ಕನ್ನಡಪ್ರಭ ವಾರ್ತೆ ಶಿರಾ
ತುಮಕೂರು ಜಿಲ್ಲೆಯ ರೈತರು ಜಿಲ್ಲಾ ಸಹಕಾರಿ ಬ್ಯಾಂಕ್ ನಲ್ಲಿ ೨ ಸಾವಿರ ಕೋಟಿ ರುಪಾಯಿ ಠೇವಣಿ ಇಟ್ಟಿದ್ದು, ಈ ಹಣದಲ್ಲಿಯೇ ರೈತರಿಗೆ ಸಾಲ ನೀಡುತ್ತಿದ್ದೇವೆ. ಇದರಲ್ಲಿ ಸರ್ಕಾರದ ಹಣ ನಯಾ ಪೈಸೆಯೂ ಇಲ್ಲ ಎಂದು ಮಾಜಿ ಸಹಕಾರ ಸಚಿವ, ತುಮಕೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಹೇಳಿದರು.ಗುರುವಾರ ಶಿರಾ ತಾಲೂಕಿನ ತರೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಗೋದಾಮು ಕಟ್ಟಡ ಉದ್ಘಾಟನೆ ಹಾಗೂ ಕೆಸಿಸಿ ಸಾಲ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಾನು ಸಹಕಾರಿ ಮಂತ್ರಿಯಾಗಿದ್ದಾಗ ಸಹಕಾರಿ ಕಾಯ್ದೆಯಲ್ಲಿ ತಿದ್ದುಪಡಿ ಮಾಡಿ ವಿಧೇಯಕವನ್ನು ಮಂಡಿಸಿದ್ದೇನೆ. ಇದರಿಂದ ಪ್ರತಿ ಸಹಕಾರ ಸಂಘಗಳಲ್ಲಿ ಎಸ್‌ಸಿ, ಎಸ್‌ಟಿ, ಸಾಮಾನ್ಯ, ಇದರಲ್ಲಿ ಒಬ್ಬರು ಮಹಿಳೆಯರು ಕಡ್ಡಾಯವಾಗಿ ನಾಮನಿರ್ದೇಶನ ಮಾಡುವ ಅವಕಾಶ ಕಲ್ಪಿಸಲಾಗಿದೆ. ಗ್ರಾಮ ಪಂಚಾಯತಿ ಮಾದರಿಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೂ ಮೀಸಲು ಕಲ್ಪಿಸುವ ತಿದ್ದುಪಡಿ ವಿಧೇಯಕ ಮಂಡನೆಯಾಗಲಿದೆ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಜಿ.ಎಸ್.ರವಿ ಮಾತನಾಡಿ, ತರೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ೧೧೪ ಜನ ರೈತರಿಗೆ ಕೆಸಿಸಿ ಸಾಲದ ಹಣವನ್ನು ನೇರವಾಗಿ ಬ್ಯಾಂಕಿನ ಖಾತೆಗೆ ವರ್ಗಾಯಿಸಿದ್ದೇವೆ. ಶಿರಾ ಕ್ಷೇತ್ರದ ರೈತರಿಗೆ ಇದುವರೆಗೂ ೧೧೦ ಕೋಟಿ ರುಪಾಯಿ ಸಾಲ ಸೌಲಭ್ಯ ನೀಡಲಾಗಿದೆ ಎಂದು ತಿಳಿಸಿದರು. ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಿ.ಜೆ.ರಾಜಣ್ಣ ಮಾತನಾಡಿದರು.ತರೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿಕ್ಕಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಹಕಾರಿ ಸಂಘಗಳ ಉಪ ನಿಬಂಧಕ ಎಚ್. ಮೂರ್ತಿ, ನಬಾರ್ಡನ ಸಾಯಿ ಗಣೇಶ್, ಮಹಾಪ್ರಬಂಧಕ ಪಿ.ಎಸ್. ರಾಮಕೃಷ್ಣ ನಾಯಕ, ಶಿರಾ ಡಿಡಿಸಿಸಿಬಿ ಮೇಲ್ವಿಚಾರಕರಾದ ಎನ್. ಸಿ.ವಿಠಲ, ಎಚ್.ಎಂ. ಜನಾರ್ಧನ, ಡಿಸಿಸಿ ಬ್ಯಾಂಕ್ ಆರ್ಥಿಕ ಸಲಹೆಗಾರ ರಮಣ ರೆಡ್ಡಿ, ತಾಪಂ ಮಾಜಿ ಅಧ್ಯಕ್ಷ ಜಿ.ಎನ್. ಮೂರ್ತಿ, ತರೂರು ಪ್ರಾಥಮಿಕ ಕೃಷಿ ಪತ್ತಿನ ಸಂಘದ ಉಪಾಧ್ಯಕ್ಷ ಬಿ.ಎನ್. ರಾಮಸ್ವಾಮಿ, ನಿರ್ದೇಶಕರಾದ ಎಚ್.ಎನ್. ನಾರಾಯಣಪ್ಪ, ಗಂಗಾಧರಯ್ಯ, ಸೋಮಣ್ಣ, ರಂಗನಾಥಪ್ಪ, ದೊಡ್ಡ ಹೊನ್ನಪ್ಪ, ಅಶ್ವತ್ಥಯ್ಯ, ಟಿ.ಲಿಂಗಯ್ಯ, ರಂಗಮ್ಮ, ಇಂದಿರಮ್ಮ, ಜಯಲಕ್ಷ್ಮಿ, ಕಾರ್ಯದರ್ಶಿ ಬಿ.ಕೆ. ತಿಮ್ಮಣ್ಣ, ಮುಖಂಡ ಮುಕುಂದಪ್ಪ, ಜಿಪಂ ಮಾಜಿ ಸದಸ್ಯ ಪರ್ವತಪ್ಪ, ಕೆಎಂಎಫ್ ಮಾಜಿ ನಿರ್ದೇಶಕ ಬಾಲೇನಹಳ್ಳಿ ಪ್ರಕಾಶ್, ಕರಿಯಣ್ಣ, ವೀರಣ್ಣ ಹಾಜರಿದ್ದರು.