ವಾಣಿಜ್ಯ ಬ್ಯಾಂಕ್‌ಗಳಿಗೆ ಸಹಕಾರಿಗಳು ಸ್ಪರ್ಧೆ ನೀಡುವಂತಾಗಲಿ: ಸಿದ್ದರಾಮಯ್ಯ

| Published : Oct 14 2024, 01:18 AM IST

ವಾಣಿಜ್ಯ ಬ್ಯಾಂಕ್‌ಗಳಿಗೆ ಸಹಕಾರಿಗಳು ಸ್ಪರ್ಧೆ ನೀಡುವಂತಾಗಲಿ: ಸಿದ್ದರಾಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಒಂದು ಸಹಕಾರಿ ಬ್ಯಾಂಕ್‌ ಶತಮಾನೋತ್ಸವ ಆಚರಿಸುವುದು ಸಣ್ಣ ಮಾತಲ್ಲ. ರಡ್ಡಿ ಬ್ಯಾಂಕ್‌ 110 ವರ್ಷ ಪೂರೈಸಿರುವುದು ಆಡಳಿತ ಮಂಡಳಿಯ ಪ್ರಾಮಾಣಿಕತೆಗೆ ಸಾಕ್ಷಿಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಧಾರವಾಡ: ಸಹಕಾರಿ ಕ್ಷೇತ್ರದ ಬ್ಯಾಂಕ್‌ಗಳು ವಾಣಿಜ್ಯ ಬ್ಯಾಂಕ್‌ಗಳ ಸ್ಪರ್ಧೆ ನೀಡುವ ಜತೆಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ಬೆಳೆದರೆ ಸಹಕಾರಿ ರಂಗದಲ್ಲಿ ಸಾಕಷ್ಟು ಅಭಿವೃದ್ಧಿ ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಇಲ್ಲಿಯ ರಡ್ಡಿ ಸಹಕಾರ ಬ್ಯಾಂಕ್‌ ನಿಯಮಿತ ನಗರದ ಡಾ. ಡಿ. ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಭಾನುವಾರ ಏರ್ಪಡಿಸಿದ್ದ ಬ್ಯಾಂಕ್‌ ಶತಮಾನೋತ್ಸವ ಸಂಭ್ರಮ ಉದ್ಘಾಟಿಸಿ ಮಾತನಾಡಿದರು. ಸಹಕಾರಿ ಬ್ಯಾಂಕ್‌ಗಳು ಜಿಲ್ಲಾ ಮಟ್ಟದಲ್ಲಿ ಪ್ರಮುಖ ಬ್ಯಾಂಕ್‌ಗಳಾಗಿ ಹೊರಹೊಮ್ಮಬೇಕು. ಶಾಖೆಗಳ ಹೆಚ್ಚಳದ ಜತೆಗೆ ವಹಿವಾಟು ಹೆಚ್ಚಳಕ್ಕೂ ಪ್ರಯತ್ನಿಸಬೇಕು. ಸಹಕಾರಿ ಬ್ಯಾಂಕ್‌ಗಳ ಸರ್ವತೋಮುಖ ಬೆಳವಣಿಗೆಗೆ ಸರ್ಕಾರ ಬದ್ಧವಾಗಿದ್ದು, ಅಗತ್ಯ ನೆರವು ನೀಡಲಿದೆ ಎಂದರು.

ಒಂದು ಸಹಕಾರಿ ಬ್ಯಾಂಕ್‌ ಶತಮಾನೋತ್ಸವ ಆಚರಿಸುವುದು ಸಣ್ಣ ಮಾತಲ್ಲ. ರಡ್ಡಿ ಬ್ಯಾಂಕ್‌ 110 ವರ್ಷ ಪೂರೈಸಿರುವುದು ಆಡಳಿತ ಮಂಡಳಿಯ ಪ್ರಾಮಾಣಿಕತೆಗೆ ಸಾಕ್ಷಿಯಾಗಿದೆ. ಆಡಳಿತ ಮಂಡಳಿ ಪ್ರಾಮಾಣಿಕವಾಗಿರದಿದ್ದರೆ, ಹೆಗ್ಗಣಗಳು ಸೇರಿ ಕೊರೆಯಲು ಆರಂಭಿಸುತ್ತವೆ. ಹೀಗಾಗಿ ಆಡಳಿತ ಮಂಡಳಿ ಪ್ರಾಮಾಣಿಕ ಕಾರ್ಯ ಅತ್ಯಂತ ಮುಖ್ಯ. ಈ ಬ್ಯಾಂಕ್‌ ಈ ಮಟ್ಟಕ್ಕೆ ಬೆಳೆಯಲು ಸಹಕಾರಿ ಭೀಷ್ಮ ಕೆ.ಎಚ್‌. ಪಾಟೀಲರ ಕೊಡುಗೆಯೂ ಅಪಾರವಾಗಿದೆ. ಪಾಟೀಲ ಅವರು ಅತ್ಯಂತ ಕಡಿಮೆ ಅವಧಿಯಲ್ಲೇ ಅಪಾರ ಸೇವೆ ಸಲ್ಲಿಸಿದ್ದಾರೆ. ರಡ್ಡಿ ಬ್ಯಾಂಕ್‌ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಎತ್ತರಕ್ಕೆ ಬೆಳೆಯಲು, ರೈತರಿಗೆ ಸಹಾಯ ಮಾಡಲಿ ಎಂದರು.

ಸಮಾಜದಲ್ಲಿ ಪ್ರತಿಯೊಬ್ಬರಿಗೂ ಸಾಮಾಜಿಕ, ಆರ್ಥಿಕ ನ್ಯಾಯ ಸಿಕ್ಕಾಗ ಮಾತ್ರ ಅಸಮಾನತೆ ಹೋಗಲಾಡಿಸಬಹುದು. ಈ ಅಸಮಾನತೆ ಹೋಗಲಾಡಿಸುವಲ್ಲಿ ಸಹಕಾರಿ ಕ್ಷೇತ್ರದ ಕೊಡುಗೆ ಸಹ ಅಪಾರವಾಗಿದೆ. ಹೀಗಾಗಿ ಸಹಕಾರ ಬ್ಯಾಂಕ್‌ ರೈತರ ಅನುಕೂಲತೆ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು ಎಂದರು.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮಾತನಾಡಿ, 1983ರಲ್ಲಿ ಸೊಸೈಟಿ ಚುನಾವಣೆ ಮೂಲಕವೇ ರಾಜಕೀಯ ಪ್ರವೇಶಿಸಿದ್ದು, ತಮ್ಮ ಮೊದಲ ಚುನಾವಣೆಗೆ ಆಗ ಕೆ.ಎಚ್‌. ಪಾಟೀಲ ಅವರೇ ಕಾಂಗ್ರೆಸ್‌ನಿಂದ ಬಿ ಫಾರಂ ನೀಡಿದ್ದನ್ನು ಸ್ಮರಿಸಿದರು. ಆನಂತರ ಕೆ.ಎಚ್. ಪಾಟೀಲ ಅವರೊಂದಿಗೆ ಶಾಸಕ, ಮಂತ್ರಿಯಾಗಿಯೂ ಕೆಲಸ ಮಾಡಿದ್ದೇನೆ. ಈಗ ಅವರ ಪುತ್ರ ಎಚ್‌.ಕೆ. ಪಾಟೀಲ ಅವರೊಂದಿಗೂ ಶಾಸಕ, ಮಂತ್ರಿಯಾಗಿದ್ದೇನೆ ಎಂದರು.

ಸಹಕಾರಿ ಕ್ಷೇತ್ರದಲ್ಲಿ ಶಿಸ್ತು ಬಹುಮುಖ್ಯ. ಆಡಳಿತ ಮಂಡಳಿ ಶಿಸ್ತು ಕಾಪಾಡಿದರೆ ಮಾತ್ರ ರೆಡ್ಡಿ ಬ್ಯಾಂಕ್‌ನಂತೆ ನೂರು ವರ್ಷ ತಲಪಲು ಸಾಧ್ಯ. ದುಡ್ಡು, ಬ್ಲಡ್‌ ಎರಡು ನಿರಂತರವಾಗಿ ಸಮಾಜದ ಅಭಿವೃದ್ಧಿಗಾಗಿ ಹರಿಯುತ್ತಿರಬೇಕು. ಅಂದಾಗಲೇ ಅವುಗಳಿಗೆ ಬೆಲೆ. ದುಡ್ಡು ಒಂದೇ ಕಡೆ ಇದ್ದರೆ ಜಿಎಸ್‌ಟಿ, ಇನಕಮ್‌ ಟ್ಯಾಕ್ಸ್‌ ಅಂತಹವರು ಬೆನ್ನು ಬೀಳುತ್ತಾರೆ. ಹಾಗೆಯೇ ಬ್ಲಡ್‌ ಹರಿಯದೇ ಇದ್ದಲ್ಲಿ ರೋಗ ಬರುತ್ತದೆ. ಅದೇ ರೀತಿ ರಡ್ಡಿ ಸಹಕಾರಿ ಸೇರಿದಂತೆ ಎಲ್ಲ ಸಹಕಾರಿ ಬ್ಯಾಂಕ್‌ಗಳು ಉದ್ಯೋಗಗಳನ್ನು ಸೃಷ್ಟಿಸುವುದಕ್ಕಿಂತ ಉದ್ಯಮಿಗಳನ್ನು ಸೃಷ್ಟಿಸುವಲ್ಲಿ ಹೆಚ್ಚು ಗಮನ ಹರಿಸಬೇಕೆಂಬ ಸಲಹೆ ನೀಡಿದರು.

ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಎಚ್‌.ಕೆ. ಪಾಟೀಲ, ರಡ್ಡಿ ಬ್ಯಾಂಕ್‌ ಪಟ್ಟಣದ ಬ್ಯಾಂಕ್‌ ಅಲ್ಲ. ಇದು ರೈತರಿಗೋಸ್ಕರ ಸ್ವಾತಂತ್ರ್ಯ ಪೂರ್ವ 1914ರಲ್ಲಿ ಶುರುವಾದ ಬ್ಯಾಂಕ್‌. ರೈತರ ಏಳ್ಗೆಯೊಂದಿಗೆ ಸ್ವಾತಂತ್ರ್ಯ ಹೋರಾಟಕ್ಕೆ ಕ್ರಿಯಾಶಕ್ತಿಯಾಗಿ, ಹೋರಾಟದ ಕೇಂದ್ರವಾಗಿ ಬೆಳೆದಿದೆ ಎಂದರು.

ಕೆ.ಎಚ್‌. ಪಾಟೀಲ ವಿಚಾರಧಾರೆ ಪುಸ್ತಕವನ್ನು ವಿಪ ಸಭಾಪತಿ ಬಸವರಾಜ ಹೊರಟ್ಟಿ ಬಿಡುಗಡೆ ಮಾಡಿದರು. ಎರೆಹೊಸಳ್ಳಿ ಮಹಾಯೋಗಿ ವೇಮನ ಸಂಸ್ಥಾನಮಠದ ವೇಮನಾಂದ ಸ್ವಾಮೀಜಿ ಹಾಗೂ ಮುರುಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಾಷ್ಟ್ರೀಯ ಪಟ್ಟಣ ಸಹಕಾರ ಬ್ಯಾಂಕ್‌ಗಳ ಅಧ್ಯಕ್ಷ ಲಕ್ಷ್ಮೀದಾಸ, ಸಾರಿಗೆ ಸಚಿವ ರಾಮಲಿಂಗಾರಡ್ಡಿ, ಶಾಸಕರಾದ ಎನ್‌.ಎಚ್‌. ಕೋನರಡ್ಡಿ, ಸಿ.ಎಸ್‌. ನಾಡಗೌಡ, ಆಡಳಿತ ಮಂಡಳಿ ನಿರ್ದೇಶಕ ವಿ.ಡಿ. ಕಾಮರಡ್ಡಿ, ಬ್ಯಾಂಕ್‌ ಸಿಇಒ ವಿ.ಆರ್‌. ನಾಗಾವಿ, ಉಪಾಧ್ಯಕ್ಷ ಕೆ.ಬಿ. ನಾಯಕ ಮತ್ತಿತರರು ಇದ್ದರು. ಬ್ಯಾಂಕ್‌ ಅಧ್ಯಕ್ಷ ಕೆ.ಎಲ್‌. ಪಾಟೀಲ ಸ್ವಾಗತಿಸಿದರು.