ವಿದ್ಯಾರ್ಥಿಗಳು ತಪ್ಪದೇ ಪತ್ರಿಕೆ ಓದಿ

| Published : Aug 05 2025, 11:46 PM IST

ಸಾರಾಂಶ

ಪತ್ರಿಕೆ ಓದುವುದರಿಂದ ನಿಮ್ಮಲ್ಲಿನ ಜ್ಞಾನದ ಅರಿವು ಹೆಚ್ಚಳವಾಗುತ್ತದೆ. ಇದರಿಂದ ಜೀವನದಲ್ಲಿ ಸಾಧನೆ ಮಾಡಲು ಸಾಕಷ್ಟು ಪ್ರೇರಣೆಯಾಗುತ್ತದೆ. ಹೀಗಾಗಿ, ಪಠ್ಯದ ಜತೆಗೆ ನಿತ್ಯವೂ ಅರ್ಧಗಂಟೆಯಾದರೂ ನಿಮಗಿಷ್ಟವಾದ ಪತ್ರಿಕೆ ಓದಬೇಕು.

ಕೊಪ್ಪಳ:

ವಿದ್ಯಾರ್ಥಿಗಳು ಸಮಾಜದಲ್ಲಿನ ಆಗು-ಹೋಗುಗಳನ್ನು ಅರಿಯಲು ನಿತ್ಯವೂ ಪತ್ರಿಕೆ ಓದಬೇಕು ಎಂದು ಪಾನಘಂಟಿ ಫೌಂಡೇಶನ್ ಅಧ್ಯಕ್ಷೆ ಶಾರದ ಪಾನಘಂಟಿ

ಹೇಳಿದರು.ಭಾಗ್ಯನಗರದ ವಿದ್ಯಾವಿಕಾಸ ಶಾಲೆಯ ಸಭಾ ಭವನದಲ್ಲಿ ಫಾನಘಂಟಿ ಫೌಂಡೇಶನ್, ವಾಸವಿ ಕ್ಲಬ್ ವತಿಯಿಂದ ನಡೆದ ಪತ್ರಿಕಾ ದಿನಾಚರಣೆ ಮತ್ತು ಪತ್ರಕರ್ತರಿಗೆ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪತ್ರಿಕೆ ಓದುವುದರಿಂದ ನಿಮ್ಮಲ್ಲಿನ ಜ್ಞಾನದ ಅರಿವು ಹೆಚ್ಚಳವಾಗುತ್ತದೆ. ಇದರಿಂದ ಜೀವನದಲ್ಲಿ ಸಾಧನೆ ಮಾಡಲು ಸಾಕಷ್ಟು ಪ್ರೇರಣೆಯಾಗುತ್ತದೆ. ಹೀಗಾಗಿ, ಪಠ್ಯದ ಜತೆಗೆ ನಿತ್ಯವೂ ಅರ್ಧಗಂಟೆಯಾದರೂ ನಿಮಗಿಷ್ಟವಾದ ಪತ್ರಿಕೆ ಓದಬೇಕು ಎಂದರು.

ಹಿರಿಯ ಪತ್ರಕರ್ತ ಸಾಧಿಕ್ ಅಲಿ ಮಾತನಾಡಿ, ಪತ್ರಕರ್ತರು ವಿಷಯವನ್ನು ಬರೀ ಸುದ್ದಿಯನ್ನಾಗಿ ನೋಡದೆ ಸಮಾಜದ ಅಭಿವೃದ್ಧಿ ಬಗ್ಗೆಯೂ ಚಿಂತಿಸಬೇಕು. ಪತ್ರಕರ್ತರು ನಿರ್ಣಾಯಕರಲ್ಲ, ಓದುಗರೇ ನಿರ್ಣಾಯಕರು. ವಿದ್ಯಾರ್ಥಿಗಳು ಕೂಡ ಹೊಸ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ಪತ್ರಿಕೆ ಓದುವ ಹವ್ಯಾಸ ರೂಪಿಸಿಕೊಳ್ಳಿ ಎಂದರು.

ಪತ್ರಕರ್ತ ಸೋಮರಡ್ಡಿ ಅಳವಂಡಿ ಮಾತನಾಡಿ, ಸಮಾಜದ ಅಭಿವೃದ್ಧಿಯ ಬಗ್ಗೆ ಮಾಹಿತಿ ಹಂಚಿಕೊಳ್ಳುವ ಪ್ರತಿಯೊಬ್ಬರು ಪತ್ರಕರ್ತರೇ. ಸಾಮಾಜಿಕ ಜಾಲತಾಣದಲ್ಲಿ ಬೇಗ ಸುದ್ದಿ ವಿನಿಮಯವಾದರೂ ಅದರ ಬಗ್ಗೆ ನಂಬಿಕೆ ಕಡಿಮೆ. ಯಾವಾಗಲೂ ಸತ್ಯ ಮಾತ್ರ ಸುದ್ದಿಯಾಗಬೇಕೆಂದರು.

ಹಿರಿಯ ಪತ್ರಕರ್ತರಾದ ಶರಣಪ್ಪ ಬಾಚಲಾಪುರ, ರವೀಂದ್ರ ಅನಿಸಿಕೆ ಹಂಚಿಕೊಂಡರು. ಪತ್ರಿಕಾ ದಿನಾಚರಣೆ ನಿಮಿತ್ತ ಶಾಲಾ ಆವರಣದಲ್ಲಿ ಸಸಿ ನೆಡಲಾಯಿತು.

ಈ ವೇಳೆ ಪತ್ರಕರ್ತರಾದ ಸೋಮರಡ್ಡಿ ಅಳವಂಡಿ, ಸಾಧಿಕ್‌ ಅಲಿ, ಜಿ.ಎಸ್. ಗೋನಾಳ, ಶರಣಪ್ಪ ಬಾಚಲಾಪುರ, ರವೀಂದ್ರ ವಿ.ಕೆ , ದತ್ತು ಕಮ್ಮಾರ, ಶ್ರೀಕಾಂತ ಅಕ್ಕಿ, ಅನಿಲ್ ಬಾಚನಹಳ್ಳಿ, ಬಿ.ಎನ್. ಹೊರಪೇಟಿ, ಸಿದ್ದು ಹಿರೇಮಠ, ಎಂ.ಎನ್. ಕುಂದಗೋಳ, ಸಾವೆದ್ ಹುಸೇನ್ ಅವರನ್ನು ಸನ್ಮಾನಿಸಲಾಯಿತು.

ವಾದಿರಾಜ್ ದೇಸಾಯು, ಪ್ರಿಯದರ್ಶಿನಿ ಮುಂಡರಗಿಮಠ, ಹೇಮಾ ಪಾನಘಂಟಿ, ಗಿರಿಜಾ, ವೈಷ್ಣವಿ, ಸಂದೇಶ, ಅರ್ಚನಾ ಹಾಗೂ ಫೌಂಡೇಶನ್ ಪದಾಧಿಕಾರಿಗಳು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕ ಮೋಹನ್ ಕಾರ್ಯಕ್ರಮ ನಿರೂಪಿಸಿದರು.