ವೇತನಕ್ಕಾಗಿ ಅನುದಾನಿತ ಶಾಲಾ ಶಿಕ್ಷಕರ ಪರದಾಟ

| Published : Aug 28 2024, 12:47 AM IST

ಸಾರಾಂಶ

ಹೊಸಪೇಟೆಯಲ್ಲಿ ಅನುದಾನಿತ ಎಂಟು ಪ್ರೌಢಶಾಲೆ, ಐದು ಪ್ರಾಥಮಿಕ ಶಾಲೆಗಳಿವೆ.

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ: ತಾಲೂಕಿನ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಶಿಕ್ಷಕರು ಮತ್ತು ಸಿಬ್ಬಂದಿ ಮೂರು ತಿಂಗಳಿನಿಂದ ವೇತನ ಇಲ್ಲದೇ ಪರದಾಡುವಂತಾಗಿದೆ. ತಾಂತ್ರಿಕ ಕಾರಣದಿಂದ ಈ ಸಮಸ್ಯೆ ಉಂಟಾಗಿದೆ ಎಂದು ಬಿಇಒ ಕಾರ್ಯಾಲಯ ತಿಳಿಸುತ್ತಿದೆ. ಆದರೆ, ಸಂಬಳ ಇಲ್ಲದೇ ಶಿಕ್ಷಕರು ಪಾಠ ಮಾಡುವ ಸ್ಥಿತಿ ಬಂದೊದಗಿದೆ.

ಹೊಸಪೇಟೆಯಲ್ಲಿ ಅನುದಾನಿತ ಎಂಟು ಪ್ರೌಢಶಾಲೆ, ಐದು ಪ್ರಾಥಮಿಕ ಶಾಲೆಗಳಿವೆ. ಕಳೆದ ಮೂರು ತಿಂಗಳಿನಿಂದಲೂ ಈ ಶಾಲೆಗಳ ಮುಖ್ಯ ಶಿಕ್ಷಕರು ಹೊಸಪೇಟೆ ಬಿಇಒ ಕಚೇರಿಗೆ ತಿರುಗಾಡುತ್ತಿದ್ದಾರೆ. ಆದರೂ ಸಮಸ್ಯೆ ಮಾತ್ರ ಬಗೆಹರಿಯುತ್ತಿಲ್ಲ.

ಸಮಸ್ಯೆ ಏನು?; ಕಂಪ್ಲಿ ತಾಲೂಕು ಹೊಸಪೇಟೆಯ ಬಿಇಒ ಕಚೇರಿ ವ್ಯಾಪ್ತಿಯಲ್ಲಿತ್ತು. ಈಗ ಕಂಪ್ಲಿ ತಾಲೂಕನ್ನು ಬಳ್ಳಾರಿ ಪಶ್ಚಿಮ ವಲಯದ ಕುರುಗೋಡು ಬಿಇಒ ಕಚೇರಿಗೆ ವರ್ಗಾಯಿಸಲಾಗಿದೆ. ಹಾಗಾಗಿ ಶಿಕ್ಷಕರ ಸೇವಾ ಎಚ್‌ಆರ್‌ಎಂಎಸ್‌ ತಂತ್ರಾಂಶವನ್ನು ಕುರುಗೋಡು ಬಿಇಒ ಕಚೇರಿಗೆ ಮ್ಯಾಪಿಂಗ್‌ ಮಾಡಲಾಗಿದೆ. ಹಾಗಾಗಿ ಹೊಸಪೇಟೆಯ ಅನುದಾನಿತ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಸಮಸ್ಯೆ ಉಂಟಾಗಿತ್ತು. ಈಗ ವೇತನ ಬಿಲ್‌ ತೆಗೆಯಲಾಗಿದ್ದು, ಖಜಾನೆ-2ಗೆ ಹೋಗುತ್ತಿಲ್ಲ. ಬದಲಿಗೆ ಎಚ್‌ಆರ್‌ಎಂಸ್‌ ಪೋರ್ಟಲ್‌ನಲ್ಲೇ ಉಳಿಯುತ್ತಿದೆ ಎಂದು ಹೊಸಪೇಟೆ ಬಿಇಒ ಕಚೇರಿಯಿಂದ ಕಲಬುರಗಿಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರಿಗೆ ಪತ್ರ ಬರೆಯಲಾಗಿತ್ತು. ಈಗ ಸಮಸ್ಯೆ ಬಗೆಹರಿದಿದ್ದು, ಶೀಘ್ರವೇ ಜೂನ್‌ ತಿಂಗಳ ವೇತನ ನೀಡಲಾಗುವುದು ಎಂದು ಹೊಸಪೇಟೆ ಬಿಇಒ ಎಂ.ಚನ್ನಬಸಪ್ಪ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ಇನ್ನೂ 2 ತಿಂಗಳ ವೇತನ ಬಾಕಿ: ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಶಿಕ್ಷಕರ, ಸಿಬ್ಬಂದಿ ವೇತನದ ಜೂನ್‌ ತಿಂಗಳ ಬಿಲ್ ತಯಾರಾಗಿವೆ. ಈಗಾಗಲೇ ಸಂಬಂಧಿಸಿದ ಶಾಲೆಗಳ ಮುಖ್ಯ ಶಿಕ್ಷಕರಿಂದ ಸಹಿ ಪಡೆಯಲಾಗಿದೆ. ಇನ್ನು ಜುಲೈ, ಆಗಸ್ಟ್‌ ತಿಂಗಳ ವೇತನ ಬಿಲ್‌ಗಳಿಗೆ ಯಾವಾಗ ಸಹಿ ಪಡೆಯಲಾಗುತ್ತದೆ ಎಂದು ಶಿಕ್ಷಕರು ಎದುರು ನೋಡುವಂತಾಗಿದೆ.

ವಿಳಂಬ ನಡೆ: ಹೊಸಪೇಟೆ ಬಿಇಒ ಕಾರ್ಯಾಲಯ ತಾಂತ್ರಿಕ ಕಾರಣದ ನೆಪವೊಡ್ಡಿ, ಇಲ್ಲವೇ ಯಾವುದಾದರೂ ಸಬೂಬು ನೀಡಿ ಪ್ರತಿ ತಿಂಗಳು ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಶಿಕ್ಷಕರ ಹಾಗೂ ಸಿಬ್ಬಂದಿ ವೇತನ ವಿಳಂಬ ಮಾಡಲಾಗುತ್ತಿದೆ. ಇನ್ನು ವಾರ್ಷಿಕ ಬಡ್ತಿಯೂ ವಿಳಂಬ ಮಾಡಲಾಗುತ್ತಿದೆ. ಇದರಿಂದ ಶಿಕ್ಷಕರು ಸಕಾಲಕ್ಕೆ ಸಂಬಳ ಪಡೆಯದಂತಾಗಿದೆ. ಎಚ್‌ಆರ್‌ಎಂಎಸ್‌ ಪೋರ್ಟಲ್‌ನಿಂದ ಖಜಾನೆ-2ಗೆ ಕಳುಹಿಸಲು ತಾಂತ್ರಿಕ ನೆಪ ಒಡ್ಡಲಾಗುತ್ತಿದೆ. ಅಸಲಿ ಕಾರಣ, ಸಂಬಳ, ವಾರ್ಷಿಕ ಬಡ್ತಿ ಇತ್ಯಾದಿಗಳಿಗೆ ಇಂತಿಷ್ಟು ಲಂಚ ನಿಗದಿ ಮಾಡಲಾಗಿದೆ. ಅದು ಕಾಲಕಾಲಕ್ಕೆ ಸಂದಾಯವಾದರೆ, ಯಾವ ಸಬೂಬು ಇಲ್ಲದೇ ಎಲ್ಲವೂ ಸುಸೂತ್ರವಾಗಿ ನಡೆಯುತ್ತದೆ. ತುಟ್ಟಿ ದಿನಮಾನದಲ್ಲಿ ಪ್ರತಿಬಾರಿಯೂ ಲಂಚ ಕೊಡುವುದಾದರೂ ಹೇಗೆ? ಎಂದು ಹೆಸರು ಹೇಳಲಿಚ್ಛಿಸದ ಶಿಕ್ಷಕರು ಕನ್ನಡಪ್ರಭಕ್ಕೆ ದೂರಿದರು.

ಪ್ರತಿ 2 ತಿಂಗಳಿಗೊಮ್ಮೆ ವಿಳಂಬ: ಹೊಸಪೇಟೆ ಬಿಇಒ ಕಾರ್ಯಾಲಯದಲ್ಲಿ ಪ್ರತಿ ಎರಡು ತಿಂಗಳಿಗೊಮ್ಮೆ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಶಿಕ್ಷಕರ ಮತ್ತು ಸಿಬ್ಬಂದಿ ವೇತನಕ್ಕೆ ಕೊಕ್ಕೆ ಹಾಕಲಾಗುತ್ತಿದೆ. ಮುಖ್ಯ ಶಿಕ್ಷಕರು ಪಾಠ ಮಾಡುವುದನ್ನು ಬಿಟ್ಟು ವೇತನಕ್ಕಾಗಿ ಕಡತ ಹಿಡಿದು ತಿರುಗಾಡುವಂತಾಗಿದೆ.

ತಾಂತ್ರಿಕ ಸಮಸ್ಯೆಯಿಂದ ಅನುದಾನಿತ ಪ್ರಾಥಮಿಕ, ಪ್ರೌಢಶಾಲೆಗಳ ಶಿಕ್ಷಕರ ವೇತನ ಪಾವತಿ ವಿಳಂಬವಾಗಿದೆ. ಜೂನ್‌ ತಿಂಗಳ ವೇತನ ಬಿಲ್ಲು ಪಾವತಿಯಾಗಿದೆ. ಜುಲೈ, ಆಗಸ್ಟ್‌ ತಿಂಗಳ ವೇತನ ತಡ ಮಾಡದೇ ಪಾವತಿಸಲಾಗುವುದು. ಈಗ ತಾಂತ್ರಿಕ ಸಮಸ್ಯೆ ಕೂಡ ಬಗೆಹರಿದಿದೆ ಎನ್ನುತ್ತಾರೆ ಬಿಇಒ ಹೊಸಪೇಟೆ ಎಂ.ಚನ್ನಬಸಪ್ಪ.