ಕನ್ನಡಪ್ರಭ ವಾರ್ತೆ ಪಾಂಡವಪುರ
ಪದವಿ ಓದುವ ವಿದ್ಯಾರ್ಥಿಗಳು ಭಾಷೆ ಮೇಲೆ ಪ್ರಬುದ್ಧತೆ ಸಾಧಿಸಿಕೊಂಡು ಅತ್ಯುತ್ತಮ ಇಂಗ್ಲಿಷ್ ಭಾಷಾ ಪರಿಣಿತಿ ಹೊಂದಿದರೆ ದೇಶ ಸೇರಿದಂತೆ ಪ್ರಪಂಚದ ಯಾವುದೇ ಭಾಗಕ್ಕೆ ಹೋಗಿ ಸಾಧನೆ ಮಾಡಬಹುದು ಎಂದು ಮಂಡ್ಯ ವಿವಿ ಕುಲಪತಿ ಪ್ರೊ.ಕೆ.ಶಿವಚಿತ್ತಪ್ಪ ಹೇಳಿದರು.ತಾಲೂಕಿನ ಚಿನಕುರಳಿ ಗ್ರಾಮದ ಎಸ್‌ಟಿಜಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ 2023-24 ಹಾಗೂ 2024-25ನೇ ಸಾಲಿನಲ್ಲಿ ತೇರ್ಗಡೆಯಾದ ಪದವಿ ವಿದ್ಯಾರ್ಥಿಗಳಿಗೆ ಕಾಲೇಜು ವತಿಯಿಂದ ತಾತ್ಕಾಲಿಕ ಪದವಿ ಪ್ರಮಾಣಪತ್ರ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪದವಿ ಎನ್ನುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಕನಸಾಗಿದೆ. ಪದವಿ ಪತ್ರದೊಂದಿಗೆ ತೆರಳುವ ನೀವು ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಸಮಾಜಕ್ಕೆ ತಮ್ಮದೇ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.ಸಂಸ್ಥೆ ಅಧ್ಯಕ್ಷ, ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು ಮಾತನಾಡಿ, ವಿದ್ಯಾರ್ಥಿಗಳು ಪದವಿ ಪಡೆಯುವುದರೊಂದಿಗೆ ತಂದೆ ತಾಯಿಯ ಆಶೋತ್ತರಗಳನ್ನು ಈಡೇರಿಸಬೇಕು. ತಂದೆ-ತಾಯಿಯ ಶ್ರಮವನ್ನು ಅರಿತು ಅವರಿಗೆ ಗೌರವವನ್ನು ನೀಡಿದಾಗ ಮಾತ್ರ ನೀವು ಶಿಕ್ಷಿತರಾಗಿದ್ದಕ್ಕೂ ಸಾರ್ಥಕವಾಗುತ್ತದೆ ಎಂದರು.
ಸಂಸ್ಥೆ ಸಿಇಒ ಸಿ.ಪಿ.ಶಿವರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಂಶುಪಾಲಡಾ. ನಿಶಾಂತ್ ಎ. ನಾಯ್ಡು ಕಾಲೇಜಿನ ವಾರ್ಷಿಕ ವರದಿಯನ್ನು ಪಿಪಿಟಿ ಮೂಲಕ ಮಂಡಿಸಿದರು.
ಇದೇ ವೇಳೆ ಅತಿ ಹೆಚ್ಚು ಅಂಕ ಪಡೆದು ಅತ್ಯುನ್ನತ ಸ್ಥಾನದಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಾದ ಚಂದು ಎಂ.ಎನ್, ಸೌಜನ್ಯ ಜೆ.ಜೆ, ರುಚಿತ ಆರ್., ಸಿಂಚನ ಎಸ್.ಎಲ್, ಅಭಿಲಾಷ್ ಸಿ.ಎನ್, ಸೋನು ಬಿ.ಕೆ., ನಿಶ್ಚಿತ ಇ. ವಿದ್ಯಾರ್ಥಿಗಳಿಗೆ ಬೆಳ್ಳಿಯ ಪಾರಿತೋಷಕ ನೀಡಿ ಸನ್ಮಾನಿಸಲಾಯಿತು.
ಹಂಪಿ ಕನ್ನಡ ವಿವಿಯಿಂದ ‘ಚಲನಚಿತ್ರಗಳಲ್ಲಿ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಪುನರ್ ರಚನೆ’ ಎಂಬ ವಿಷಯಕ್ಕೆ ಡಾಕ್ಟರೇಟ್ ಪಡೆದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಶ್ರೀಧರ್ ವಿ., ಅವರಿಗೆ ಸಂಸ್ಥೆ ಆಡಳಿತ ಮಂಡಳಿಯಿಂದ 50 ಸಾವಿರ ರು. ನಗದು ನೀಡಿ ಗೌರವಿಸಲಾಯಿತು. ಇದೇ ವೇಳೆ ಕಾಲೇಜಿನ ಒಟ್ಟು 232 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.ಕಾರ್ಯಕ್ರಮದಲ್ಲಿ ಸಂಸ್ಥೆ ಆಡಳಿತಾಧಿಕಾರಿ ನಿವೇದಿತಾ ನಾಗೇಶ್, ಸಿಂಡಿಕೇಟ್ ಸದಸ್ಯ ಪ್ರೊ.ನಾಗರಾಜು, ಎಸ್‌ಟಿಜಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮಾರುತಿ ಟಿ., ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪಲ್ಲವಿ ಸೇರಿದಂತೆ ಹಲವರು ಇದ್ದರು.