ಬಲಿಕೊಟ್ಟು ಪವಿತ್ರ ಸ್ಥಳಗಳನ್ನು ಕಸಾಯಿಖಾನೆಗಳಾಗಿ ಮಾಡಬೇಡಿ. ದೇವಾಲಯಗಳು ವಧಾಲಯಗಳಾಗದೇ, ದಿವ್ಯಾಲಯಯಗಳಾಗಬೇಕು. ದೇವರ ಹೆಸರಿನಲ್ಲಿ ದೇವಸ್ಥಾನದ ಆವರಣ, ಸುತ್ತಮುತ್ತ, ರಸ್ತೆಗಳಲ್ಲಿ ಕೋಣ, ಕುರಿ, ಆಡು, ಕೋಳಿ ಇತರ ಪ್ರಾಣಿಗಳನ್ನು ಬಲಿ ಕೊಡುವುದು ಕಾನೂನು ಪ್ರಕಾರ ಅಪರಾಧವಾಗಿದೆ. ರಾಣಿಬೆನ್ನೂರಿನ ಗಂಗಾಜಲ ಚೌಡೇಶ್ವರಿದೇವಿ ಜಾತ್ರೆಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಜಾತ್ರೆ ಸಂದರ್ಭದಲ್ಲೇ ಪ್ರಾಣಿಬಲಿ ತಡೆಯಲು ಹೋದರೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುವ ಸಾಧ್ಯತೆ ಇದೆ. ಏಕ ವ್ಯಕ್ತಿಯಿಂದ ಏನನ್ನೂ ಮಾಡಲು ಸಾಧ್ಯವಿಲ್ಲ. ಹೀಗಾಗಿ ಜಿಲ್ಲಾಡಳಿತವೇ ಕಾನೂನು ಪ್ರಕಾರ ಕ್ರಮ ಕೈಗೊಂಡು ಪ್ರಾಣಿ ಬಲಿ ತಡೆಯಬೇಕು ಎಂದು ಮನವಿ ಮಾಡಿದರು. ಈಗಾಗಲೇ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಸಂಬಂಧಪಟ್ಟ ತಹಸೀಲ್ದಾರ್ ಅವರಿಗೆ ಲಿಖಿತ ಮನವಿ ಸಲ್ಲಿಸಿ ಪ್ರಾಣಿಹತ್ಯೆ ತಡೆಯಲು ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ. ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿದರೆ ಜಿಲ್ಲೆಯ ಅಧಿಕಾರಿಗಳ ವಿರುದ್ಧ ಕಾನೂನು ಉಲ್ಲಂಘನೆ ಹಾಗೂ ನ್ಯಾಯಾಲಯದ ಆದೇಶ ಉಲ್ಲಂಘನೆ ಆರೋಪದ ಅಡಿ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲು ಮಾಡಲಾಗುವುದು ಎಂದು ಎಚ್ಚರಿಸಿದರು.