ಪ್ರಿಯಾಂಕ್‌ ಖರ್ಗೆ ಪ್ರಶ್ನೆಗಳಿಗೆ ಸ್ಪಷ್ಟನೆ ಕೊಡಿ, ಆರೋಪ ನಿಲ್ಲಿಸಿ: ಮಂಜುನಾಥ ಭಂಡಾರಿ

| Published : Oct 22 2025, 01:03 AM IST

ಪ್ರಿಯಾಂಕ್‌ ಖರ್ಗೆ ಪ್ರಶ್ನೆಗಳಿಗೆ ಸ್ಪಷ್ಟನೆ ಕೊಡಿ, ಆರೋಪ ನಿಲ್ಲಿಸಿ: ಮಂಜುನಾಥ ಭಂಡಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಿಯಾಂಕ್‌ ಖರ್ಗೆ ಎತ್ತಿರುವ ಪ್ರಶ್ನೆಗಳಿಗೆ ಆರೆಸ್ಸೆಸ್‌, ಬಿಜೆಪಿಯವರು ಸ್ಪಷ್ಟನೆ ಕೊಡಲಿ. ಅದು ಬಿಟ್ಟು ಇಲ್ಲಸಲ್ಲದ ಆರೋಪ ಮಾಡುವುದು, ಕೊಲೆ ಬೆದರಿಕೆಯೊಡ್ಡುವುದು, ಅವಹೇಳನ ಮಾಡುವುದನ್ನು ನಿಲ್ಲಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಎಂಎಲ್ಸಿ ಮಂಜುನಾಥ ಭಂಡಾರಿ ಹೇಳಿದ್ದಾರೆ.

ಮಂಗಳೂರು: ಆರೆಸ್ಸೆಸ್‌ ಕುರಿತು ಸಚಿವ ಪ್ರಿಯಾಂಕ್‌ ಖರ್ಗೆ ಅವರು ಸಿಎಂಗೆ ಪತ್ರ ಬರೆದಿದ್ದರಲ್ಲಿ ಯಾವುದೇ ತಪ್ಪಿಲ್ಲ. ಅವರು ಹೇಳಿರುವ ವಿಚಾರಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತೇವೆ. ಪ್ರಿಯಾಂಕ್‌ ಖರ್ಗೆ ಎತ್ತಿರುವ ಪ್ರಶ್ನೆಗಳಿಗೆ ಆರೆಸ್ಸೆಸ್‌, ಬಿಜೆಪಿಯವರು ಸ್ಪಷ್ಟನೆ ಕೊಡಲಿ. ಅದು ಬಿಟ್ಟು ಇಲ್ಲಸಲ್ಲದ ಆರೋಪ ಮಾಡುವುದು, ಕೊಲೆ ಬೆದರಿಕೆಯೊಡ್ಡುವುದು, ಅವಹೇಳನ ಮಾಡುವುದನ್ನು ನಿಲ್ಲಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಎಂಎಲ್ಸಿ ಮಂಜುನಾಥ ಭಂಡಾರಿ ಹೇಳಿದ್ದಾರೆ.ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆರೆಸ್ಸೆಸ್‌ನವರು ಬುದ್ಧ, ಗಾಂಧಿ, ಬಸವಣ್ಣನವರ ತತ್ವಗಳನ್ನು ಒಪ್ತಾರಾ” ಎಂದು ಪ್ರಿಯಾಂಕ್‌ ಖರ್ಗೆ ಪ್ರಶ್ನೆ ಮಾಡಿದ್ದಾರೆ. ಆರೆಸ್ಸೆಸ್‌ನವರು ಸಮಾನತೆಯನ್ನೇ ಒಪ್ಪಲ್ಲ, ರಾಷ್ಟ್ರ ಧ್ವಜ, ರಾಷ್ಟ್ರಗೀತೆಗಿಂತ ಬೇರೆ ಧ್ವಜ, ಗೀತೆಗೆ ಗೌರವ ಕೊಡುತ್ತಾರೆ ಎಂಬಿತ್ಯಾದಿ ಪ್ರಶ್ನೆಗಳನ್ನೂ ಕೇಳಿದ್ದಾರೆ. ಇಂಥ ಮೂಲಭೂತ ಪ್ರಶ್ನೆಗಳಿಗೆ ಸ್ಪಷ್ಟನೆ ನೀಡುವುದು ಬಿಟ್ಟು ಅವಹೇಳನ, ಆರೋಪ ಮಾಡುವುದು ಸರಿಯಾ’ ಎಂದು ಆಕ್ಷೇಪಿಸಿದರು.ಬಿಜೆಪಿ ಆದೇಶವನ್ನೇ ಜಾರಿ ಮಾಡ್ತಿದ್ದೇವೆ:

ಪ್ರಿಯಾಂಕ್‌ ಖರ್ಗೆ ಅವರು ಹೊಸದಾಗಿ ಏನನ್ನೂ ಹೇಳಿಲ್ಲ. 2013ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹೊರಡಿಸಿದ್ದ ಆದೇಶವನ್ನೇ ಜಾರಿ ಮಾಡಲಾಗುತ್ತಿದೆ ಅಷ್ಟೇ. ಅವರದ್ದೇ ಸರ್ಕಾರ ಮಾಡಿದರೆ ಮಾಸ್ಟರ್‌ ಸ್ಟ್ರೋಕ್‌ ಅಂತಾರೆ, ಅವರ ಆದೇಶವನ್ನೇ ನಾವು ಜಾರಿ ಮಾಡಿದರೆ ತಪ್ಪೇನು ಎಂದು ಮಂಜುನಾಥ ಭಂಡಾರಿ ಪ್ರಶ್ನಿಸಿದರು.ಮಹಿಳೆಯರನ್ನು ಪೂಜನೀಯ ಎನ್ನುತ್ತಾರೆ. ಅವರದ್ದೇ ಅಂಗ ಸಂಸ್ಥೆಯವರು ಮಹಿಳೆಯರ ವಿರುದ್ಧ ಮಾತನಾಡೋದನ್ನು ಒಪ್ತಾರಾ? ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಮೇಲೆ ಶೂ ಎಸೆದಿರುವ ಬಗ್ಗೆ ಯಾಕೆ ಆರೆಸ್ಸೆಸ್‌, ಬಿಜೆಪಿ ಮಾತನಾಡುತ್ತಿಲ್ಲ? ಹಾಗಾದರೆ ನಿಮಗೆ ಯಾವ ಸಂ‍ವಿಧಾನದ ಮೇಲೆ ನಂಬಿಕೆ ಇದೆ? ಆರೆಸ್ಸೆಸ್‌ ಸಂಘಟನೆಯಾಗಿದ್ದರೆ ಇದುವರೆಗೆ ಏಕೆ ನೋಂದಣಿ ಮಾಡಿಲ್ಲ? ಅವರಿಗೆ ಹಣ ಬರೋದು ಎಲ್ಲಿಂದ ಎಂಬ ಬಗ್ಗೆ ಪ್ರಶ್ನಿಸಿದರೆ ಚರ್ಚೆಗೂ ಸಿದ್ಧರಿಲ್ಲ. ಆರೆಸ್ಸೆಸ್‌ ಬಗ್ಗೆ ಪ್ರಶ್ನೆ ಮಾಡಿದರೆ ದೇಶದ್ರೋಹಿ ಪಟ್ಟ ಕಟ್ಟುತ್ತಾರೆ. ಬಿಜೆಪಿ, ಆರೆಸ್ಸೆಸ್‌ನವರಿಗೆ ಪಾಕಿಸ್ತಾನ, ಮುಸ್ಲಿಮ್‌ ಎಂಬೆರಡು ಹಿಡನ್‌ ಅಜೆಂಡಾ ಬಿಟ್ಟರೆ ಬೇರೆ ರಾಜಕಾರಣವೇ ಗೊತ್ತಿಲ್ಲ ಎಂದು ಆರೋಪಿಸಿದರು.ಪರವಾನಗಿ ಇಲ್ಲದೆ ಶಸ್ತ್ರಾಸ್ತ್ರ ಬಳಕೆ, ತರಬೇತಿ ಕಾನೂನು ಪ್ರಕಾರ ನಿಷಿದ್ಧ. ಆರೆಸ್ಸೆಸ್‌ ತರಬೇತಿಯನ್ನು ಲಾಠಿ ಇಲ್ಲದೆ ಏಕೆ ಮಾಡಲಾಗದು? ಲಾಠಿ ಇಟ್ಟುಕೊಂಡೇ ಮಾಡುವುದಾದರೆ ಅಂತಹ ಸಂಘಟನೆಯನ್ನು ಏಕೆ ನಿಷೇಧ ಮಾಡಬಾರದು ಎಂದರು.ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌, ಮುಖಂಡರಾದ ಪದ್ಮರಾಜ್‌ ಆರ್‌., ಶಶಿಧರ ಹೆಗ್ಡೆ, ಶಾಲೆಟ್‌ ಪಿಂಟೊ, ಶುಭೋದಯ ಆಳ್ವ, ನೀರಜ್‌ಪಾಲ್‌, ಲಾರೆನ್ಸ್‌, ಚಿತ್ತರಂಜನ್‌, ವಿಕಾಸ್‌ ಶೆಟ್ಟಿ, ನಿತ್ಯಾನಂದ ಶೆಟ್ಟಿ ಮತ್ತಿತರರಿದ್ದರು.‘ನನ್ನ ಶಿಕ್ಷಣ ಸಂಸ್ಥೆಯಲ್ಲಿ ಆರೆಸ್ಸೆಸ್‌, ಎಬಿವಿಪಿ ಚಟುವಟಿಕೆ ನಡೆದಿಲ್ಲ’

ಮಂಗಳೂರಿನಲ್ಲಿರುವ ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ಇದುವರೆಗೆ ಯಾವುದೇ ರೀತಿಯ ಆರೆಸ್ಸೆಸ್‌ ಚಟುವಟಿಕೆ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿರುವ ಮಂಜುನಾಥ ಭಂಡಾರಿ, ಇನ್ನು ಮುಂದೆ ಹೀಗೆ ಆರೋಪ ಮಾಡಿದರೆ ಮಾನನಷ್ಟ ಮೊಕದ್ದಮೆ ಹಾಕುವುದಾಗಿ ಹೇಳಿದರು. ಈ ಹಿಂದೆ ರಾಜ್ಯದೆಲ್ಲೆಡೆಗಳ ಎಂಜಿನಿಯರಿಂಗ್‌, ಪಾಲಿಟೆಕ್ನಿಕ್‌ ಕಾಲೇಜು ವಿದ್ಯಾರ್ಥಿಗಳಿಗಾಗಿ ‘ಸೃಷ್ಟಿ’ ಎನ್ನುವ ಪ್ರಾಜೆಕ್ಟ್‌ ಎಕ್ಸಿಬಿಶನ್‌ ಕಾರ್ಯಕ್ರಮ ನಡೆದಿತ್ತು. ಅದರಲ್ಲಿ ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಸಿದ್ದಯ್ಯ, ಆಗಿನ ಸಿಎಂ ಸದಾನಂದ ಗೌಡ ಭಾಗವಹಿಸಿದ್ದರು. ಸ್ವತಃ ಸಿಎಂ, ಸರ್ಕಾರದ ಕಾರ್ಯದರ್ಶಿ ಭಾಗವಹಿಸುವಾಗ ನಾನು ಅದರಲ್ಲಿ ಭಾಗವಹಿಸದೆ ಇರಲಾಗುತ್ತಾ? ಅದು ಬಿಟ್ಟರೆ ಎಬಿವಿಪಿ, ಆರೆಸ್ಸೆಸ್‌ನ ಯಾವುದೇ ಬೈಠಕ್‌, ಸಮ್ಮೇಳನ ನಡೆದಿಲ್ಲ ಎಂದರು.