ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ರಸ್ತೆ ಮೇಲೆ ಸೂಡಾದವರು ಕಚೇರಿ ನೌಕರರ ವಾಹನ ನಿಲುಗಡೆಗೆ ನಿರ್ಮಿಸಿರುವ ಅನಧಿಕೃತ ಶೆಡ್ ಕೂಡಲೇ ತೆರವುಗೊಳಿಸಬೇಕು ಎಂದು ಆಗ್ರಹಿಸಿ ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ವತಿಯಿಂದ ಪಾಲಿಕೆ ಮುಂಭಾಗ ಅಹೋರಾತ್ರಿ ಧರಣಿ ಸತ್ಯಾಗ್ರಹ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಶೆಡ್ ತೆರವುಗೊಳಿಸುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.ಮಹಾನಗರ ಪಾಲಿಕೆ ಆಯುಕ್ತರು ಕೂಡ ಭೇಟಿ ನೀಡಿ ಅದು ರಸ್ತೆ ಜಾಗ ಎಂಬುದನ್ನು ಒಪ್ಪಿಕೊಂಡಿದ್ದು, ನೀವು ಕೂಡ ಅದನ್ನು ಒಪ್ಪುತ್ತೀರಿ. ಕಾನೂನಾತ್ಮಕವಾಗಿ ಪಾಲಿಕೆ ಮತ್ತು ಸೂಡಾ ಅಧಿಕೃತವಾಗಿ ಅದು ಅನಧಿಕೃತ ಶೆಡ್ ಎಂದು ಒಪ್ಪಿದ್ದರೂ ಕೂಡ ಇನ್ನೂ ಮೀನಮೇಷ ಎಣಿಸುತ್ತಿರುವುದು ನಾಗರಿಕರಿಗೆ ಮಾಡುತ್ತಿರುವ ಅಪಮಾನ ಮತ್ತು ಸರ್ಕಾರದಿಂದಲೇ ನಿಯಮಗಳ ಉಲ್ಲಂಘನೆಯಾಗುತ್ತಿರುವುದು ವಿಷಾದನೀಯ. ಶೆಡ್ ತೆರವುಗೊಳಿಸುವವರೆಗೆ ನಾವು ಧರಣಿ ಸತ್ಯಾಗ್ರಹ ಹಿಂಪಡೆಯುವುದಿಲ್ಲ ಎಂದು ಪಟ್ಟುಹಿಡಿದರು.
ಈಗಾಗಲೇ ಮಹಾನಗರ ಪಾಲಿಕೆಯವರು ಸೂಡಾ ನಿರ್ಮಿಸಿರುವ ಅನಧಿಕೃತ ಶೆಡ್ ತೆರವಿಗೆ ಒಮ್ಮೆ ನೋಟಿಸ್ ನೀಡಿ ಹಾಗೂ ಮತ್ತೊಮ್ಮೆ ಸವಿವರಗಳೊಂದಿಗೆ ಪತ್ರ ಬರೆದು ಶೆಡ್ ತೆರವುಗೊಳಿಸಲು ಸೂಡಾ ಆಯುಕ್ತರಿಗೆ ಸೂಚಿಸಲಾಗಿದೆ. ಕಳೆದ 40 ವರ್ಷಗಳಿಂದ ಸಾರ್ವಜನಿಕರು ಬಳಸುತ್ತಿರುವ 30 ಅಡಿ ರಸ್ತೆ 2012 ಮತ್ತು ಅದಕ್ಕಿಂತ ಪೂರ್ವದ ಎಲ್ಲಾ ನಕ್ಷೆಗಳಲ್ಲಿ ರಸ್ತೆ ಎಂದು ಗುರುತಿಸಲ್ಪಟ್ಟಿರುವ ಅಧಿಕೃತ ರಸ್ತೆಯಾಗಿದೆ. ಈ ರಸ್ತೆಯಲ್ಲಿ ಕಾನೂನು ಬಾಹಿರವಾಗಿ ಸೂಡಾದವರು ಅನಧಿಕೃತ ಶೆಡ್ ನಿರ್ಮಿಸಿ ಸಾರ್ವಜನಿಕರಿಗೆ ಓಡಾಡಲು ಅಡ್ಡಿಪಡಿಸಲಾಗಿದೆ ಎಂದು ದೂರಿದರು.ಧರಣಿಯಲ್ಲಿ ಒಕ್ಕೂಟದ ಪ್ರಮುಖರಾದ ಕೆ.ವಿ. ವಸಂತಕುಮಾರ್, ಡಾ.ಸತೀಶ್ ಕುಮಾರ್ ಶೆಟ್ಟಿ, ಎಸ್.ಬಿ. ಅಶೋಕ್ ಕುಮಾರ್, ವೆಂಕಟನಾರಾಯಣ್, ಜನಮೇಜಿರಾವ್, ಡಿ. ಚಂದ್ರಕಾಂತ್, ಗಿರೀಶ್, ಶ್ರೀಕಾಂತ್, ಸುಬ್ರಹ್ಮಣ್ಯ, ಮನೋಹರ್, ಶಿವಕುಮಾರ್ ಮತ್ತಿತರರು ಇದ್ದರು.
ಶಾಸಕರ ಸೂಚನೆಗೂ ಮಣಿಯದ ಅಧಿಕಾರಿಗಳುಪ್ರತಿಭಟನಾ ಸ್ಥಳಕ್ಕೆ ಶಾಸಕ ಎಸ್.ಎನ್.ಚನ್ನಬಸಪ್ಪ ಸ್ಥಳಕ್ಕೆ ಭೇಟಿ ನೀಡಿ ರಸ್ತೆಯಲ್ಲಿರುವ ಅನಧಿಕೃತ ನಿರ್ಮಾಣದ ಶೆಡ್ ತೆರವುಗೊಳಿಸಲು ಸೂಚಿಸಿದ್ದರಾದರೂ ಸೂಡಾ ಆಯುಕ್ತರು ಮತ್ತು ಅಧಿಕಾರಿಗಳು ಶೆಡ್ ತೆರವುಗೊಳಿಸಲು ಬೇಜವಾಬ್ದಾರಿತನ ತೋರಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಇನ್ನು, ಮುಂದಿನ ಸೂಡಾ ಸಭೆಯಲ್ಲಿ ಸಮಸ್ಯೆ ಬಗೆಹರಿಸುವ ಭರವಸೆಯನ್ನು ಶಾಸಕರು ನೀಡಿದ್ದಾರೆ ಎನ್ನಲಾಗಿದೆ.