ಅರಣ್ಯಭೂಮಿ ಹಕ್ಕಿಗಾಗಿ ಹೋರಾಟ ಅಗತ್ಯ

| Published : Oct 14 2024, 01:18 AM IST

ಸಾರಾಂಶ

ಒಂದೆಡೆ ಭೂಮಿ ಹಕ್ಕಿನಿಂದ ವಂಚಿತವಾಗುವ ಸಂದರ್ಭ ಅರಣ್ಯವಾಸಿಗಳಿಗೆ ಬಂದಿದೆ. ಇನ್ನೊಂದೆಡೆ ಕಸ್ತೂರಿರಂಗನ್ ವರದಿ ಜಾರಿಯಿಂದ ಅವರೆಲ್ಲರ ಬದುಕು ನಾಶವಾಗುವ ಆತಂಕ ಎದುರಾಗಿದೆ.

ಕುಮಟಾ: ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಅರಣ್ಯ ಭೂಮಿ ಹಕ್ಕು ಮತ್ತು ಕಸ್ತೂರಿರಂಗನ್ ವರದಿಯ ಆತಂಕಕ್ಕೆ ಶಾಶ್ವತ ಪರಿಹಾರ ಅವಶ್ಯ ಎಂದು ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.

ಪಟ್ಟಣದ ಮಹಾಸತಿ ಸಭಾಭವನದಲ್ಲಿ ಭಾನುವಾರ ಅರಣ್ಯ ಹೋರಾಟಗಾರರ ವೇದಿಕೆಯಿಂದ ಆಯೋಜಿಸಿದ್ದ ನ. ೭ರಂದು ಬೆಂಗಳೂರು ಚಲೋ ಕುರಿತು ಪೂರ್ವಭಾವಿಯಾಗಿ ಅರಣ್ಯವಾಸಿಗಳ ಸಭೆಯಲ್ಲಿ ಮಾತನಾಡಿದರು. ಒಂದೆಡೆ ಭೂಮಿ ಹಕ್ಕಿನಿಂದ ವಂಚಿತವಾಗುವ ಸಂದರ್ಭ ಅರಣ್ಯವಾಸಿಗಳಿಗೆ ಬಂದಿದೆ. ಇನ್ನೊಂದೆಡೆ ಕಸ್ತೂರಿರಂಗನ್ ವರದಿ ಜಾರಿಯಿಂದ ಅವರೆಲ್ಲರ ಬದುಕು ನಾಶವಾಗುವ ಆತಂಕ ಎದುರಾಗಿದೆ. ಇವೆರಡು ಸಮಸ್ಯೆಗಳ ವಿರುದ್ಧ ಕಾನೂನು ಮತ್ತು ಸಾಂಘಿಕ ಹೋರಾಟ ಅನಿವಾರ್ಯವಾಗಿದೆ. ಹೋರಾಟಗಾರರ ವೇದಿಕೆಯಿಂದ ಕುಮಟಾ ತಾಲೂಕಿನಲ್ಲಿ ಸುಮಾರು ೩೦೦೦ ಅರಣ್ಯವಾಸಿಗಳಿಗೆ ಉಚಿತವಾಗಿ ಕಾನೂನು ನೆರವು ನೀಡಿ, ಅಸಮರ್ಪಕ ಜಿಪಿಎಸ್ ವಿರುದ್ಧ ಅಪೀಲು ಸಲ್ಲಿಸಿದೆ ಎಂದರು. ಗಜಾನನ ಪಟಗಾರ, ಜಿಲ್ಲಾ ಸಂಚಾಲಕ ರಾಜೇಶ ಮಿತ್ರ ನಾಯ್ಕ ಅಂಕೋಲಾ, ಅರವಿಂದ ಗೌಡ ಅಂಕೋಲಾ, ಕುಸಂಬಿ ಖಾನ್, ಜಗದೀಶ ಹರಿಕಂತ್ರ, ಶಂಕರ ಗೌಡ ಕಂದೊಳ್ಳಿ, ಸೀತಾರಾಮ ನಾಯ್ಕ ಮಾತನಾಡಿದರು.ಸಭೆಯಲ್ಲಿ ಪ್ರಕಾಶ ನಾಯ್ಕ ಕತಗಾಲ, ಗಣಪತಿ ಮರಾಠಿ ಕಳವೆ, ಸುನೀಲಾ ಹರಿಕಂತ್ರ ಕಡ್ಲೆ, ಅಯುಬ್ ಉಮರ್ ಬೆಟ್ಕುಳಿ, ಜಗದೀಶ ನಾಯ್ಕ ಹೆಬೈಲ್ ಇತರರು ಉಪಸ್ಥಿತರಿದ್ದರು. ಜಿಲ್ಲಾ ಸಂಚಾಲಕ ಮಹೇಂದ್ರ ನಾಯ್ಕ ಸ್ವಾಗತಿಸಿ, ನಿರ್ವಹಿಸಿದರು.

ಪ್ರವಾದಿ ಬಗ್ಗೆ ಅವಹೇಳನ: ನಾಳೆ ಭಟ್ಕಳ ಬಂದ್‌ಗೆ ಕರೆ

ಭಟ್ಕಳ: ಸ್ವಾಮಿ ನರಸಿಂಹಾನಂದ್ ಎಂಬವರಿಂದ ಹಜ್ರತ್ ಮುಹಮ್ಮದ್ ಮುಸ್ತಫಾ ಅವರ ವಿರುದ್ಧ ನೀಡಲಾದ ಅವಮಾನಕರ ಹೇಳಿಕೆಯನ್ನು ಇಲ್ಲಿನ ಮಜ್ಲಿಸೆ ಇಸ್ಲಾಹ್ ವ ತಂಝೀಮ್ ತೀವ್ರವಾಗಿ ಖಂಡಿಸಿದ್ದು, ಅ. 14ರಂದು ಸಹಾಯಕ ಆಯುಕ್ತರ ಮೂಲಕ ಭಾರತದ ಮುಖ್ಯ ನ್ಯಾಯಮೂರ್ತಿಯವರಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದೆ. ಜತೆಗೆ ಅ.15ರಂದು ಭಟ್ಕಳ ಬಂದ್‌ಗೆ ಕರೆ ನೀಡಿದೆ.ಸಂಘಟನೆಯ ಹಿರಿಯರು, ವಿವಿಧ ಸಂಸ್ಥೆಗಳ ಮತ್ತು ಫೆಡರೇಶನ್‌ಗಳ ಪ್ರಮುಖರು ಹಾಗೂ ಕ್ರೀಡಾ ಕೇಂದ್ರಗಳ ಪ್ರತಿನಿಧಿಗಳ ಜತೆ ನಡೆದ ಸಭೆಗಳಲ್ಲಿ ಈ ನಿರ್ಣಯಕ್ಕೆ ಬಂದಿದ್ದು, ತಂಝೀ ನೇತೃತ್ವದಲ್ಲಿ ಸೋಮವಾರ ಭಟ್ಕಳ ಪೊಲೀಸ್ ಠಾಣೆಗೆ ನಿಯೋಗ ತೆರಳಿ ಸ್ವಾಮಿ ನರಸಿಂಹಾನಂದ್ ವಿರುದ್ಧ ದೂರು ದಾಖಲಿಸಲು ನಿರ್ಧರಿಸಲಾಗಿದೆ. ಸಂಜೆ ತಾಲೂಕು ಆಡಳಿತ ಸೌಧದ ಹೊರಗೆ ಪ್ರತಿಭಟನೆ ನಡೆಸಿ, ಸಹಾಯಕ ಆಯುಕ್ತರ ಮೂಲಕ ಮುಖ್ಯ ನ್ಯಾಯಮೂರ್ತಿಗೆ ಮನವಿ ಸಲ್ಲಿಸಲಾಗುತ್ತದೆ.ಅ. 15ರಂದು ತಂಝೀಂನಿಂದ ಭಟ್ಕಳ ಬಂದ್‌ಗೆ ಕರೆ ನೀಡಲಾಗಿದ್ದು, ಸಾರ್ವಜನಿಕರು ಈ ಬಂದ್‌ನಲ್ಲಿ ಭಾಗವಹಿಸಿ ಪ್ರವಾದಿ ಮುಹಮ್ಮದ್ ಪೈಗಂಬರರ ವಿರುದ್ಧ ಮಾಡುತ್ತಿರುವ ಅವಮಾನವನ್ನು ಖಂಡಿಸುವಂತೆ ತಂಝೀಂ ಮನವಿ ಮಾಡಿದೆ.