ಮುಷ್ಕರ: ಹರಿಹರ, ಚನ್ನಗಿರಿಯಲ್ಲಿ ಪ್ರಯಾಣಿಕರ ಪರದಾಟ

| Published : Aug 06 2025, 01:15 AM IST

ಸಾರಾಂಶ

ಕೆಎಸ್‌ಆರ್‌ಟಿಸಿ ಕಾರ್ಮಿಕ ಸಂಘಟನೆಗಳ ಮುಷ್ಕರದ ನಡುವೆಯೂ ಹರಿಹರ ನಗರದಲ್ಲಿ ಮಂಗಳವಾರ ಸರ್ಕಾರಿ ಬಸ್‌ಗಳು ಸಂಚರಿಸಿದವು. ಬಸ್ ನಿಲ್ದಾಣದಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಪೊಲೀಸ್‌ ಇಲಾಖೆಯಿಂದ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

- ೧೦೦ ಬಸ್‌ಗಳು ಸಂಚಾರ । ಕೆಲವು ನೌಕರರು ಕೆಲಸಕ್ಕೆ ಹಾಜರಾಗಲಿಲ್ಲ: ಡಿಪೋ ಮ್ಯಾನೇಜರ್‌

- - -

ಕನ್ನಡಪ್ರಭ ವಾರ್ತೆ ಹರಿಹರ

ಕೆಎಸ್‌ಆರ್‌ಟಿಸಿ ಕಾರ್ಮಿಕ ಸಂಘಟನೆಗಳ ಮುಷ್ಕರದ ನಡುವೆಯೂ ನಗರದಲ್ಲಿ ಮಂಗಳವಾರ ಸರ್ಕಾರಿ ಬಸ್‌ಗಳು ಸಂಚರಿಸಿದವು. ಬಸ್ ನಿಲ್ದಾಣದಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಪೊಲೀಸ್‌ ಇಲಾಖೆಯಿಂದ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ಸಂಬಳ ಹೆಚ್ಚಳ, ಬಾಕಿ ವೇತನ ಬಿಡುಗಡೆಗೆ ಆಗ್ರಹಿಸಿ ಮಂಗಳವಾರ ಬೆಳಗ್ಗೆಯಿಂದಲೇ ಚಾಲಕರು, ನಿರ್ವಾಹಕರು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದರು. ಆದರೂ, ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಬಸ್‌ಗಳು ನಗರದ ಮೂಲಕ ಸಂಚರಿಸಿದವು.

ಈ ಸಂದರ್ಭ ಡಿಪೋ ಮ್ಯಾನೇಜರ್ ಮಹೇಶ್ವರಪ್ಪ ಮಾತನಾಡಿ, ಹರಿಹರದ ಬಸ್ ಡಿಪೋದಿಂದ ಪ್ರತಿನಿತ್ಯ ೧೧೦ ಬಸ್‌ಗಳು ಸಂಚಾರ ಮಾಡುತ್ತಿದ್ದು, ಮಂಗಳವಾರ ೧೦೦ ಬಸ್‌ಗಳು ಸಂಚಾರ ಮಾಡಿವೆ. ಮುಷ್ಕರ ಹಿನ್ನಲೆ ಕೆಲವು ನೌಕರರು ಕೆಲಸಕ್ಕೆ ಹಾಜರಾಗಲಿಲ್ಲ. ಈ ಹಿನ್ನೆಲೆ ಪ್ರಯಾಣಿಕರಿಗೆ ತೊಂದರೆ ಆಗಬಾರದೆಂದು ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುವವರನ್ನು ಬಳಕೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಕರ್ನಾಟಕ ಮಧ್ಯ ಭಾಗದಲ್ಲಿರುವ ಹರಿಹರಕ್ಕೆ ದಿನನಿತ್ಯ ಬೆಂಗಳೂರು, ತುಮಕೂರು, ಚಿತ್ರದುರ್ಗ, ದಾವಣಗೆರೆ ಮೂಲಕ ಹಾಗೂ ಬೀದರ್, ಗುಲ್ಬರ್ಗ, ಬೆಳಗಾವಿ, ಹುಬ್ಬಳ್ಳಿ, ಹಾವೇರಿ, ರಾಣೆಬೆನ್ನೂರು, ಮೂಲಕ ಮಂಗಳೂರು, ಚಿಕ್ಕಮಗಳೂರು, ಭದ್ರಾವತಿ, ಶಿವಮೊಗ್ಗ ಮೂಲಕ ಇನ್ನುಳಿದಂತೆ ಬಳ್ಳಾರಿ, ವಿಜಯನಗರ, ಹಡಗಲಿ, ಹರಪನಹಳ್ಳಿ ಮೂಲಕ ೧೪೫೩ ಬಸ್‌ಗಳು ಆಗಮಿಸುತ್ತವೆ.

ಸಾರಿಗೆ ನಿಗಮ ನೌಕರರ ಸಂಘಟನೆ ಮುಷ್ಕರ ನಡೆಸಲು ಮುಂದಾದ ವಿಚಾರ ಗೊತ್ತಾಗುತ್ತಿದ್ದಂತೆ ಕಾರ್ಯನಿಮಿತ್ತ, ಪರಸ್ಥಳಕ್ಕೆ ತೆರಳಬೇಕಿದ್ದ ಅನೇಕ ಪ್ರಯಾಣಿಕರು ತಮ್ಮ ಕಾರು, ಬೈಕ್‌ಗಳನ್ನು ಬಳಸಿ ಪ್ರಯಾಣಿಸಿದರು. ಮುಷ್ಕರದ ಮಾಹಿತಿ ಇಲ್ಲದ ಕೆಲವರು ಬಸ್ ನಿಲ್ದಾಣಕ್ಕೆ ಆಗಮಿಸಿ, ಬಸ್‌ಗಾಗಿ ಕಾಯುತ್ತಿದ್ದರು. ಮತ್ತೆ ಕೆಲವರು ಮಾಹಿತಿ ವಿನಿಮಯ ಕೇಂದ್ರದಲ್ಲಿ ಸರ್ಕಾರಿ ಬಸ್‌ಗಳ ಸಂಚಾರ ಬಗ್ಗೆ ವಿಚಾರಿಸುತ್ತಿದ್ದುದು ಕಂಡುಬಂತು.

ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ನಗರದ ಕೆಎಸ್‌ಆರ್‌ಟಿಸಿ ನಿಲ್ದಾಣ ಬಸ್‌-ಪ್ರಯಾಣಿಕರಿಲ್ಲದೇ ಖಾಲಿ ಖಾಲಿಯಾಗಿತ್ತು. ಸಂಜೆ ಹೊತ್ತಿಗೆ ನಿಲ್ದಾಣದ ತುಂಬಾ ಬಸ್‌ಗಳು ಬಂದರೂ ಪ್ರಯಾಣಿಕರ ಸಂಖ್ಯೆ ಕಡಿಮೆಯಿದ್ದ ಕಾರಣ ಕೆಲವೇ ಪ್ರಯಾಣಿಕರನ್ನು ಹೊತ್ತು ಬಸ್‌ಗಳು ತೆರಳಿದವು.

- - -

* ಚನ್ನಗಿರಿ ತಾಲೂಕಲ್ಲಿ ಖಾಸಗಿ ಬಸ್‌ಗಳಲ್ಲಿ ಪ್ರಯಾಣಚನ್ನಗಿರಿ: ಸರ್ಕಾರಿ ಬಸ್ ಸಿಬ್ಬಂದಿ ಮುಷ್ಕರ ಹಿನ್ನೆಲೆ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಮಂಗಳವಾರ ಸರ್ಕಾರಿ ಬಸ್‌ಗಳು ಸಂಚರಿಸದೇ, ಕೇವಲ ಖಾಸಗಿ ಬಸ್‌ಗಳು ಸಂಚರಿಸಿದವು. ಸರ್ಕಾರಿ ಬಸ್ ಚಾಲಕರು ಮತ್ತು ನಿರ್ವಾಹಕರು ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಸ್ಥಗಿತಗೊಳಿಸಿ, ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ. ಪರಿಣಾಮ ಖಾಸಗಿ ಬಸ್‌ಗಳಲ್ಲಿಯೇ ಪ್ರಯಾಣಿಕರು ಸಂಚಾರ ನಡೆಸಿದರು. ಚನ್ನಗಿರಿ ಪಟ್ಟಣ ತಾಲೂಕು ಕೇಂದ್ರವಾಗಿದ್ದು, ದಾವಣಗೆರೆ ಜಿಲ್ಲೆಯಲ್ಲಿಯೇ ಅತಿ ದೊಡ್ಡ ತಾಲೂಕು ಕೇಂದ್ರವಾಗಿದೆ. 61 ಗ್ರಾಮ ಪಂಚಾಯಿತಿಗಳು 1 ಪುರಸಭೆ ಆಡಳಿತ ಹೊಂದಿರುವ ಕೇಂದ್ರಸ್ಥಾನವಾಗಿದೆ. ಪ್ರತಿದಿನ ಗ್ರಾಮಾಂತರ ಪ್ರದೇಶಗಳಿಂದ ಒಂದಿಲ್ಲೊಂದು ಕೆಲಸ, ಸಭೆ-ಸಮಾರಂಭಗಳಿಗಾಗಿ ತಾಲೂಕು ಕೇಂದ್ರಕ್ಕೆ ನೂರಾರು ಜನರು ಸಂಚರಿಸುತ್ತಾರೆ ಆದರೆ, ಮಹಿಳೆಯರು ಪುಕ್ಕಟೆ ಸಂಚರಿಸಲು ಪೂರಕವಾಗಿದ್ದ ಸರ್ಕಾರಿ ಬಸ್‌ಗಳಿಲ್ಲದೇ, ಜನರಿಗೆ ಸಮಸ್ಯೆಯಾಯಿತು. ಪಟ್ಟಣದಿಂದ ಪ್ರತಿದಿನ ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಚಿಕ್ಕಮಗಳೂರು, ಹುಬ್ಬಳ್ಳಿ, ಧರ್ಮಸ್ಥಳ, ಬೆಂಗಳೂರು ಇಂತಹ ಹಲವಾರು ಊರುಗಳಿಗೆ ಸುಮಾರು 40ರಿಂದ 50 ಸರ್ಕಾರಿ ಬಸ್‌ಗಳು 70ರಿಂದ 80 ಟ್ರಿಪ್‌ಗಳಲ್ಲಿ ಸಂಚರಿಸುತ್ತವೆ. 70ರಿಂದ 80 ಖಾಸಗಿ ಬಸ್‌ಗಳು ಇದ್ದರೂ, ಪ್ರತಿದಿನ ಸರ್ಕಾರಿ ಮತ್ತು ಖಾಸಗಿ ಬಸ್‌ಗಳು ಪೈಪೋಟಿಯಿಂದಲೇ ಪ್ರಯಾಣಿಕರಿಗೆ ಸೇವೆ ಒದಗಿಸುತ್ತಿವೆ. ಸರ್ಕಾರದ ಶಕ್ತಿ ಯೋಜನೆಯಿಂದ ಬಡ, ಮಧ್ಯಮ ವರ್ಗದ ಮಹಿಳೆಯರು ಸರ್ಕಾರಿ ಬಸ್‌ಗಳನ್ನೇ ಅವಲಂಬಿಸಿದ್ದರು. ಮಂಗಳವಾರ ಸರ್ಕಾರಿ ಬಸ್‌ಗಳ ಮುಷ್ಕರದಿಂದ ವಿದ್ಯಾರ್ಥಿನಿಯರಿಂದ ಹಿಡಿದು ಮಹಿಳೆಯರು, ಪುರುಷರು, ಖಾಸಗಿ ಬಸ್‌ಗಳಲ್ಲಿಯೇ ಸಂಚರಿಸಿದರು. ಮುಷ್ಕರದಿಂದ ಸರ್ಕಾರಿ ಬಸ್‌ಗಳ ಓಡಾಟ ಸ್ಥಗಿತಗೊಂಡ ಕಾರಣ ಮಹಿಳೆಯರು ಸರ್ಕಾರಕ್ಕೆ ಶಪಿಸುತ್ತಾ ಖಾಸಗಿ ಬಸ್‌ಗಳಲ್ಲಿ ಹಣ ತೆತ್ತು ಪ್ರಯಾಣಿಸಿದ್ದು ವಿಶೇಷವಾಗಿತ್ತು .- - - -15ಕೆಸಿಎನ್‌ಜಿ1.ಜೆಪಿಜಿ: ಸರ್ಕಾರಿ ಬಸ್‌ಗಳ ಮುಷ್ಕರದಿಂದಾಗಿ ಮಹಿಳೆಯರು ಸೇರಿದಂತೆ ಪುರುಷ ಪ್ರಯಾಣಿಕರು ಬಸ್‌ಗಳಲ್ಲಿ ಸಂಚರಿಸಿದರು.

- - -

-05ಎಚ್‌ಆರ್‌ಆರ 02& 02a:

ಹರಿಹರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ.