ಮುಸ್ಲಿಂ ಯುವತಿ ಪ್ರೀತಿಸಿದ ಹಿಂದೂ ಯುವಕ ಗವಿಸಿದ್ದ ನಾಯಕ ಹತ್ಯೆ ಖಂಡಿಸಿ ಆ. 8ರಂದು ಕೊಪ್ಪಳದಲ್ಲಿ ಬೃಹತ್ ಪ್ರತಿಭಟನೆಯನ್ನು ಜಾತ್ಯತೀತ, ಪಕ್ಷಾತೀತವಾಗಿ ಮಾಡಲು ನಿರ್ಧರಿಸಲಾಗಿದೆ.

ಕೊಪ್ಪಳ:

ಮುಸ್ಲಿಂ ಯುವತಿ ಪ್ರೀತಿಸಿದ ಹಿಂದೂ ಯುವಕ ಗವಿಸಿದ್ದ ನಾಯಕ ಹತ್ಯೆ ಖಂಡಿಸಿ ಆ. 8ರಂದು ನಗರದಲ್ಲಿ ಬೃಹತ್ ಪ್ರತಿಭಟನೆಯನ್ನು ಜಾತ್ಯತೀತ, ಪಕ್ಷಾತೀತವಾಗಿ ಮಾಡಲು ನಿರ್ಧರಿಸಲಾಗಿದೆ. ನಗರದ ವಾಲ್ಮೀಕಿ ಭವನದಲ್ಲಿ ನಡೆದ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಜಿಲ್ಲಾ ಸಮಿತಿ ಮಂಗಳವಾರ ಪೂರ್ವಭಾವಿ ಸಭೆ ನಡೆಸಿ ಈ ತೀರ್ಮಾನ ಕೈಗೊಂಡಿದೆ. ಜಿಲ್ಲಾದ್ಯಂತ ಸಮುದಾಯದವರನ್ನು ಸೇರಿದಂತೆ ಜಾತ್ಯತೀತವಾಗಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಲು ತೀರ್ಮಾನಿಸಲಾಯಿತು.

ಮಾಜಿ ಸಚಿವ ಬಿ. ಶ್ರೀರಾಮುಲು ಅವರನ್ನು ಸಹ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಲಾಯಿತು. ಸಭೆಯಲ್ಲಿದ್ದ ಶ್ರೀರಾಮುಲು, ನಾನು ಸಹ ಭಾಗವಹಿಸುತ್ತೇನೆ ಮತ್ತು ನಮ್ಮೆಲ್ಲ ಬೆಂಬಲಿಗರನ್ನು ಸೇರಿದಂತೆ ಎಲ್ಲರೂ ಭಾಗವಹಿಸುವಂತೆ ಕೋರುತ್ತೇನೆ ಎಂದರು.

ಆಗಿರುವ ಅನ್ಯಾಯಕ್ಕೆ ನ್ಯಾಯ ಸಿಗುವುದು ಸೇರಿದಂತೆ ಇನ್ನೆಂದು ಇಂಥ ಘಟನೆಗಳು ಮರುಕಳಿಸದಂತಹ ಸಂದೇಶವನ್ನು ಪ್ರತಿಭಟನೆ ಮೂಲಕ ತೋರಿಸಬೇಕು ಎಂದರು.

ಸಭೆಯಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಜಿಲ್ಲಾಧ್ಯಕ್ಷ ಕೆ.ಎನ್. ಪಾಟೀಲ್. ಸುರೇಶ ಡೊಣ್ಣಿ, ಶರಣಪ್ಪ ನಾಯಕ, ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸೂಗೂರು, ಡಾ. ಬಸವರಾಜ ಕ್ಯಾವಟರ್‌, ಶರಣು ತಳ್ಳಿಕೇರಿ, ನವೀನ್ ಗುಳಗಣ್ಣವರ, ಗಣೇಶ ಹೊರತಟ್ನಾಳ, ನಾಗರಾಜ ಬಿಲ್ಗಾರ, ಯಮನೂರಪ್ಪ ನಾಯಕ, ಮಹಾಲಕ್ಷ್ಮಿ ಕಂದಾರಿ, ರಾಮಣ್ಣ ಕಲ್ಲಣ್ಣವರ, ರಾಮಣ್ಣ ಚೌಡ್ಕಿ, ಜೋಗದ ನಾರಾಯಣಪ್ಪ ಇದ್ದರು.ಗಲ್ಲಿಗೇರಿಸುವ ವರೆಗೂ ಹೋರಾಟ:

ಗವಿಸಿದ್ದನನ್ನು ಹತ್ಯೆಗೈದ ಮತ್ತು ಆತನನ್ನು ಬೆಂಬಲಿಸಿದವರನ್ನು ಗಲ್ಲಿಗೇರಿಸುವ ವರೆಗೂ ಹೋರಾಟ ಮಾಡಲಾಗುವುದು ಎಂದು ಬಿ. ಶ್ರೀರಾಮುಲು ಹೇಳಿದರು.

ಮುಸ್ಲಿಂ ಯುವತಿಯನ್ನು ಪ್ರೀತಿಸಬಾರದೇ. ಜಾತಿ ನೋಡಿ ಪ್ರೀತಿ ಮಾಡಬೇಕೇ ಎಂದು ಪ್ರಶ್ನಿಸಿದ ಅವರು, ಹಿಂದೂ ಯುವಕ ಮುಸ್ಲಿಂ ಯುವತಿಯನ್ನು ಪ್ರೀತಿಸಿದ್ದಾನೆಂಬ ಕಾರಣಕ್ಕೆ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ ಎಂದರೆ ಏನರ್ಥ. ಕಾನೂನು ಸುವವಸ್ಥೆ ಕಾಪಾಡಬೇಕಿದ್ದು ಸರ್ಕಾರ ಸತ್ತಿದಿಯಾ ಎಂದು ಪ್ರಶ್ನಿಸಿದರು.

ವಾಲ್ಮೀಕಿ ಸಮಾಜ ಸಣ್ಣದಿಲ್ಲ. ಸಿಡಿದು ನಿಂತರೆ ಏನಾಗುತ್ತದೆ ಎಂಬ ಅರಿವಿರಬೇಕು. ಈ ಯುವಕ ಕೊಲೆಯಾದ ಬಳಿಕ ರಾಜ್ಯದ ವಿವಿಧೆಡೆ ನನಗೆ ಕರೆ ಮಾಡಿ ನೀವು ಕೊಪ್ಪಳಕ್ಕೆ ಹೋಗಿ ಎಂದು ಹೇಳಿದ್ದರು. ಆದರೆ, ತಕ್ಷಣ ಬಂದರೆ ಆಕ್ರೋಶದಲ್ಲಿ ಏನಾದರೂ ಅನಾಹುತ ಆಗಬಹುದೆಂದು ಒಂದು ದಿನ ತಡವಾಗಿ ಬಂದಿದ್ದೇನೆ. ಈ ಘಟನೆಯ ಹಿಂದಿರುವ ಶಕ್ತಿಯನ್ನು ಬಯಲಿಗೆ ಎಳೆಯುವವರೆಗೂ ಬಿಡುವುದಿಲ್ಲ. ಸಾದಿಕ್‌ ಒಬ್ಬನೇ ಕೊಲೆ ಮಾಡಲು ಸಾಧ್ಯವಿಲ್ಲ. ಗವಿಸಿದ್ದನನ್ನು ಕರೆಸಿದ್ದು ಯಾರು, ಸಹಕಾರ ಯಾರು ಕೊಟ್ಟರು ಎನ್ನುವುದು ಪತ್ತೆಯಾಗಿ ಅವರಿಗೂ ಶಿಕ್ಷೆಯಾಗಬೇಕು ಎಂದರು.

ಪೊಲೀಸರು ಒಬ್ಬನೇ, ನಾಲ್ವರು ಕೊಲೆ ಮಾಡಿದ್ದಾರೆಂದು ಗಂಟೆಗೊಂದು ಹೇಳಿಕೆ ನೀಡುತ್ತಿದ್ದಾರೆ. ಕೊಲೆ ಮಾಡುವ ಮುನ್ನ ಆರೋಪಿ ಮಚ್ಚು ಹಿಡಿದು, ಗಾಂಜಾ ಸೇವಿಸುತ್ತಾ ರೀಲ್ಸ್‌ ಮಾಡಿದ್ದಾನೆ. ಕೇಸರಿ ಜಿಹಾದ್‌ ಮಾಡಿದರೆ ನಿಮಗೆಲ್ಲ ಇದೆ ಗತಿ ಎಂದು ಫೋಸ್ಟ್‌ ಹಾಕಿದ್ದಾನೆ. ಇಷ್ಟೆಲ್ಲಾ ಆದರೂ ಪೊಲೀಸರು ಆತನ ಮೇಲೆ ಏಕೆ ಕ್ರಮವಹಿಸಲಿಲ್ಲ. ಹೀಗಾಗಿ ಘಟನೆ ನಡೆದಿದೆ ಎಂದು ಆರೋಪಿಸಿದರು.

ಗೃಹಸಚಿವರಿಗೆ ಈ ವಿಷಯ ಗೊತ್ತಿಲ್ಲವೇ ಎಂದು ಪ್ರಶ್ನಿಸಿದ ರಾಮುಲು, ಸಾದಿಕ್ ಮತ್ತು ಆತನಿಗೆ ಸಹಕರಿಸಿದವರನ್ನು ಗಲ್ಲಿಗೇರಿಸುವವರೆಗೂ ಬಿಡುವುದಿಲ್ಲ, ಪಾತಳದಲ್ಲಿ ಅಡಗಿದ್ದರೂ ಹುಡುಕುತ್ತೇವೆ ಎಂದು ಅಬ್ಬರಿಸಿದರು.

ಸಭೆ ಬಳಿಕ ವಾಲ್ಮಿಕಿ ಸಮಾಜದವರು ಶೀರಾಮುಲು ನೇತೃತ್ವದಲ್ಲಿ ವಾಲ್ಮೀಕಿ ಸಭಾಭವನದಿಂದ ಕೊಲೆಯಾದ ಯುವಕನ ಮನೆಗೆ ಪಾದಯಾತ್ರೆ ನಡೆಸಿ ಬೆಂಬಲ ಸೂಚಿಸಿದರು.ಶ್ರೀರಾಮುಲು ಅಪ್ಪಿಕೊಂಡು ಕಣ್ಣೀರಿಟ್ಟ ತಾಯಿ

ಮನೆಗೆ ಭೇಟಿ ನೀಡಿದ ಶ್ರೀರಾಮುಲು ಎದುರು ಕಣ್ಣೀರಿಟ್ಟ ಮೃತ ಯುವಕನ ತಾಯಿ, ನಮಗೆ ನ್ಯಾಯ ಕೊಡಿಸಿ, ನಮ್ಮ ಮಗನ ಕೊಂದವರನ್ನು ಸುಮ್ಮನೇ ಬಿಡಬೇಡಿ ಎಂದು ಮನವಿ ಮಾಡಿದರು. ನಮ್ಮ ಮಗ ಏನು ತಪ್ಪು ಮಾಡಿದ್ದ. ಆ ಹುಡುಗಿಯನ್ನು ಪ್ರೀತಿಸಿದ್ದೇ ತಪ್ಪಾ. ನನ್ನ ಮಗನನ್ನು ಕೊಂದವರನ್ನು ಗಲ್ಲಿಗೇರಿಸಿ ಎಂದರು. ಆಗ ಶ್ರೀರಾಮುಲು, ನಿಮ್ಮ ಮಗನನ್ನು ತಂದುಕೊಡುವ ಶಕ್ತಿ ನಮಗೆ ಇಲ್ಲ. ಆದರೆ ಆ ಕೊಂದ ಪಾಪಿಗಳನ್ನು ಗಲ್ಲಿಗೇರಿಸುವವರೆಗೂ ನಾವು ಹೋರಾಟ ಮಾಡುತ್ತೇವೆ ಎಂದರು. ಸಾದಿಕ್ ಪಿಎಫ್‌ಐ ಸಂಘಟನೆಯ ಸಕ್ರಿಯ ಸದಸ್ಯನಾಗಿದ್ದಾನೆ. ಈ ಬಗ್ಗೆಯೂ ತನಿಖೆ ನಡೆಯಬೇಕು ಎಂದರು.ಕೋಮುವಾದದ ಬಣ್ಣ ಬೇಡ

ಈ ಕೊಲೆ ಪ್ರೀತಿ ವಿಚಾರಕ್ಕೆ ನಡೆದಿದ್ದು ಕೋಮವಾದದ ಬಣ್ಣ ಬಳಿದು ಸಮಾಜದ ಶಾಂತಿ ಕೆಡಿಸುವ ರಾಜಕಾರಣ ಮಾಡಬಾರದು ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರು ಮನವಿ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಲ್ಲಪ್ರಭು ಬೆಟ್ಟದೂರು, ಟಿ. ರತ್ನಾಕರ, ಬಸವರಾಜ ಸೂಳಿಬಾವಿ, ಚನ್ನಪ್ಪ ಹಂಚಿನಾಳ, ಕೊಲೆಯಾದ ಯುವಕನ ಕುಟುಂಬ ಭೂ ರಹಿತವಾಗಿದ್ದು ಅವರಿಗೆ ಭೂಮಿ ಮತ್ತ ಪರಿಹಾರ ನೀಡಬೇಕು. ಆದರೆ, ಇದಕ್ಕೆ ರಾಜಕೀಯ ಬೆರೆಸಿ, ಕೋಮುದ್ವೇಷ ಬಿತ್ತಬಾರದು ಎಂದರು. ಆರೋಪಿಗೆ ಶಿಕ್ಷೆಯಾಗಲಿ. ಈ ಘಟನೆಗೆ ಪರೋಕ್ಷವಾಗಿ ಮುಸ್ಲಿಂ ಯುವತಿ ಕಾರಣವಾಗಿದ್ದರೂ ವಿಚಾರಣೆಗೆ ಒಳಪಡಿಸಿಬೇಕು ಎಂದರು. ಕೊಲೆಯಾದ ಗವಿಸಿದ್ದ ತಂದೆ ನಿಂಗಜ್ಜ, ನನ್ನ ಮಗ ಮುಸ್ಲಿಂ ಯುವತಿ ಪ್ರೀತಿಸಿದ್ದು ನಿಜ. ಆಕೆಯೂ ಪ್ರೀತಿಸುತ್ತಿದ್ದಳು. ಇದು ಪ್ರೀತಿ, ಪ್ರೇಮಕ್ಕಾಗಿ ನಡೆದಿರುವ ಕೊಲೆಯಾಗಿದೆ ಎಂದು ಸ್ಪಷ್ಟಪಡಿಸಿದರು.ನಾಲ್ವರು ಆರೋಪಿಗಳ ಬಂಧನ: ಎಸ್ಪಿ

ಗವಿಸಿದ್ದ ನಾಯಕ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸಾದಿಕ್ ಸೇರಿದಂತೆ ನಾಲ್ವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಎಸ್ಪಿ ಡಾ. ರಾಮ ಎಲ್. ಅರಸಿದ್ದಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಗಂಭೀರವಾಗಿ ತನಿಖೆ ನಡೆಸುತ್ತಿದ್ದು ವದಂತಿಗೆ ಯಾರು ಕಿವಿಗೊಡಬಾರದು. ಸಾದಿಕ್ ಕೋಲ್ಕಾರ ಮೊದಲ ದಿನವೇ ಶರಣಾಗಿದ್ದು ಸುಧಾರಾಜ ಪಟೇಲ್, ನಿಜಾಮ, ಮಹೆಬೂಬ್‌ ಎನ್ನುವ ಆರೋಪಿಗಳನ್ನು ಬಂಧಿಸಿದ್ದು ಲಾಂಗು, ಮಚ್ಚು ವಶಪಡಿಸಿಕೊಳ್ಳಲಾಗಿದೆ. ಇದು ಪ್ರೇಮ ಪ್ರಕರಣಕ್ಕೆ ನಡೆದ ಕೊಲೆಯಾಗಿದೆ ಎನ್ನುವುದು ಮೇಲ್ನೋಟಕ್ಕೆ ತಿಳಿದುಬಂದಿದೆ. ಗವಿಸಿದ್ದ ಪ್ರೀತಿಸುತ್ತಿದ್ದ ಯುವತಿ ಅಪ್ರಾಪ್ತಯಾಗಿದ್ದರಿಂದ ಬುದ್ಧಿ ಹೇಳಿ ಕಳಿಸಲಾಗಿತ್ತು. ಬಳಿಕ ಸಾದಿಕ್‌ ಅದೇ ಹುಡುಗಿಯನ್ನು ಪ್ರೀತಿಸಿದ್ದಾನೆ. ಇದು ಪರಸ್ಪರ ದ್ವೇಷಕ್ಕೆ ಕಾರಣವಾಗಿದ್ದರಿಂದ ಕೊಲೆಯಾಗಿದೆ ಎನ್ನುವುದು ಸ್ಪಷ್ಟ ಎಂದರು. ಆದರೂ ಎಲ್ಲ ಆಯಾಮಗಳಿಂದ ತನಿಖೆ ನಡೆಸುತ್ತಿದ್ದೇವೆ ಎಂದರು.ಮಗನ ವಿರುದ್ಧವೇ ತಂದೆ ಆಕ್ರೋಶ

ಗವಿಸಿದ್ದನನ್ನು ನನ್ನ ಮಗ ಕೊಂದಿರುವುದು ಮಹಾತಪ್ಪು ಎಂದು ಆರೋಪಿ ಸಾದಿಕ್ ಕೋಲ್ಕಾರ ತಂದೆ ಮೌಲಾಹುಸೇನ್ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಮಾಧ್ಯಮದೊಂದಿಗ ಮಾತನಾಡಿದ ಅವರು, ಗವಿಸಿದ್ದ ಸಹ ನನ್ನ ಮಗ ಇದ್ದಂತೆ. ಆತನನ್ನು ಕೊಂದಿರುವುದನ್ನು ನಾನು ಸಹಿಸುವುದಿಲ್ಲ. ಸಾದಿಕ್ ಮನೆಗೆ ಬರುತ್ತಿದ್ದುದೇ ಅಪರೂಪ, ಕೊಲೆ ಮಾಡಿದ್ದರೇ ಆತನಿಕೆ ಶಿಕ್ಷೆಯಾಗಲಿ ಎಂದರು.