ಸಾರಾಂಶ
ಒಳಚರಂಡಿ ಮಂಡಳಿ ಕಾಮಗಾರಿಯನ್ನು ಕೊಳ್ಳೇಗಾಲ ಪಟ್ಟಣದಲ್ಲಿ ಸಂಪೂರ್ಣಗೊಳಿಸಿಯೇ ಇಲ್ಲ, ಇನ್ನು ಹಸ್ತಾಂತರದ ಪ್ರಕ್ರಿಯೆಯೆ ಹೇಗೆ ಸಾಧ್ಯ ಎಂದು ನಗರಸಭೆ ಮಾಜಿ ಅಧ್ಯಕ್ಷ ರಮೇಶ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಒಳಚರಂಡಿ ಮಂಡಳಿ ಕಾಮಗಾರಿಯನ್ನು ಕೊಳ್ಳೇಗಾಲ ಪಟ್ಟಣದಲ್ಲಿ ಸಂಪೂರ್ಣಗೊಳಿಸಿಯೇ ಇಲ್ಲ, ಇನ್ನು ಹಸ್ತಾಂತರದ ಪ್ರಕ್ರಿಯೆಯೆ ಹೇಗೆ ಸಾಧ್ಯ, ನಗರಸಭೆ ಸದಸ್ಯೆ ಜಯಮೇರಿ ಅವರು ದುರುದ್ದೇಶದಿಂದಾಗಿ ನಾನು ಸೇರಿದಂತೆ ಹಲವರ ಮೇಲೆ ದೂರು ನೀಡಿದ್ದಾರೆ, ನಾವು ಸಹ ಲೋಕಾಯುಕ್ತಕ್ಕೆ ಪೂರಕ ದಾಖಲೆ ಸಲ್ಲಿಸಲು ಸಜ್ಜಾಗಿದ್ದೇವೆ. ಸಂಪೂರ್ಣ ವಾಸ್ತವಾಂಶವನ್ನು ಅಧಿಕಾರಿಗಳ ಮುಂದೆ ವಿವರಿಸುತ್ತೇವೆ, ಇಂತಹ ಬೆದರಿಕೆ ಮತ್ತು ನಮ್ಮ ಮೇಲಿನ ಆರೋಪಿಗಳಿಗೆ ನಾವು ಜಗ್ಗಲ್ಲ ಎಂದು ನಗರಸಭೆ ಮಾಜಿ ಅಧ್ಯಕ್ಷ ರಮೇಶ್ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಳಚರಂಡಿ ಮಂಡಳಿಯಲ್ಲಿ ಇನ್ನು ಸಹಾ ₹36ಕೋಟಿಗೂ ಅಧಿಕ ಕಾಮಗಾರಿ ಬಾಕಿ ಇದೆ. ಹಾಗಾಗಿ ₹97 ಕೋಟಿ ಅನುದಾನದ ಕಾಮಗಾರಿಯನ್ನು ಹಸ್ತಾಂತರ ಮಾಡಿಕೊಳ್ಳುವುದಾದರೂ ಹೇಗೆ ಎಂಬುದನ್ನು ನಾಗರೀಕರು ಅರಿಯಬೇಕು. ನಾನು ಸೇರಿದಂತೆ ಹಲವು ಸದಸ್ಯರು ಯುಜಿಡಿ ಕಾಮಗಾರಿಯಲ್ಲಿ ಭಾರಿ ಲೋಪ, ಭ್ರಷ್ಟಾಚಾರ ಮಾಡಿದ್ದಾರೆ ಎಂದು ಬಿಂಬಿಸಲಾಗುತ್ತಿದೆ. ಇದು ಸರಿಯಾದ ಬೆಳವಣಿಗೆಯಲ್ಲ, ನಾನು ಯಾವುದೇ ಹಣವನ್ನು ದುರ್ಬಳಕೆ ಮಾಡಿಲ್ಲ, ₹97ಕೋಟಿಗೂ ಅನುದಾನದ ಕಾಮಗಾರಿಯನ್ನು ಹಸ್ತಾಂತರಿಸಲಾಗಿದೆ, ಇಲ್ಲಿ ಲೋಪವಾಗಿದೆ ಎನ್ನುವವರು ಇನ್ನು ಸರ್ಕಾರದಲ್ಲಿ ₹36 ಕೋಟಿ ಹಣ ಬಾಕಿ ಇದೆ ಎಂಬುದನ್ನು ಮರೆಮಾಚುತ್ತಿದ್ದಾರೆ.2018ರ ಜೂನ್ ತನಕ ನಡೆದಿದ್ದ ಕೆಲ ಚರಂಡಿ ಜಾಲವನ್ನು ಮಾತ್ರ ನಾವು ಹಸ್ತಾಂತರಿಸಿಕೊಂಡಿದ್ದೆವೆ, ಸಂಪೂರ್ಣ ಕಾಮಗಾರಿ ನಡೆಸಿಲ್ಲ, ಕಳೆದ ಸಭೆಯಲ್ಲಿ ಕೆಲ ಕಾಮಗಾರಿಗಳು ಕಳಪೆ ಎಂಬ ದೂರಿನ ಹಿನ್ನೆಲೆಯಲ್ಲಿ ವಾಸ್ತವಾಂಶ ವರದಿ ಅಧಿಕಾರಿಗಳ ತಂಡವನ್ನು ಸಹಾ ನಿಯೋಜಿಸಲಾಗಿದ್ದು ಅವರು ವರದಿ ನೀಡುತ್ತಾರೆ, ಜಯಮೇರಿ ಅವರು ಲೋಕಾಯುಕ್ತಕ್ಕೆ ನೀಡಿರುವ ದೂರಿನ ಹಿನ್ನೆಲೆ ನಾನು ಸೇರಿದಂತೆ ಅಧಿಕಾರಿಗಳು ಸೇರಿ 16 ಮಂದಿಗೆ ನೋಟೀಸ್ ಬಂದಿದೆ. ಇದಕ್ಕೆ ನಾವು ಲೋಕಾಯುಕ್ತ ಅಧಿಕಾರಿಗಳು ನೀಡಿರುವ ಗಡುವಿಗೆ ಸೂಕ್ತ ಸಮಜಾಯಿಸಿ ನೀಡುತ್ತೇವೆ, ದೂರುದಾರರ ಆರೋಪದಂತೆ ₹97ಕೋಟಿ ಅವ್ಯವಹಾರ ನಡೆದಿಲ್ಲ, ಇನ್ನು ₹36 ಕೋಟಿ ಕಾಮಗಾರಿ ನಡೆಯಬೇಕಿದೆ.
2018ರಲ್ಲಿ ಮನೆಗಳಿಗೆ ಸಂಪರ್ಕ ನೀಡಿದ್ದ ಕಾರಣ ಪೈಪ್ ಲೈನ್ ತುಂಬಿ ಹರಿಯುತ್ತಿದ್ದ ಕಾರಣದಿಂದಾಗಿ ನೆಪಮಾತ್ರಕ್ಕೆ ಸದುದ್ದೇಶದಿಂದ ಕಾಮಗಾರಿ ಹಸ್ತಾಂತರ ಮಾಡಿಕೊಂಡು ಮುಂದಿನ ಕಾಮಗಾರಿಗೆ ಸೂಚಿಸಲಾಗಿತ್ತು ಎಂಬುದು ವಾಸ್ತವ, ಈ ಸಂಬಂಧ ಲೋಕಾಯುಕ್ತದಲ್ಲಿ ನಮ್ಮ ಮೇಲೆ ದೂರಿದ್ದ ಮಾತ್ರಕ್ಕೆ ನಾವು ಆರೋಪಿತರೇ ಹೊರತು ಅಪರಾಧಿಗಳಲ್ಲ. ಜಯಮೇರಿ ನಗರಸಭೆ ಅಧ್ಯಕ್ಷ ಸ್ಥಾನದ ಆಸೆಗಾಗಿ ಇನ್ನಿತರರನ್ನು ಬೆದರಿಸುವ ತಂತ್ರಗಾರಿಕೆ ಅನುಸರಿಸುತ್ತಿದ್ದಾರೆ, ಇದಕ್ಕೆಲ್ಲ ನಾವು ಜಗ್ಗಲ್ಲ ಎಂದರು.