- ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕ್ರಮ ಖಂಡಿಸಿ ರೈತ-ಕಾರ್ಮಿಕರ ಪ್ರತಿಭಟನೆಯಲ್ಲಿ ಮುಖಂಡರ ತಾಕೀತು - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದೇಶದಲ್ಲಿ 4 ಕರಾಳ ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಕರೆಯ ಮೇರೆಗೆ ನಗರದಲ್ಲಿ ಗುರುವಾರ ಕೇಂದ್ರ ಕಾರ್ಮಿಕ ಸಂಘಟನೆಗಳು, ಸಂಯುಕ್ತ ಕಿಸಾನ್ ಮೋರ್ಚಾದ ರೈತ ಸಂಘಟನೆಗಳು, ಬ್ಯಾಂಕ್-ವಿಮೆ-ಕಾರ್ಖಾನೆ ಸೇರಿದಂತೆ ಸ್ವತಂತ್ರ ಸಂಘಟನೆಗಳು ಒಂದು ದಿನದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ನಡೆಸಿದವು.

ನಗರದ ಶ್ರೀ ಜಯದೇವ ವೃತ್ತದಲ್ಲಿ ರೈತ, ಕಾರ್ಮಿಕ, ಬ್ಯಾಂಕ್ ನೌಕರರ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ರೈತ, ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಘೋಷಣೆಗಳನ್ನು ಕೂಗಿ, ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಮಿಕ- ರೈತ ಸಂಘಟನೆಗಳ ಮುಖಂಡರು ಮಾತನಾಡಿ, ಎಲ್ಲ ಸಾರ್ವಜನಿಕ ವಲಯದ ಉದ್ಯಮಗಳು, ಸಾರ್ವಜನಿಕ ಸೇವೆಗಳಾದ ರೈಲ್ವೆ, ಬಂದರು ಮತ್ತು ಹಡಗು ಕಟ್ಟೆ, ಕಲ್ಲಿದ್ದಲು ಗಣಿ, ತೈಲ, ಉಕ್ಕು, ರಕ್ಷಣಾ, ರಸ್ತೆ ಮಾರ್ಗ, ವಿಮಾನ ನಿಲ್ದಾಣ, ಬ್ಯಾಂಕ್, ವಿಮೆ, ದೂರ ಸಂಪರ್ಕ, ಅಂಚೆ, ಪರಮಾಣು ಶಕ್ತಿ, ವಿದ್ಯುತ್ ಉತ್ಪಾದನೆ ಮತ್ತು ಪೂರೈಕೆ ಇತ್ಯಾದಿಗಳನ್ನು ಖಾಸಗೀಕರಿಸುತ್ತ ಭಾರತೀಯ ಮತ್ತು ವಿದೇಶಿ ಮೂಲದ ದೊಡ್ಡ ಕಾರ್ಪೊರೇಟ್ ಕಂಪನಿಗೆ ಕೇಂದ್ರವು ಮಾರಾಟ ಮಾಡುವುದನ್ನು ಮುಂದುವರಿಸಿದೆ ಎಂದು ಆರೋಪಿಸಿದರು.


ಸ್ಥಳೀಯ ಕೈಗಾರಿಕಾ, ಆರ್ಥಿಕ ಬೆಳವಣಿಗೆ ಕುಂಠಿತಗೊಂಡಿದೆ. ನಿರುದ್ಯೋಗ ಸಮಸ್ಯೆ ಅತ್ಯಂತ ಗಂಭೀರ ಸ್ವರೂಪ ತಾಳಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ, ಶಿಕ್ಷಣ ಮತ್ತು ಆರೋಗ್ಯದ ಖಾಸಗೀಕರಣ, ವ್ಯಾಪಾರೀಕರಣ, ಆರ್ಥಿಕ ಅಸಮಾನತೆ ಹೆಚ್ಚುತ್ತಿರುವುದರಿಂದ ಜನ ತೀವ್ರ ಸಂಕಷ್ಟಕ್ಕೆ ತಳ್ಳಲ್ಪಟ್ಟಿದ್ದಾರೆ. ನರೇಗಾ ಯೋಜನೆಯನ್ನು ವಿಬಿ ಜಿ ರಾಮ್ ಜಿ ಎಂಬುದಾಗಿ ಬದಲಿಸಿ, ಉದ್ಯೋಗ ಖಾತ್ರಿ ಹಕ್ಕನ್ನೇ ಕಸಿದು, ಹಳ್ಳಿಗಳ ಬಡಜನರ ಆಸರೆ ಕಿತ್ತುಕೊಂಡಿದೆ ಎಂದು ದೂರಿದರು.

ವಿದ್ಯುತ್‌ ತಿದ್ದುಪಡಿ ಮಸೂದೆ-2025ನ್ನು ಕಾಯ್ದೆ ಮಾಡಿ, ವಿದ್ಯುತ್ ಸರಬರಾಜು ಖಾಸಗೀಕರಣಕ್ಕೆ ಮುಂದಾಗಿದೆ. ಈವರೆಗೂ ರಕ್ಷಿಸಲ್ಪಟ್ಟಿದ್ದ ವಿಮಾ ಕಂಪನಿಗಳನ್ನು ಶೇ.100 ವಿದೇಶಿ ಮತ್ತು ದೇಶೀಯ ವ್ಯಾಪಾರಿ ಮನೆತನಗಳಿಗೆ ತೆರೆದಿದೆ. ಅಣುಶಕ್ತಿ ಅಭಿವೃದ್ಧಿಪಡಿಸುವ (ಶಾಂತಿ) ಹೆಸರಲ್ಲಿ ಜನರ ಸುರಕ್ಷತೆಗೆ ಅಣುಶಕ್ತಿ ಭದ್ರತೆಗೆ ಅಪಾಯ ತಂದಿದೆ. ಇಷ್ಟು ಸಾಲದೆಂಬಂತೆ ಅರಾವಳಿ ಪರ್ವತ ಶ್ರೇಣಿ ನಾಶಪಡಿಸಲು ಅವಕಾಶ ಕಲ್ಪಿಸಿದ ಸುಪ್ರೀಂ ಕೋರ್ಟ್‌ ತೀರ್ಪು ಉತ್ತರ ಭಾರತ ಜನರ ಬದುಕನ್ನು ಗಂಡಾಂತರಕ್ಕೆ ತಳ್ಳಿರುವುದು ಆತಂಕದ ಸಂಗತಿ ಎಂದು ಅವರು ತಿಳಿಸಿದರು.

ಕೇಂದ್ರದ ವಿವಿಧ ಸ್ಕೀಂಗಳಲ್ಲಿ ದುಡಿಯುವ ಕೋಟ್ಯಂತರ ಆಶಾ, ಅಂಗನವಾಡಿ, ಬಿಸಿಯೂಟ ಕಾರ್ಮಿಕರನ್ನು ಸರ್ಕಾರಿ ನೌಕರರ ಸ್ಥಾನಮಾನ ನೀಡದೇ, ಕನಿಷ್ಠ ವೇತನ ಮತ್ತು ಪಿಎಫ್, ಇಎಸ್‌ಐ, ನಿವೃತ್ತಿ ಪರಿಹಾರ ಒದಗಿಸದೇ ಬಿಡಿಗಾಸಿಗೆ ದುಡಿಸಿಕೊಂಡು ಶೋಷಿಸುತ್ತಿದೆ. ಗುತ್ತಿಗೆ ಕಾರ್ಮಿಕರು, ನಿರ್ಮಾಣ, ಬೀಡಿ, ಗೃಹ, ವಲಸೆ, ಗಿಗ್ ಫ್ಲಾಟ್‌ ಫಾರ್ಮ್ ಕಾರ್ಮಿಕರು ಹೀಗೆ ಅಪಾರ ಸಂಖ್ಯೆಯ ಅನೌಪಚಾರಿಕ, ಅಸಂಘಟಿತ ಕಾರ್ಮಿಕರಿಗೆ ಭದ್ರತೆ ಒದಗಿಸದೇ ನಿರ್ದಯ ಶೋಷಣೆಗೆ ಗುರಿ ಮಾಡಲಾಗಿದೆ. ಲೇಬರ್ ಕೋಡ್‌ಗಳಿಂದ ದುಡಿಯುವವರ ಬದುಕು ಬಂಗಾರವಾಗುತ್ತದೆ ಎಂದು ಮಾಧ್ಯಮಗಳಲ್ಲಿ ತುತ್ತೂರಿ ಊದಲಾಗುತ್ತಿದೆ ಎಂದ ಅವರು, ಮುಷ್ಕರದ ಹಕ್ಕನ್ನು ಕಸಿದುಕೊಳ್ಳುವ, ಕಾರ್ಮಿಕರ ಸಾಮೂಹಿಕ ಚೌಕಾಸಿ ಹಕ್ಕನ್ನು ಮೊಟಕುಗೊಳಿಸಲಾಗುತ್ತಿದೆ. ಕಾರ್ಮಿಕರ ಆರೋಗ್ಯ, ಭದ್ರತೆ ಬಗ್ಗೆ ಕಿಂಚಿತ್ತೂ ಕಾಳಜಿ ತೋರದೆ, ತ್ಯಾಗ-ಬಲಿದಾನಗಳ ಮೂಲಕ ಗಳಿಸಿದ ಹಕ್ಕುಗಳನ್ನೇ ಕೇಂದ್ರ ಸರ್ಕಾರ ಕಿತ್ತುಕೊಳ್ಳುತ್ತಿದೆ ಎಂದು ದೂರಿದರು.

ರೈತ-ಕಾರ್ಮಿಕ ಮುಖಂಡರಾದ ಆವರಗೆರೆ ಎಚ್.ಜಿ.ಉಮೇಶ, ಕೆ.ರಾಘವೇಂದ್ರ ನಾಯರಿ, ಸೋಮಶೇಖರ, ಹೊನ್ನೂರು ಮುನಿಯಪ್ಪ, ಕೆ.ಎಚ್.ಆನಂದರಾಜ, ಮಧು ತೊಗಲೇರಿ, ಇ.ಶ್ರೀನಿವಾಸ, ಅಣಬೇರು ತಿಪ್ಪೇಸ್ವಾಮಿ, ವಿ.ಲಕ್ಷ್ಮಣ, ಸತೀಶ ಅರವಿಂದ, ಹನುಮಂತಪ್ಪ, ಮಲ್ಲೇಶ, ರಮೇಶ ದಾಸರ, ಇಪ್ಟಾ ಐರಣಿ ಚಂದ್ರು, ಪವಿತ್ರಾ, ಶಿವಾಜಿ ರಾವ್, ಮಂಜುನಾಥ ಕೈದಾಳೆ, ಮಂಜುನಾಥ ಕುಕ್ಕವಾಡ, ಗುಮ್ಮನೂರು ಬಸವರಾಜ, ಬುಳ್ಳಾಪುರ ಹನುಮಂತಪ್ಪ, ಅಷ್ಫಕ್‌, ಜಬೀನಾ ಖಾನಂ, ಎಂ.ಕರಿಬಸಪ್ಪ, ಮರುಳಸಿದ್ದಪ್ಪ, ನರೇಗಾ ರಂಗನಾಥ, ಎಚ್‌ಕೆಆರ್ ಸುರೇಶ್ ಇತರರು ಇದ್ದರು.

- - -

(ಕೋಟ್‌) ಹಿಂದಿನ ಕಾಂಗ್ರೆಸ್ ಸರ್ಕಾರವು ಕಾರ್ಮಿಕ ಕಾಯ್ದೆ ತರ್ಕ ಬದ್ಧಗೊಳಿಸಲು ತಿದ್ದುಪಡಿಗೆ ಉದ್ದೇಶಿಸಿತ್ತು. ಅದನ್ನೇ ಇಂದಿನ ಬಿಜೆಪಿಯು ಸಂಹಿತೀಕರಣದ ರೂಪದಲ್ಲಿ ಜಾರಿಗೊಳಿಸುತ್ತಿದೆ. ಈ ನೀತಿಗಳು ಸ್ಪಷ್ಟವಾಗಿ ವರ್ಗ ನೀತಿಗಳೇ ಹೊರತು ಈ ಪಕ್ಷ, ಆ ಪಕ್ಷದ ನೀತಿಗಳಲ್ಲ.

- ಸಂಘಟನೆಗಳ ಮುಖಂಡರು, ದಾವಣಗೆರೆ.

- - -

(-ಫೋಟೋ ಇದೆ.)