ಕೇಂದ್ರದಿಂದ ರಾಜ್ಯಕ್ಕೆ ಯೂರಿಯಾ ಪೂರೈಸಲು ಹೋರಾಡಿ

| Published : Aug 05 2025, 11:46 PM IST

ಸಾರಾಂಶ

ಆಡಳಿತ ಪಕ್ಷದ ಹೆಸರು ಹೇಳದಿದ್ದರೆ ಬಿಜೆಪಿ ನಾಯಕರಿಗೆ ನಿದ್ದೆ ಬರುವುದಿಲ್ಲ. ನನ್ನ ಬಗ್ಗೆ ಮಾತನಾಡದಿದ್ದರೆ ಪತ್ರಿಕೆಯಲ್ಲಿ ಇವರ ಹೆಸರು ಬರೆಯುವುದಿಲ್ಲ. ಹೀಗಾಗಿ ನನ್ನ ಹೆಸರನ್ನು ಹೇಳಿಕೊಂಡು ಜಿಲ್ಲೆಯಲ್ಲಿ ಸಂಚರಿಸುತ್ತಿದ್ದಾರೆ.

ಕಾರಟಗಿ:

ಗೊಬ್ಬರ ಅಕ್ರಮ ದಾಸ್ತಾನು ಮಾಡಿದ ದುರುಳರ ಜತೆಗೆ ಕುಳಿತು ಪ್ರತಿಭಟನೆ ಮಾಡುವ ಬದಲು ಬಿಜೆಪಿ ಮುಖಂಡರು ಪ್ರಧಾನಿ ನರೇಂದ್ರ ಮೋದಿ ಬಳಿ ತೆರಳಿ ಯೂರಿಯಾ ಗೊಬ್ಬರವನ್ನು ರಾಜ್ಯಕ್ಕೆ ಪೂರೈಸಲು ಒತ್ತಡ ಹೇರಬೇಕು ಎಂದು ಸಚಿವ ಶಿವರಾಜ್ ತಂಗಡಗಿ ಪುನರುಚ್ಚರಿಸಿದ್ದಾರೆ.

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯೂರಿಯಾ ಗೊಬ್ಬರವನ್ನು ಅಕ್ರಮವಾಗಿ ೧೭ ಟನ್ ದಾಸ್ತಾನು ಮಾಡಿದ ರೈತ ಮುಖಂಡ ಕೇಸರಟ್ಟಿಯ ಶರಣೇಗೌಡ ಇವರ ಎಫ್‌ಬಿಒ ಹೆಸರಿನಲ್ಲಿ ಗೊಬ್ಬರ ಇಟ್ಟುಕೊಂಡಿದ್ದಾರೆ. ಇಂಥ ರೈತರ ಮುಖಂಡರ ಜತೆ ಸೇರಿ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸೂಗೂರು ಪ್ರತಿಭಟನೆ ಮಾಡುತ್ತಾರೆ. ಇದು ಬಿಜೆಪಿಯ ಕೆಲಸ. ಅವರಿಂದ ನಾವು ಪಾಠ ಕಲಿಯುವ ಅವಶ್ಯಕತೆ ಇಲ್ಲ. ಈಗಾಗಲೇ ಕೃಷಿ ಇಲಾಖೆ, ಜಿಲ್ಲಾಧಿಕಾರಿ ಜತೆಗೆ ಸಭೆ ನಡೆಸಿದ್ದು, ಕೆಲ ಗೊಬ್ಬರ ಕಂಪನಿ, ವಿತರಕರನ್ನು ಭೇಟಿ ಮಾಡಲಾಗಿದೆ. ಯಾವುದೇ ರೀತಿಯಲ್ಲಿ ಕಾಳಸಂತೆಯಲ್ಲಿ ಗೊಬ್ಬರ ಮಾರಾಟ ಮತ್ತು ದಾಸ್ತಾನು ಮಾಡದಂತೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಇದನ್ನುಮೀರಿದರೆ ನಿಮ್ಮ ಮಾರಾಟ ಪರವಾನಗಿ ರದ್ದುಪಡಿಸಲಾಗುವುದು ಎಂದು ಎಚ್ಚರಿಸಲಾಗಿದೆ ಎಂದು ಹೇಳಿದರು.

ಆಡಳಿತ ಪಕ್ಷದ ಹೆಸರು ಹೇಳದಿದ್ದರೆ ಬಿಜೆಪಿ ನಾಯಕರಿಗೆ ನಿದ್ದೆ ಬರುವುದಿಲ್ಲ. ನನ್ನ ಬಗ್ಗೆ ಮಾತನಾಡದಿದ್ದರೆ ಪತ್ರಿಕೆಯಲ್ಲಿ ಇವರ ಹೆಸರು ಬರೆಯುವುದಿಲ್ಲ. ಹೀಗಾಗಿ ನನ್ನ ಹೆಸರನ್ನು ಹೇಳಿಕೊಂಡು ಜಿಲ್ಲೆಯಲ್ಲಿ ಸಂಚರಿಸುತ್ತಿದ್ದಾರೆ ಎಂದು ಕಿಡಿಕಾರಿದರು. ಗೊಬ್ಬರ ಎಲ್ಲಿಂದ ಬರುತ್ತದೆ ಎನ್ನುವ ಸಾಮಾನ್ಯ ಜ್ಞಾನ ಬಿಜೆಪಿ ಜಿಲ್ಲಾಧ್ಯಕ್ಷರಿಗೆ ಇಲ್ಲ. ಹೀಗಾಗಿ ನಾನು ಮತ್ತೊಮ್ಮೆ ಮೋದಿ ಮನೆ ಎದುರು ಕುಳಿತು ಪ್ರತಿಭಟಿಸಿ ರಾಜ್ಯದ ಪಾಲಿನ ಗೊಬ್ಬರ ಕೊಡುವಂತೆ ಒತ್ತಡ ಹಾಕಬೇಕೆಂದು ಹೇಳುತ್ತಿದ್ದೇನೆ ಎಂದರು.ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ಪ್ರದೇಶದಲ್ಲಿ (85.667) ಬಿತ್ತನೆ ಮಾಡಲಾಗಿದೆ. ಹೀಗಾಗಿ ರಸಗೊಬ್ಬರ ಬೇಡಿಕೆ ಸಹಜವಾಗಿ ಹೆಚ್ಚಳಕ್ಕೆ ಕಾರಣವಾಗಿದೆ. ೩೫ ಸಾವಿರ ಹೆಕ್ಟೇರ್‌ಗಿಂತ ಹೆಚ್ಚು ಮೆಕ್ಕಜೋಳ ಬಿತ್ತನೆಯಾಗಿದೆ ಎಂದ ಅವರು, ಪ್ರತಿಬಾರಿ ಜಿಲ್ಲೆಯಲ್ಲಿ ಆ. ೨ ಅಥವಾ ೩ ವಾರದಲ್ಲಿ ರಸಗೊಬ್ಬರದ ಬೇಡಿಕೆ ಇರುತ್ತದೆ. ಆದರೆ, ಮುಂಗಾರು ಬೇಗ ಆಗಿದ್ದರಿಂದ ಬೇಡಿಕೆ ಹೆಚ್ಚಳವಾಗಿದೆ ಎಂದರು.ರೈತರ ಬಗ್ಗೆ ಗೌರವ

ರೈತರೊಬ್ಬರು ಗೊಬ್ಬರ ಸಿಗದೆ ಮಣ್ಣು ತಿಂದಿರುವ ಘಟನೆಯಿಂದ ನೋವಾಗಿದೆ. ಸುದ್ದಿ ತಿಳಿದ ತಕ್ಷಣವೇ ಕೃಷಿ ಇಲಾಖೆ ಜಂಟಿ ನಿರ್ದೇಶಕರನ್ನು ಸಂಪರ್ಕಿಸಿ ರೈತನ ಮನೆಗೆ ಗೊಬ್ಬರ ಮುಟ್ಟಿಸಿ ಎಂದು ಘಟನೆ ನಡೆದ ದಿನವೇ ಸೂಚಿಸಿದ್ದೆ. ಆದರೆ, ಬಿಜೆಪಿ ಆ ಘಟನೆ ಇಟ್ಟುಕೊಂಡು ರಾಜಕೀಯ ಮಾಡುತ್ತಿದೆ. ರೈತರ ಹೆಸರಿನ ಮೇಲೆ ರಾಜಕೀಯ ಮಾಡಬೇಡಿ. ರಾಜಕಾರಣ ಮಾಡಲು ಸಾಕಷ್ಟು ವಿಷಯಗಳು ಇವೆ. ಬನ್ನಿ ಎಂದು ತಂಗಡಗಿ ಸವಾಲು ಹಾಕಿದರು.

ಭೇಟಿ:

ಕೊಪ್ಪಳದಲ್ಲಿ ತ್ರಿಕೋನ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಯಾದ ಯುವಕನ ಮನೆಗೆ ಬುಧವಾರ ಭೇಟಿ ನೀಡುವೆ. ಈ ಘಟನೆ ನಡೆಯಬಾರದಿತ್ತು. ಈ ಕುರಿತು ಪೊಲೀಸ್‌ ವರಿಷ್ಠಾಧಿಕಾರಿಯಿಂದ ಮಾಹಿತಿ ಪಡೆದಿದ್ದು ಆರೋಪಿಗಳ ವಿರುದ್ಧ ಪೊಲೀಸರು ಕಾನೂನು ಕ್ರಮಕೈಗೊಳ್ಳುತ್ತಾರೆ. ಇದರಲ್ಲಿ ಯಾವುದೇ ಮುಲಾಜಿಲ್ಲ ಎಂದರು.