ಸ್ಥಳೀಯ ಲಾರಿ, ಟೆಂಪೋಗಳಿಗೆ ಸಾಗಾಣಿಕೆಗೆ ಅವಕಾಶ ಮಾಡಿಕೊಡಿ: ಟೆಂಪೋ, ಲಾರಿ ಮಾಲೀಕರ ಮನವಿ

| Published : Aug 06 2025, 01:15 AM IST

ಸ್ಥಳೀಯ ಲಾರಿ, ಟೆಂಪೋಗಳಿಗೆ ಸಾಗಾಣಿಕೆಗೆ ಅವಕಾಶ ಮಾಡಿಕೊಡಿ: ಟೆಂಪೋ, ಲಾರಿ ಮಾಲೀಕರ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಕೆಲ್ಲಂಬಳ್ಳಿ- ಬದನಗುಪ್ಪೆ ಕೈಗಾರಿಕಾ ಪ್ರದೇಶದಲ್ಲಿ ಸ್ಥಳೀಯ ಲಾರಿ, ಟೆಂಪೋಗಳಿಗೆ ಸರಕು, ಸಾಗಾಣಿಕೆಗೆ ಅವಕಾಶ ಮಾಡಿಕೊಡಬೇಕು. ಇಲ್ಲದಿದ್ದರೆ ಹೊರಗಡೆಯಿಂದ ಬರುವ ಲಾರಿಗಳನ್ನು ಇಲ್ಲಿಗೆ ಬರಲು ಬಿಡುವುದಿಲ್ಲ. ಯಾವುದೇ ಸಚಿವರು ಚಾಮರಾಜನಗರಕ್ಕೆ ಬಂದರೆ ಘೇರಾವ್ ಮಾಡಲಾಗುವುದು ಎಂದು ಎಚ್ಚರಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ತಾಲೂಕಿನ ಕೆಲ್ಲಂಬಳ್ಳಿ- ಬದನಗುಪ್ಪೆ ಕೈಗಾರಿಕಾ ಪ್ರದೇಶದಲ್ಲಿ ಸ್ಥಳೀಯ ಲಾರಿ, ಟೆಂಪೋಗಳಿಗೆ ಸರಕು, ಸಾಗಾಣಿಕೆಗೆ ಅವಕಾಶ ಮಾಡಿಕೊಡುವಂತೆ ಒತ್ತಾಯಿಸಿ, ಚಾಮರಾಜನಗರ ಸ್ಥಳೀಯ ಲಾರಿ ಮತ್ತು ಟೆಂಪೋ ಮಾಲೀಕರ ಸಂಘದ ಪದಾಧಿಕಾರಿಗಳು ವಿವಿಧ ಸಂಘಟನೆಗಳ ಸಹಯೋಗದಲ್ಲಿ ಕೈಗಾರಿಕಾ ಪ್ರದೇಶದಲ್ಲಿರುವ ಮುತ್ತಯ್ಯ ಬಿವರೇಜಸ್ ಲಿಮಿಟೆಡ್ ಕಂಪನಿಯ ಮುಂಭಾಗದಲ್ಲಿ ಶಾಮಿಯಾನ ಹಾಕಿ ಪ್ರತಿಭಟನೆ ನಡೆಸಿದರು.

ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಗಿರಿಜಾ ಅವರಿಗೆ ಮನವಿ ಸಲ್ಲಿಸಲಾಯಿತು.

ಮುಖಂಡ ಕೆಲ್ಲಂಬಳ್ಳಿ ಸೋಮನಾಯಕ ಮಾತನಾಡಿ, ತಾಲೂಕಿನ ಕೆಲ್ಲಂಬಳ್ಳಿ- ಬದನಗುಪ್ಪೆ ಕೈಗಾರಿಕಾ ಪ್ರದೇಶದಲ್ಲಿ ಸ್ಥಳೀಯ ಲಾರಿ, ಟೆಂಪೋಗಳಿಗೆ ಸರಕು, ಸಾಗಾಣಿಕೆಗೆ ಅವಕಾಶ ಮಾಡಿಕೊಡಬೇಕು. ಇಲ್ಲದಿದ್ದರೆ ಹೊರಗಡೆಯಿಂದ ಬರುವ ಲಾರಿಗಳನ್ನು ಇಲ್ಲಿಗೆ ಬರಲು ಬಿಡುವುದಿಲ್ಲ. ಯಾವುದೇ ಸಚಿವರು ಚಾಮರಾಜನಗರಕ್ಕೆ ಬಂದರೆ ಘೇರಾವ್ ಮಾಡಲಾಗುವುದು ಎಂದು ಎಚ್ಚರಿಸಿದರು.

ಈಗಾಗಲೇ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಚಾಮರಾಜನಗರ ಲಾರಿ ಮತ್ತು ಟೆಂಪೋ ಮಾಲೀಕರ ಸಂಘದ ವತಿಯಿಂದ ಮನವಿ ಸಲ್ಲಿಸಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಸರ್ಕಾರ ನಮ್ಮ ಮನವಿಗೆ ಸ್ಪಂದಿಸಿ ಸ್ಥಳೀಯ ಲಾರಿ, ಟೆಂಪೋಗಳಿಗೆ ಸರಕು, ಸಾಗಾಣಿಕೆಗೆ ಅವಕಾಶ ಮಾಡಿಕೊಡಬೇಕು, ಇಲ್ಲದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.

ಜಿಲ್ಲಾ ರೈತ ಹಿತರಕ್ಷಣಾ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಆಲೂರುಮಲ್ಲು, ಪ್ರಧಾನ ಕಾರ್ಯದರ್ಶಿ

ಬಸವನಪುರ ರಾಜಶೇಖರ್ ಮಾತನಾಡಿ, ಚಾಮರಾಜನಗರ ಗಡಿಜಿಲ್ಲೆಯಾಗಿದ್ದು, ಇಲ್ಲಿ

ಬಡವರು, ನಿರುದ್ಯೋಗಿಗಳು ಇದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಿಲ್ಲೆಯಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪಿಸಿದ್ದಾರೆ. ಸ್ಥಳೀಯರಿಗೆ ನ್ಯಾಯ ಸಿಗಬೇಕು. ಇಲ್ಲಿ ಯಾವುದೇ ಫ್ಯಾಕ್ಟರಿಗೆ ಹೋದರೂ ಅಲ್ಲಿ ಹೊರಗಡೆಯಿಂದ ಬಂದವರೇ ಹೆಚ್ಚಿದ್ದಾರೆ, ಈ ಕೈಗಾರಿಕೆ ಪ್ರದೇಶದಲ್ಲಿ ನಾವೇ ಹೊರಗಿನವರು ಆಗಿಬಿಟ್ಟಿದ್ದೇವೆ. ಈ ಫ್ಯಾಕ್ಟರಿಗಳನ್ನು ನಂಬಿಕೊಂಡು ಅನೇಕರು ಬ್ಯಾಂಕ್, ಖಾಸಗಿ ಫೈನಾನ್ಸ್ ಮುಖಾಂತರ ಸಾಲ ಮಾಡಿ ಲಾರಿ, ಟೆಂಪೋ ತೆಗೆದುಕೊಂಡಿದ್ದಾರೆ. ಇಲ್ಲಿ ಪ್ರತಿಷ್ಠಿತ ಕಂಪನಿಯ ಪ್ಯಾಕ್ಟರಿಗಳು ಇದ್ದು ಹೊರಗಡೆ ಲಾರಿ, ಟೆಂಪೋ ಗಳಿಗೆ ಸರಕು, ಸಾಗಾಣಿಕೆಗೆ ಅವಕಾಶ ನೀಡಿದ್ದಾರೆ. ಇದರಿಂದ ಸ್ಥಳೀಯರಿಗೆ ಅನ್ಯಾಯವಾಗಿದೆ. ಎಲ್ಲ ಫ್ಯಾಕ್ಟರಿ ಮಾಲೀಕರೊಂದಿಗೆ ಜಿಲ್ಲಾಧಿಕಾರಿಗಳು ಸಭೆ ನಡೆಸಿ, ಸ್ಥಳೀಯ ಲಾರಿ, ಟೆಂಪೋಗಳಿಗೆ ಸರಕು ಸಾಗಣಿಕೆ ಮಾಡಲು ಅವಕಾಶ ಮಾಡಿಕೊಡಬೇಕು. ಇಲ್ಲದಿದ್ದರೆ ಚಾಮರಾಜನಗರ ಬಂದ್‌ಗೆ ಕರೆ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ರೈತ ಹಿತರಕ್ಷಣಾ ಹೋರಾಟ ಸಮಿತಿ ತಾಲೂಕು ಅಧ್ಯಕ್ಷ ಜಿ.ಎಂ.ಶಂಕರ್, ಚಾಮರಾಜನಗರ ಸ್ಥಳೀಯ ಲಾರಿ ಮತ್ತು ಟೆಂಪೋ ಮಾಲೀಕರ ಸಂಘದ ಗೌರವಾಧ್ಯಕ್ಷ ಎಂ.ಎಸ್.ಮಂಜುನಾಥ್, ಉಪಾಧ್ಯಕ್ಷ ನಾಸೀರ್ ಖಾನ್, ಕಾರ್ಯದರ್ಶಿ ಡಿ.ಕೆ.ಇರ್ಷಾದ್, ಖಜಾಂಚಿ ನಯೀಂ,ನಿರ್ದೇಶಕರಾದ ಅಸ್ಲಾಂಪಾಷ, ಮಹೇಶ್, ಸದಸ್ಯರಾದ ಜಬೀಉಲ್ಲಾ, ಜಾವಿದ್ ಪಾಷ, ಮಹೇಶ್, ಸಂತೋಷ, ಕನ್ನಡ ಚಳವಳಿಗಾರರಾದ ಸುರೇಶ್ ವಾಜಪೇಯಿ, ಪ್ರಶಾಂತ್, ಶಿವಕುಮಾರ್, ಸುಂದರ್.ಸಿ.ಮಂಜುನಾಥ್, ಗಿರೀಶ್, ಆಕಾಶ್ ಇತರರು ಭಾಗವಹಿಸಿದ್ದರು.