ಕಳಪೆ ಆಹಾರ ಮಾರಿದರೆ ಕಠಿಣ ಕ್ರಮ: ಡಾ. ರಾಜಶೇಖರ

| Published : Apr 25 2024, 01:02 AM IST

ಸಾರಾಂಶ

ಲ್ಯಾಬೋರೇಟರಿ ವರದಿಯಲ್ಲಿ ಆಹಾರೋತ್ಪನ್ನಗಳ ಬಗ್ಗೆ ದೋಷ ಸಿದ್ಧಪಟ್ಟಲ್ಲಿ ನಿಯಮಾವಳಿಯಂತೆ ಮುಂದಿನ ಕ್ರಮ ಜರುಗಿಸುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕುಮಟಾ: ಇಲ್ಲಿನ ವಾಕರಸಾ ಮುಖ್ಯ ಬಸ್ ನಿಲ್ದಾಣದಲ್ಲಿರುವ ಅಂಗಡಿ- ಮುಂಗಟ್ಟುಗಳ ಮೇಲೆ ಬುಧವಾರ ದಾಳಿ ನಡೆಸಿದ ಜಿಲ್ಲಾ ಆಹಾರ ಸುರಕ್ಷತೆ ವಿಭಾಗದ ಅಧಿಕಾರಿಗಳು ಅವಧಿ ಮೀರಿದ ಮತ್ತು ಅಸುರಕ್ಷಿತವಾದ ತಿಂಡಿ, ತಿನಿಸು ಮುಂತಾದ ಸಿದ್ಧಆಹಾರ ಪೊಟ್ಟಣಗಳನ್ನು ಪತ್ತೆ ಮಾಡಿ, ಹೆಚ್ಚಿನ ತಪಾಸಣೆಗೆ ಮಾದರಿ ಸಂಗ್ರಹಿಸಿದ್ದಾರೆ.

ಬಸ್ ನಿಲ್ದಾಣದ ಒಳಗೆ ಸಾರಿಗೆ ನಿಗಮದ ಅನುಮತಿಯ ಮೇರೆಗೆ ಕಾರ್ಯಾಚರಿಸುತ್ತಿರುವ ಮಳಿಗೆಗಳಲ್ಲಿ ಅಸುರಕ್ಷಿತ ಹಾಗೂ ಅವಧಿ ಮಿರಿದ ಸಿದ್ಧ ಆಹಾರಗಳನ್ನು ಮಾರುತ್ತಿರುವ ಬಗ್ಗೆ ಕೆಲ ದಿನಗಳ ಹಿಂದೆಯೂ ಪುರಸಭೆ ಮುಖ್ಯಾಧಿಕಾರಿ ನೇತೃತ್ವದ ತಂಡ ದಾಳಿ ನಡೆಸಿದ್ದರು. ಆ ಸಂದರ್ಭದಲ್ಲೂ ಸಾಕಷ್ಟು ಅವಧಿ ಮೀರಿದ, ಸರಿಯಾದ ಮಹಿತಿಯಿಲ್ಲದ ಹಾಗೂ ಗುಣಮಟ್ಟವಿಲ್ಲದ ಆಹಾರ ಪ್ಯಾಕೆಟ್‌ಗಳನ್ನು ಪತ್ತೆ ಮಾಡಿ ಆರೋಗ್ಯ ಮತ್ತು ಸಾರಿಗೆ ಇಲಾಖೆಗೆ ಸೂಕ್ತ ಕ್ರಮಕ್ಕೆ ಪತ್ರ ಬರೆದಿದ್ದರು. ಅದಾದ ಬಳಿಕವೂ ಬಸ್ ನಿಲ್ದಾಣದ ಅಂಗಡಿಗಳಲ್ಲಿ ಮಾತ್ರ ಖರೀದಿಯ ಭರಾಟೆಯ ನಡುವೆ ಗುಣಮಟ್ಟವಿಲ್ಲದ, ಅವಧಿ ಮೀರಿದ ಮತ್ತು ತಯಾರಕರ ಮಾಹಿತಿ ಇರದ ಸಿದ್ಧ ಆಹಾರಗಳನ್ನು ಯಥೇಚ್ಛ ಮಾರುತ್ತಿರುವುದು ಮುಂದುವರಿದಿದೆ. ಈ ಬಗ್ಗೆ ಆಹಾರ ಸುರಕ್ಷತೆ ಇಲಾಖೆಗೆ ಸಾಕಷ್ಟು ದೂರುಗಳು ಬಂದ ಹಿನ್ನೆಲೆ ತಾಲೂಕು ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಜಿಲ್ಲಾ ಆಹಾರ ಸುರಕ್ಷತೆ ಅಧಿಕಾರಿಗಳು ಪರಿಶೀಲನೆ ನಡೆಸಿ ಮುಂದಿನ ತನಿಖೆಗೆ ಕ್ರಮ ಕೈಗೊಂಡರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಆಹಾರ ಸುರಕ್ಷತೆ ವಿಭಾಗದ ಜಿಲ್ಲಾ ಅಂಕಿತ ಅಧಿಕಾರಿ ಡಾ. ರಾಜಶೇಖರ ಪಾಲೆದವರ್, ಬಸ್ ನಿಲ್ದಾಣದಲ್ಲಿ ಎಲ್ಲ ಅಂಗಡಿಗಳನ್ನು ಪರಿಶೀಲಿಸಿದ್ದೇವೆ. ಏಕೆಂದರೆ ತಾಲೂಕು ಆರೋಗ್ಯ ಇಲಾಖೆ ಹಾಗೂ ಪುರಸಭೆಗೆ ಇಲ್ಲಿ ಕಲಬೆರಕೆ ಮತ್ತು ಗುಣಮಟ್ಟವಿಲ್ಲದ ಆಹಾರ ಪದಾರ್ಥ ಮಾರುತ್ತಿರುವ ಬಗ್ಗೆ ದೂರು ಬಂದಿತ್ತು. ನಮಗೆ ಇಲ್ಲಿ ಕಂಡುಬಂದಂತೆ ಸ್ಥಳೀಯ ಉತ್ಪನ್ನಗಳು ಮಾರಾಟಕ್ಕೆ ಇಲ್ಲ. ಎಲ್ಲವೂ ಬೇರೆ ಬೇರೆ ಜಿಲ್ಲೆಯಿಂದ ಬಂದಿದೆ. ಇಲ್ಲಿನ ಅಂಗಡಿಕಾರರು ಯಾವುದೇ ನಿಯಮ, ನಿಬಂಧನೆಗಳನ್ನು ಅನುಸರಿಸುತ್ತಿಲ್ಲ. ಅನಧಿಕೃತವಾಗಿ ಅಂಗಡಿ ನಡೆಸುತ್ತಿದ್ದಾರೆ. ಯಾರೂ ಪರವಾನಗಿ ಪಡೆದಿಲ್ಲ. ನಮಗೆ ಇಲ್ಲಿ ಪರಿಶೀಲನೆ ವೇಳೆ ಹಲವು ಆಹಾರೋತ್ಪನ್ನಗಳ ಮೇಲೆ ಸಂಶಯ ಬಂದಿದೆ. ಅವನ್ನು ನಿಯಮದಂತೆ ಮಾದರಿ ಸಂಗ್ರಹಿಸಿದ್ದೇವೆ. ಲ್ಯಾಬೋರೇಟರಿಗೆ ಹೆಚ್ಚಿನ ವಿಶ್ಲೇಷಣೆಗೆ ಕಳುಹಿಸುತ್ತಿದ್ದೇವೆ. ಲ್ಯಾಬೋರೇಟರಿ ವರದಿಯಲ್ಲಿ ಆಹಾರೋತ್ಪನ್ನಗಳ ಬಗ್ಗೆ ದೋಷ ಸಿದ್ಧಪಟ್ಟಲ್ಲಿ ನಿಯಮಾವಳಿಯಂತೆ ಮುಂದಿನ ಕ್ರಮ ಜರುಗಿಸುತ್ತೇವೆ ಎಂದಿದ್ದಾರೆ.

ಸಾರಿಗೆ ಇಲಾಖೆ ಬಸ್ ನಿಲ್ದಾಣದೊಳಗೆ ಇರುವ ಅಂಗಡಿ ಮುಂಗಟ್ಟುಗಳಿಗೆ ಸಂಬಂಧಿಸಿ ಟೆಂಡರ್ ಕರೆದು ಕರಾರಿಗೆ ಒಳಪಟ್ಟು ಅಂಗಡಿಗಳನ್ನು ನಡೆಸಲು ನೀಡುತ್ತದೆ. ಅಂಗಡಿ ಪಡೆದವರು ನಿಯಮಾವಳಿಯಂತೆ ಆಹಾರ ಸುರಕ್ಷತೆ ವಿಭಾಗದಿಂದಲೂ ಪರವಾನಗಿ ಪಡೆಯಬೇಕೆಂಬುದು ಸಾರಿಗೆ ನಿಗಮದ ನಿಯಮಾವಳಿಯಲ್ಲಿದೆ. ಅದ್ಯಾವುದನ್ನೂ ಪಡೆದಿಲ್ಲ. ಬಸ್ ನಿಲ್ದಾಣದ ಒಳಗೆ ಅತ್ಯುತ್ತಮ ಮಾರಾಟ ವಹಿವಾಟು ಕೂಡಾ ಇದೆ. ನಿಯಮ ಪಾಲನೆಯೂ ಇಲ್ಲ. ಮಾರಾಟಕ್ಕೆ ಬಂದ ಆಹಾರ ಎಲ್ಲಿಂದ ತಯಾರಾಗಿ ಬಂದಿದೆ, ಖರೀದಿ ಹೇಗೆ ಎಂಬ ದಾಖಲೆಯೂ ಇರುವುದಿಲ್ಲ. ಸುರಕ್ಷಿತ ಆಹಾರ ಮಾರಾಟವೂ ಇಲ್ಲದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಹಾಜರಿದ್ದ ಎಲ್ಲ ಅಧಿಕಾರಿಗಳು ಇದೇ ವೇಳೆ ಪ್ರತಿಕ್ರಿಯಿಸಿದ್ದಾರೆ.

ಈ ಸಂದರ್ಭದಲ್ಲಿ ಆಹಾರ ಗುಣಮಟ್ಟ ಸುರಕ್ಷತೆ ಅಧಿಕಾರಿ ಕಾಶಿ ಭಟ್, ತಾಲೂಕು ಆರೋಗ್ಯಾಧಿಕಾರಿ ಡಾ. ಆಜ್ಞಾ ನಾಯಕ, ಆರೋಗ್ಯ ಅಧಿಕಾರಿ ಆರ್.ಜಿ. ನಾಯ್ಕ, ದಿನೇಶ ನಾಯ್ಕ ಇತರರು ಇದ್ದರು.