ಯಲಬುರ್ಗಾ: ಪ್ರಸ್ತುತ ಸಾಲಿನ ಶಾಲೆ ಪ್ರಾರಂಭವಾದ ಹಿನ್ನೆಲೆಯಲ್ಲಿ ಸೋಮವಾರ ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಹಾಗೂ ಆಡಳಿತ ಮಂಡಳಿ ಪದಾಧಿಕಾರಿಗಳು ಮಕ್ಕಳನ್ನು ಅದ್ಧೂರಿಯಾಗಿ ಸ್ವಾಗತಿಸಿದರು.
ಶಾಲೆಗಳಿಗೆ ತಳಿರು-ತೋರಣಗಳನ್ನು ಕಟ್ಟಿ ಶೃಂಗಾರಿಸಲಾಗಿತ್ತು. ಮಕ್ಕಳಿಗೆ ಗುಲಾಬಿ ಹೂವು, ಸಿಹಿ ನೀಡಿ ಬರಮಾಡಿಕೊಂಡರು. ಶಿಕ್ಷಣ ಇಲಾಖೆಯಿಂದ ಶಾಲೆ ಪ್ರಾರಂಭೋತ್ಸವ ನಿಮಿತ್ತ ಗ್ರಾಮದಲ್ಲಿ ದಾಖಲಾತಿಗೆ ಆಂದೋಲನ ಮಾಡುವ ಮೂಲಕ ಜಾಗೃತಿ ಮೂಡಿಸಿದರು.ವಿತರಣೆ: ಮೊದಲ ದಿನ ಆಗಮಿಸಿದ ವಿದ್ಯಾರ್ಥಿಗಳಿಗೆ ಶಾಲಾ ಮುಖ್ಯಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಸಿಹಿ ಊಟ, ಸಮವಸ್ತ್ರ, ಪಠ್ಯಪುಸ್ತಕ ನೀಡಿದರು. ಜತೆಗೆ ನಿತ್ಯ ಶಾಲೆಗೆ ಬರುವಂತೆ ಮಕ್ಕಳಿಗೆ ಶಿಕ್ಷಕರು ಪ್ರೇರಣೆ ನೀಡಿದರು. ಪಟ್ಟಣ ಸೇರಿದಂತೆ ಅವಳಿ ತಾಲೂಕಿನಲ್ಲಿ ಶಾಲಾ ಪ್ರಾರಂಭೋತ್ಸವ ನಿಮಿತ್ತ ವಿದ್ಯಾರ್ಥಿಗಳು ಉತ್ಸಾಹದಿಂದ ಶಾಲೆಗೆ ಎತ್ತಿನ ಬಂಡಿ ಮೂಲಕ ಆಗಮಿಸಿದರು.
ಬಿಇಒ ಅಶೋಕ ಗೌಡರ ಮಾತನಾಡಿ, ಯಲಬುರ್ಗಾ ಕ್ಷೇತ್ರದ 45 ಅಧಿಕ ಸಾವಿರ ಮಕ್ಕಳಿಗೆ ದಾಖಲಾತಿ ಆಗಲಿದೆ. ಒಟ್ಟು ಪ್ರಾಥಮಿಕ, ಪ್ರೌಢ, ಸೇರಿದಂತೆ ಒಟ್ಟು 256 ಶಾಲೆ, 1ರಿಂದ 5 ತರಗತಿ ವರೆಗೂ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪಾಠ ಬೋಧನೆ ಆರಂಭವಾಗಲಿದೆ. ಜತೆಗೆ 62 ಎಲ್‌ಕೆಜಿ, ಯುಕೆಜಿ ಪ್ರಾರಂಭವಾಗಿದೆ. ಎಲ್ಲ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಿಕ್ಷಕರಿಗೆ ಸೂಚನೆ ನೀಡಿದ್ದು, ಶಾಸಕ ಬಸವರಾಜ ರಾಯರೆಡ್ಡಿ ಅವರು ಮಾರ್ಗದರ್ಶನ ಪಡೆದು ಶೈಕ್ಷಣಿಕ ಪ್ರಗತಿಗೆ ನಮ್ಮ ಶಿಕ್ಷಣ ಇಲಾಖೆ ವಿಶೇಷ ಆದ್ಯತೆ ನೀಡಲಾಗಿದೆ. ಪಾಲಕರು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಗೆ ಸೇರಿಸಬೇಕು. ಸಾಕಷ್ಟು ಸೌಲಭ್ಯವನ್ನು ಇಲಾಖೆಯ ನೀಡಿದೆ. ವಿವಿಧ ಯೋಜನೆಗಳು ಮಕ್ಕಳಿಗೆ ಪ್ರಗತಿಗೆ ನೆರವು ಆಗಲಿದೆ ಎಂದು ಹೇಳಿದರು.ತಾಲೂಕಿನ ಚಿಕ್ಕಬನ್ನಿಗೋಳ ಗ್ರಾಮದ ಶಾಲೆಗೆ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಲಾಯಿತು.ಮಕ್ಕಳನ್ನು ವಿದ್ಯಾವಂತರಾಗಿ ಮಾಡೋಣ: ರಾಯರೆಡ್ಡಿ ಮನವಿ
ಕ್ಷೇತ್ರದ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಅವರನ್ನು ವಿದ್ಯಾವಂತರಾಗಿ ಮಾಡುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಶಾಸಕ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ. ಶೈಕ್ಷಣಿಕ ಪ್ರಗತಿಗಾಗಿ ಸಾಕಷ್ಟು ಕೆಲಸ ಮಾಡಲಾಗಿದೆ. ಇಡೀ ರಾಜ್ಯದಲ್ಲಿ ಯಲಬುರ್ಗಾವು ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಎಲ್‌ಕೆಜಿಯಿಂದ ಪಿಜಿ, ತಾಂತ್ರಿಕ ಶಿಕ್ಷಣದವರೆಗೂ ಸರ್ಕಾರಿ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ. ಅತಿ ಹೆಚ್ಚು ಶಾಲಾ- ಕಾಲೇಜುಗಳು ತಾಲೂಕಿನಲ್ಲಿ ಕಾಣಬಹುದಾಗಿದೆ. ಆ ನಿಟ್ಟಿನಲ್ಲಿ ನನ್ನ ಕ್ಷೇತ್ರದ ಪ್ರತಿಯೊಬ್ಬ ಮಗು ಗುಣಮಟ್ಟದ ಶಿಕ್ಷಣ ಪಡೆದು ವಿದ್ಯಾವಂತರಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂಬ ಸಂಕಲ್ಪ ನಮ್ಮದು, ಸರ್ಕಾರ ಸಾಕಷ್ಟು ಯೋಜನೆ ಜಾರಿಗೆ ತಂದಿದೆ, ಮಕ್ಕಳಿಗೆ ಶಾಲೆ ಕಳಿಸಬೇಕು, ನೂತನ ಶಾಲೆ ಕಟ್ಟಡಗಳು ನಿರ್ಮಾಣವಾಗಿದೆ ಎಂದು ರಾಯರೆಡ್ಡಿ ತಿಳಿಸಿದ್ದಾರೆ.