ಮಂಡ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ನಿಂದ ಭರ್ಜರಿ ರೋಡ್‌ ಶೋ

| Published : Apr 25 2024, 01:02 AM IST

ಸಾರಾಂಶ

ಕಾಂಗ್ರೆಸ್‌ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್‌ ಚಂದ್ರು) ಪರವಾಗಿ ಸಚಿವ ಎನ್‌.ಚಲುವರಾಯಸ್ವಾಮಿ ನೇತೃತ್ವದಲ್ಲಿ ಶಾಸಕ ಪಿ.ರವಿಕುಮಾರ್‌, ಸ್ಥಳೀಯ ಮುಖಂಡರು, ಕಾರ್ಯಕರ್ತರು ಬೈಕ್‌ ರ್‍ಯಾಲಿಯೊಂದಿಗೆ ವಿವಿಧ ರಸ್ತೆಗಳಲ್ಲಿ ಪ್ರಚಾರ ನಡೆಸಿದರೆ, ಸಂಜೆ 3.30ರ ಸಮಯಕ್ಕೆ ಆರಂಭವಾದ ಜೆಡಿಎಸ್‌-ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್‌.ಡಿ.ಕುಮಾರಸ್ವಾಮಿ ರೋಡ್‌ ಶೋಗೆ ಜನಸಸಾಗರವೇ ಹರಿದುಬಂದಿತ್ತು.

ಕನ್ನಡಪ್ರಭ ವಾರ್ತೆ ಮಂಡ್ಯ

ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರದ ಕೊನೆಯ ದಿನವಾದ ಬುಧವಾರ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷದ ಅಭ್ಯರ್ಥಿಗಳು ನಗರದಲ್ಲಿ ಭರ್ಜರಿ ರೋಡ್‌ ಶೋ ನಡೆಸಿದರು.

ಮೊದಲಿಗೆ ಕಾಂಗ್ರೆಸ್‌ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್‌ ಚಂದ್ರು) ಪರವಾಗಿ ಸಚಿವ ಎನ್‌.ಚಲುವರಾಯಸ್ವಾಮಿ ನೇತೃತ್ವದಲ್ಲಿ ಶಾಸಕ ಪಿ.ರವಿಕುಮಾರ್‌, ಸ್ಥಳೀಯ ಮುಖಂಡರು, ಕಾರ್ಯಕರ್ತರು ಬೈಕ್‌ ರ್‍ಯಾಲಿಯೊಂದಿಗೆ ವಿವಿಧ ರಸ್ತೆಗಳಲ್ಲಿ ಪ್ರಚಾರ ನಡೆಸಿದರು.

ನಗರದ ಕಾರೇಮನೆ ಗೇಟ್‌ನಿಂದ ಆರಂಭವಾದ ಪ್ರಚಾರ ರ್‍ಯಾಲಿ ಹೊಳಲು ವೃತ್ತದ ಮಾರ್ಗವಾಗಿ ಜಯಚಾಮರಾಜೇಂದ್ರ ಒಡೆಯರ್‌ ರಸ್ತೆಗೆ ಆಗಮಿಸಿತು. ಅಲ್ಲಿಂದ ಕೆ.ಆರ್‌.ರಸ್ತೆ ಮೂಲಕ ಹೊಸಹಳ್ಳಿ ವೃತ್ತಕ್ಕೆ ಆಗಮಿಸಿ ರೋಡ್‌ ಶೋ ಅಂತ್ಯಗೊಂಡಿತು. ರ್‍ಯಾಲಿಯುದ್ದಕ್ಕೂ ಸಾವಿರಾರು ಸಂಖ್ಯೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಜಿಲ್ಲೆಯ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡಿರುವ ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡುವುದರೊಂದಿಗೆ ಅಭ್ಯರ್ಥಿ ವೆಂಕಟರಮಣೇಗೌಡ ಅವರನ್ನು ಗೆಲ್ಲಿಸುವಂತೆ ಸಚಿವರು, ಶಾಸಕರು ಮತದಾರರಲ್ಲಿ ಮನವಿ ಮಾಡಿದರು.

ಜನಸಾಗರದ ನಡುವೆ ಜೆಡಿಎಸ್‌ ರೋಡ್‌ ಶೋ:

ಸಂಜೆ 3.30ರ ಸಮಯಕ್ಕೆ ಆರಂಭವಾದ ಜೆಡಿಎಸ್‌-ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್‌.ಡಿ.ಕುಮಾರಸ್ವಾಮಿ ರೋಡ್‌ ಶೋಗೆ ಜನಸಸಾಗರವೇ ಹರಿದುಬಂದಿತ್ತು. ಕೊಪ್ಪದಲ್ಲಿ ರೋಡ್‌ ಶೋ ಮುಗಿಸಿ ಆಗಮಿಸಿದ್ದ ಕುಮಾರಸ್ವಾಮಿ ಅವರು ನಗರದ ಹೊರವಲಯದಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ಊಟ ಮಾಡಿ ಕೆಲಸಮಯದವರೆಗೆ ವಿಶ್ರಾಂತಿ ಪಡೆದಿದ್ದರು.

ಸಂಜೆ 3.30ರ ಸಮಯಕ್ಕೆ ಆಗಮಿಸಿದ ಎಚ್‌.ಡಿ.ಕುಮಾರಸ್ವಾಮಿ ಅವರು ತೆರೆದ ವಾಹನದಲ್ಲಿ ಮಂಡ್ಯ ವಿಶ್ವವಿದ್ಯಾಲಯದಿಂದ ರೋಡ್‌ ಶೋ ಆರಂಭಿಸಿದರು. ಎತ್ತಿನಗಾಡಿ ಮೆರವಣಿಗೆ, ಹತ್ತಾರು ವಾಹನಗಳು, ಸಹಸ್ರಾರು ಜನರೊಂದಿಗೆ ಮೆರವಣಿಗೆಯಲ್ಲಿ ಸಾಗಿಬಂದು ಮತಯಾಚನೆ ಮಾಡಿದರು. ಕುಮಾರಸ್ವಾಮಿ ಭಾವಚಿತ್ರ ಹಿಡಿದು ಬಂದ ಜೆಡಿಎಸ್‌ ಕಾರ್ಯಕರ್ತರು ಜೈಕಾರದ ಘೋಷಣೆಗಳನ್ನು ಮೊಳಗಿಸಿದರು. ಜಯಚಾಮರಾಜೇಂದ್ರ ಒಡೆಯರ್‌ ವೃತ್ತದವರೆಗೆ ಆಗಮಿಸಿ ರ್‍ಯಾಲಿ ಅಂತ್ಯಗೊಂಡಿತು.