ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಅವರಿಂದ ನಗರ ಪ್ರದಕ್ಷಿಣೆ

| Published : Jan 10 2025, 12:45 AM IST

ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಅವರಿಂದ ನಗರ ಪ್ರದಕ್ಷಿಣೆ
Share this Article
  • FB
  • TW
  • Linkdin
  • Email

ಸಾರಾಂಶ

ನಗರದಲ್ಲಿ ಫುಟ್ ಪಾತ್ ಒತ್ತುವರಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಸಲಾಗುವುದು. ಪರಿಸರ ಸಂಬಂಧ ಬಾರ್, ಹೋಟೆಲ್, ಅಂಗಡಿ ಮುಂಗಟ್ಟು, ಫಿಲೇಚರ್, ಆಸ್ಪತ್ರೆ ಮಾಲೀಕರುಗಳ ಸಭೆ ನಡೆಸಿ ತಿಳಿವಳಿಕೆ ಹೇಳಿ ಆನಂತರ ಕಾನೂನು ರೀತಿಯ ಕ್ರಮಕ್ಕೆ ಮುಂದಾಗುತ್ತೇವೆ. ನಗರಸಭೆಯು ನಾಗರಿಕರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಬದ್ದತೆ ಇರಿಸಿಕೊಂಡು ಕೆಲಸ ಮಾಡಲಿದೆ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ರಾಮನಗರ

ಜಿಲ್ಲಾ ಕೇಂದ್ರ ರಾಮನಗರವನ್ನು ಮಾದರಿ ನಗರವನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಅವರು ಗುರುವಾರ ಬೆಳ್ಳಂಬೆಳಗ್ಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸ್ವಚ್ಛತೆ ಕುರಿತು ಕೈಗೊಂಡಿರುವ ಕಾರ್ಯಗಳನ್ನು ಪರಿವೀಕ್ಷಣೆ ಮಾಡಿದರು.

ನಗರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರ ಹಾಜರಾತಿ ಪಡೆದ ಅಧ್ಯಕ್ಷ ಕೆ.ಶೇಷಾದ್ರಿಯವರು ಪೌರಾಯುಕ್ತ ಡಾ.ಜಯಣ್ಣ ಮತ್ತು ತಂಡದೊಂದಿಗೆ ನಗರ ಪ್ರದಕ್ಷಿಣೆ ಮಾಡಿದರು.

ಮೊದಲು ನಗರದ ಶ್ರೀರಾಮ ಚಿತ್ರಮಂದಿರ ಬಳಿ ತೆರಳಿದ ತಂಡ ಸ್ವಚ್ಛತೆ ಕಾರ್ಯ ವೀಕ್ಷಿಸಿದರು. ಅಲ್ಲಿಂದ ಎಂ.ಜಿ.ರಸ್ತೆ, ಹಳೆಯ ಬಸ್ ನಿಲ್ದಾಣ, ಕೆಂಪೇಗೌಡ ಸರ್ಕಲ್, ರೈಲ್ವೆ ನಿಲ್ದಾಣದ ರಸ್ತೆ ಮುಖಾಂತರ ಯಾರಬ್‌ ನಗರದಲ್ಲಿ ಪ್ರಮುಖ ರಸ್ತೆಗಳಲ್ಲಿ ಸ್ವಚ್ಛತಾ ಕಾರ್ಯ ವೀಕ್ಷಣೆ ಮಾಡಿದರು.

ಇದಾದ ಬಳಿಕ ರಾಮನಗರ ನಗರಸಭೆ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಶೇಷಾದ್ರಿಯವರು, ರಾಮನಗರವನ್ನು ಮಾದರಿ ನಗರವನ್ನಾಗಿಸುವ ನಿಟ್ಟಿನಲ್ಲಿ ಗಮನ ಹರಿಸಲಾಗುತ್ತಿದೆ. ಅದರಲ್ಲೂ ಸ್ವಚ್ಛತೆ ಹಾಗೂ ಪರಿಸರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಇದಕ್ಕಾಗಿ ಶೀಘ್ರದಲ್ಲಿ ಸಹಾಯವಾಣಿಯನ್ನು ಆರಂಭಿಸಲಾಗುವುದು. ಸ್ವಚ್ಛತೆ ವಿಚಾರದಲ್ಲಿ ನಗರಸಭೆಗೆ ಸಾರ್ವಜನಿಕರ ಸಹಕಾರವೂ ಅತ್ಯಗತ್ಯವಾಗಿ ಬೇಕಾಗಿದೆ ಎಂದು ಹೇಳಿದರು. ನಗರಸಭೆಯಲ್ಲಿ ಬೆಳಗ್ಗೆ 5.15ಕ್ಕೆ ಹಾಜರಾತಿ ಮೂಲಕ ಪೌರಕಾರ್ಮಿಕರ ಕೆಲಸ ಆರಂಭವಾಗಿ ಮೊದಲು ಮುಖ್ಯ ರಸ್ತೆ, ಪ್ರಮುಖ ವೃತ್ತಗಳ ಸ್ವಚ್ಛತೆ ಕಾರ್ಯದ ನಂತರ ವಾರ್ಡ್ ಗಳ ಸ್ವಚ್ಛತೆಗೆ ತೆರಳುತ್ತಿದ್ದಾರೆ ಎಂದು ತಿಳಿಸಿದರು.

ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ಮಾಡಲು ಪ್ರಯತ್ನ ನಡೆಯುತ್ತಿದೆ. ಪ್ಲಾಸ್ಟಿಕ್ ಮಾರಾಟ ಮಾಡುವ ಸ್ಥಳದ ಬದಲು ಸರಬರಾಜು ಆಗುತ್ತಿರುವ ಮೂಲವನ್ನು ಹುಡುಕಾಟ ನಡೆಸಲಾಗುತ್ತಿದೆ. ಇದರ ಜತೆಗೆ ಸಾರ್ವಜನಿಕರಲ್ಲೂ ಜಾಗೃತಿ ಮೂಡಿಸುವ ಕೆಲಸದೊಂದಿಗೆ ಸಾರ್ವಜನಿಕರ ಸಹಭಾಗಿತ್ವವನ್ನು ನಿರೀಕ್ಷೆ ಮಾಡಿದ್ದೇವೆ. ಅವರ ನೆರವು ಸಿಕ್ಕಾಗ ಸುಂದರ ಪರಿಸರ ವಾತಾವರಣ ನಿರ್ಮಾಣಕ್ಕೆ ಅನುಕೂಲವಾಗುತ್ತದೆ ಎಂದರು.

ಕಸದ ಸಮಸ್ಯೆ ನಿವಾರಿಸುವ ಸಂಬಂಧ ಈಗಾಗಲೇ ನಗರದ 27 ಸ್ಥಳಗಳಲ್ಲಿ ಕಸ ಹಾಕದಂತೆ ಬ್ಲಾಕ್ ಸ್ಪಾಟ್ ಗಳನ್ನು ಗುರುತು ಮಾಡಿ, ಸಿಸಿ ಕ್ಯಾಮೆರಾ, ಬ್ಯಾನರ್ ಗಳನ್ನು ಅಳವಡಿಸಲಾಗಿದೆ. ಉಳಿದೆಡೆಯೂ ಬ್ಲಾಕ್ ಸ್ಪಾಟ್ ಗಳನ್ನು ಗುರುತಿಸಲಾಗಿದ್ದು, ಅಲ್ಲಿಯೂ ಶೀಘ್ರದಲ್ಲಿಯೇ ಸಿಸಿ ಕ್ಯಾಮೆರಾ ಅಳವಡಿಸಲಾಗುವುದು. ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಸುರಿಯುವುದನ್ನು ತಪ್ಪಿಸಿ ಮನೆಮನೆ ಕಸಸಂಗ್ರಹ ವಾರ್ಡಿಗೆ ಜನರು ಒಲವು ತೋರುತ್ತಿದ್ದಾರೆ ಎಂದು ಹೇಳಿದರು.

ನಗರದಲ್ಲಿ ಫುಟ್ ಪಾತ್ ಒತ್ತುವರಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಸಲಾಗುವುದು. ಪರಿಸರ ಸಂಬಂಧ ಬಾರ್, ಹೋಟೆಲ್, ಅಂಗಡಿ ಮುಂಗಟ್ಟು, ಫಿಲೇಚರ್, ಆಸ್ಪತ್ರೆ ಮಾಲೀಕರುಗಳ ಸಭೆ ನಡೆಸಿ ತಿಳಿವಳಿಕೆ ಹೇಳಿ ಆನಂತರ ಕಾನೂನು ರೀತಿಯ ಕ್ರಮಕ್ಕೆ ಮುಂದಾಗುತ್ತೇವೆ. ನಗರಸಭೆಯು ನಾಗರಿಕರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಬದ್ದತೆ ಇರಿಸಿಕೊಂಡು ಕೆಲಸ ಮಾಡಲಿದೆ ಎಂದು ತಿಳಿಸಿದರು.

ನಗರದಲ್ಲಿ 1712 ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿಗಳನ್ನು ವಿತರಣೆ ಮಾಡಲಾಗಿದೆ. ಅದರ ಮೇಲೆಯೇ ಅವರೆಲ್ಲರ ಬದುಕು ಅವಲಂಬಿತವಾಗಿದೆ. ಅವರಿಂದ ಸಾರ್ವಜನಿಕರ ಓಡಾಟಕ್ಕೆ ಆಗುತ್ತಿರುವ ತೊಂದರೆಯ ಬಗ್ಗೆಯೂ ಅರಿವಿದೆ. ಬೀದಿ ಬದಿ ವ್ಯಾಪಾರಿಗಳ ಸಹಕಾರ ಸಹ ಬೇಕಾಗುತ್ತದೆ. ಅವರಿಗೆ ಪರ್ಯಾಯ ವ್ಯವಸ್ಥೆ ಸೇರಿದಂತೆ ಹಂತ ಹಂತವಾಗಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಕೆ.ಶೇಷಾದ್ರಿ ಹೇಳಿದರು. ನಗರಸಭಾ ಉಪಾಧ್ಯಕ್ಷೆ ಆಯಿಷಾಬಾನು, ಸದಸ್ಯರಾದ ಅಕ್ಲೀಂ, ಗೋವಿಂದರಾಜು, ನಗರಸಭೆ ಪೌರಾಯುಕ್ತ ಡಾ.ಜಯಣ್ಣ, ಪರಿಸರ ವಿಭಾಗದ ಕಾರ್ಯಪಾಲಕ ಅಭಿಯಂತರ ಸುಬ್ರಹ್ಮಣ್ಯ, ಆರೋಗ್ಯ ನಿರೀಕ್ಷಕ ವಿಜಯ್ ಕುಮಾರ್, ಮುಖಂಡ ಶಫಿ ಅಹಮದ್, ಪೌರ ಕಾರ್ಮಿಕರ ಸೇವಾ ಸಂಘದ ಜಿಲ್ಲಾಧ್ಯಕ್ಷ ಕೊಲ್ಲಾಪುರಿ, ಶಾಖಾ ಅಧ್ಯಕ್ಷ ಮಾರಪ್ಪ ಸೇರಿದಂತೆ ಇಲಾಖಾ ಅಧಿಕಾರಿಗಳು ಇದ್ದರು.

‘ನಗರದ ಜನಸಂಖ್ಯೆಗೆ ಅನುಗುಣವಾಗಿ ಕೆಲಸ ನಿರ್ವಹಿಸಲು ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೌರಕಾರ್ಮಿಕರ ಕೊರತೆ ಇದೆ. 80 ಪೌರಕಾರ್ಮಿಕರ ಕೊರತೆ ಇರುವುದರಿಂದ ಸ್ವಚ್ಛತಾ ಕಾರ್ಯದ ಮೇಲೆ ಪರಿಣಾಮ ಬೀರುತ್ತಿದೆ. ಅಗತ್ಯವಾದಷ್ಟು ಅಧಿಕಾರಿಗಳು ಮತ್ತು ಸಿಬ್ಬಂದಿ ಇಲ್ಲದಿರುವುದರಿಂದ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ತೊಂದರೆ ಆಗುತ್ತಿದೆ. ’

- ಕೆ.ಶೇಷಾದ್ರಿ, ಅಧ್ಯಕ್ಷರು, ನಗರಸಭೆ, ರಾಮನಗರ.