ಬಾಲಲೀಲಾ ಮಹಾಂತ ಶಿವಯೋಗಿ ಪವಾಡ ಪುರುಷರು

| Published : Jan 10 2025, 12:45 AM IST

ಸಾರಾಂಶ

ಜಗತ್ತು ಒಂದು ಮನೆಯಾದರೆ ದೇವರ ಮನೆಯೆಂಬುದು ಭಾರತ ದೇಶ, ಇಲ್ಲಿ ಪುಣ್ಯವೆಂಬುದು ಮೈದೆರೆದು ನಿಂತಿದೆ

ಲಕ್ಷ್ಮೇಶ್ವರ: ಬಾಲಲೀಲಾ ಮಹಾಂತ ಶಿವಯೋಗಿಗಳು ತಮ್ಮ ಜೀವನದುದ್ದಕ್ಕೂ ಅನೇಕ ಪವಾಡ ಮಾಡುವ ಮೂಲಕ ಸಮಾಜ ಸುಧಾರಣೆ ಹಾಗೂ ಮೇಲುಕೀಳು ತೊಡೆದು ಹಾಕುವ ಕಾರ್ಯ ಮಾಡಿದರು ಎಂದು ಕೂಡಲದ ಗುರು ಮಹೇಶ್ವರ ಶಿವಾಚಾರ್ಯರು ಹೇಳಿದರು.

ಸಮೀಪದ ಹೂವಿನ ಶಿಗ್ಲಿ ವಿರಕ್ತಮಠದ ಜಾತ್ರಾ ಮಹೋತ್ಸವದ ಅಂಗವಾಗಿ ನಡಯುತ್ತಿರುವ ಕಾರ್ಯಕ್ರಮದಲ್ಲಿ ಮುಳುಗುಂದದ ಬಾಲ ಲೀಲಾ ಮಹಾಂತ ಶಿವಯೋಗಿಗಳ ಪುರಾಣ ಪ್ರವಚನ ಕಾರ್ಯಕ್ರಮದದಲ್ಲಿ ಭಾಗವಹಿಸಿ ಮಾತನಾಡಿದರು.

ಜಗತ್ತು ಒಂದು ಮನೆಯಾದರೆ ದೇವರ ಮನೆಯೆಂಬುದು ಭಾರತ ದೇಶ, ಇಲ್ಲಿ ಪುಣ್ಯವೆಂಬುದು ಮೈದೆರೆದು ನಿಂತಿದೆ, ಶ್ರೀಮಠದ ಪೀಠಾಧಿಪತಿ ಚನ್ನವೀರ ಶ್ರೀಗಳು ಗ್ರಾಮದಲ್ಲಿ ಶೈಕ್ಷಣಿಕ,ಸಾಮಾಜಿಕ ಹಾಗೂ ಧಾರ್ಮಿಕ ಕ್ರಾಂತಿ ಮಾಡುವ ಮೂಲಕ ಸಮಾಜದಲ್ಲಿನ ಬಡ ಮಕ್ಕಳಿಗೆ ಅಕ್ಷರ,ಅನ್ನ ಹಾಗೂ ವಸತಿ ಕಲ್ಪಿಸಿಕೊಡುವ ಮೂಲಕ ಅವರ ಬಾಳಲ್ಲಿ ಬೆಳಕು ತುಂಬುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಈ ವೇಳೆ ಗುಬ್ಬಿಯ ನಂಜುಂಡ ಪಂಡಿತಾರಾಧ್ಯ ಶಿವಾಚಾರ್ಯರು ಮಾತನಾಡಿ, ಶ್ರೀಮಠದ ಪೀಠಾಧಿಪತಿ ಚನ್ನವೀರ ಶ್ರೀಗಳು 300ಕ್ಕೂ ಹೆಚ್ಚು ಅನಾಥ ಮಕ್ಕಳ ಯೋಗ ಕ್ಷೇಮ ಅವರ ಶಿಕ್ಷಣ, ವಸತಿ,ಊಟ ಎಲ್ಲವನ್ನು ನೋಡಿಕೊಂಡು ಭಕ್ತರ ಸಹಕಾರದೊಂದಿಗೆ ಶ್ರೀ ಮಠ ಮುನ್ನಡೆಸುತ್ತಿರುವುದು ಸೌಭಾಗ್ಯ ನಿರಂಜನ ಶ್ರೀಗಳ ಹಾಕಿ ಕೊಟ್ಟ ಪರಂಪರೆ ಇಂದಿಗೂ ಜೀವಂತವಾಗಿ ಮುನ್ನಡೆದಿದೆ ಎಂದರೆ ಅದಕ್ಕೆ ಈಗಿನ ಪೂಜ್ಯರ ಸಂಕಲ್ಪವೇ ಸಾಕ್ಷಿಯಾಗಿದೆ ಎಂದು ಹೇಳಿದರು.

ಸಭೆಯ ಸಾನ್ನಿಧ್ಯ ವಹಿಸಿದ್ದ ಚನ್ನವೀರ ಶ್ರೀಗಳು ಮನಸ್ಸು ಬಹಳ ಚಂಚಲ ಹಾಗೂ ದುಡ್ಡು ಚಂಚಲ ಅದು ಎಲ್ಲೆಲ್ಲಿಗೋ ಹೋಗಬಹುದು ಜೀವನ ಕ್ಷಣಿಕ ನಶ್ವರ ಯಮರಾಜನಿಗೆ ಕರುಣೆ ಎಂಬುದೇ ಇಲ್ಲ ಯಾವಾಗ ಬೇಕಾದರೂ ಕರೆದುವಯ್ಯಬಹುದು ಪುಣ್ಯವನೇ ಮಾಡು ಪುಣ್ಯದಿಂದ ಜೀವನ ಪಾವನ ಎಂದು ತಮ್ಮ ಆಶೀರ್ವಚನದಲ್ಲಿ ನುಡಿದರು.

ಪುರಾಣ ಪ್ರವಚನಕಾರ ಪಂಚಾಕ್ಷರಿ ಶಾಸ್ತ್ರಿಗಳು ಕದಮನಹಳ್ಳಿ, ಸಂಗೀತ ಬಾಲಾಜಿ ಹಾಗೂ ಅನಿಲ್ ಕುಮಾರ ಪ್ರವಚನ ನಡೆಸಿಕೊಟ್ಟರು. ರಾಮನಗೌಡ ಲಕ್ಷ್ಮೇಶ್ವರ ಇದ್ದರು. ಸಿದ್ದೇಶ್ವರ ಶಾಸ್ತ್ರಿಗಳು ಕಾರ್ಯಕ್ರಮ ನಿರೂಪಿಸಿದರು.