ನೀಟ್ ಮತ್ತು ಜೆಇಇ ತರಬೇತಿಗೆ ದೇಶದಲ್ಲಿಯೇ ಅತೀ ಹೆಚ್ಚು ಪ್ರವೇಶಗಳನ್ನು ವಿದ್ಯಾರ್ಥಿಗಳಿಗೆ ದೊರಕಿಸಿಕೊಡುವ ಮೋಷನ್ ಶಿಕ್ಷಣ ಸಂಸ್ಥೆ ನುರಿತ ಉಪನ್ಯಾಸಕರು ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿದ್ದಾರೆ ಎಂದು ಅನಾಲೀಸಾ ಬಾಸ್ಕೋ ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ವಿದ್ಯಾರ್ಥಿಗಳು ಉಪನ್ಯಾಸಕರ ಮಾರ್ಗದರ್ಶನದಲ್ಲಿ ನಿರ್ದಿಷ್ಟವಾದ ಗುರಿ ಇಟ್ಟುಕೊಂಡು ಸತತ ಓದು, ಅಧ್ಯಯನದ ಮೂಲಕ ಗುರಿಮುಟ್ಟಿದಾಗ ಬದುಕು ಸಾರ್ಥಕವಾಗುತ್ತದೆ ಎಂದು ನಿವೃತ್ತ ಕೃಷಿ ಸಂಶೋಧನಾ ಕೇಂದ್ರದ ಸಹಾಯಕ ನಿರ್ದೇಶಕ ಡಾ.ಅಶೋಕ ಗುಗ್ಗರಿ ಅಭಿಪ್ರಾಯಪಟ್ಟರು.ನಗರದ ನಗರದ ಕಿತ್ತೂರು ರಾಣಿ ಚನ್ನಮ್ಮ ಸಮುದಾಯ ಭವನದಲ್ಲಿ ನಡೆದ ಸೇಂಟ್ ಜೋಸೆಫ್ ಸಂಯುಕ್ತ ಪದವಿ ಪೂರ್ವ ಕಾಲೇಜಿನ 2025-26ನೇ ಸಾಲಿನ ಕಾಲೇಜು ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳನ್ನು ಸ್ವಾವಲಂಬಿಗಳನ್ನಾಗಿ ನಿರ್ಮಿಸುವುದು ಇಂದಿನ ಶಿಕ್ಷಣದ ಮುಖ್ಯ ಗುರಿಯಾಗಬೇಕು. ಭಾರತ ಮೂಲತಃ ಕೃಷಿ ಪ್ರಧಾನ ರಾಷ್ಟ್ರವಾಗಿದ್ದರಿಂದ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವವಿದ್ಯಾರ್ಥಿಗಳು ಕೃಷಿ ಕ್ಷೇತ್ರದಲ್ಲಿ ಹೊಸ ಹೊಸ ಸಂಶೋಧನೆ, ಆವಿಷ್ಕಾರಗಳ ಮೂಲಕ ನವೀನ ಮಾದರಿಯ ಬೆಳೆಯ ತಳಿಗಳನ್ನು ಅಭಿವೃದ್ಧಿ ಪಡಿಸಿ ದೇಶದ ಬೆನ್ನೆಲಬು ರೈತನ ಸ್ವಾವಲಂಬಿ ಬದುಕಿಗೆ ವಿದ್ಯಾರ್ಥಿಗಳ ಕೃಷಿ ಸಂಶೋಧನೆಗಳು ದಾರಿದೀಪವಾಗಬೇಕು ಎಂದು ತಿಳಿಸಿದರು.
ಸೇಂಟ್ ಜೋಸಫ್ ಸಮೂಹ ಶಿಕ್ಷಣ ಸಂಸ್ಥೆ ಮುಖ್ಯಸ್ಥೆ ಅನಾಲೀಸಾ ಬಾಸ್ಕೋ ಮಾತನಾಡಿ, ಸಂಸ್ಥಾಪಕ ದಿ.ಜಾನ್ ಬಾಸ್ಕೋ ಅವರು ಧ್ಯೇಯ ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎನ್ನುವ ಮಹದಾಸೆ ಹೊಂದಿದ್ದರು. ಇಂದು ನಮ್ಮ ಕಾಲೇಜಿನಲ್ಲಿ ಬಹುತೇಕ ಮಧ್ಯಮ ವರ್ಗದ ಪಾಲಕರ ಮಕ್ಕಳು ಕಾಲೇಜಿನಲ್ಲಿ ತರಬೇತಿ ಪಡೆದು ಇಂಜಿನಿಯರ್ ಹಾಗೂ ವ್ಯದ್ಯಕೀಯ ಪ್ರವೇಶಾತಿ ಪರೀಕ್ಷೆಯಲ್ಲಿ ಸೀಟುಗಳನ್ನು ಪಡೆಯುತ್ತಿದ್ದಾರೆ. ಕಾಲೇಜು 2026-27ನೇ ಶೈಕ್ಷಣಿಕ ಸಾಲಿನಿಂದ ರಾಜಸ್ಥಾನ ಕೋಟಾದ ಪ್ರತಿಷ್ಠಿತ ನೀಟ್, ಜೆಇಇ ತರಬೇತಿಗೆ ಹೆಸರುವಾಸಿಯಾಗಿರುವ ಮೋಷನ್ ಶಿಕ್ಷಣ ಸಂಸ್ಥೆ ಜೊತೆಗೆ ಸೇಂಟ್ ಜೋಸೆಫ್ ಪದವಿ ಪೂರ್ವ ಕಾಲೇಜು ಸಹಯೋಗ ಪಡೆದುಕೊಂಡಿದೆ. ಆದ್ದರಿಂದ ಇಲ್ಲಿನ ವಿದ್ಯಾರ್ಥಿಗಳು ದೂರದ ರಾಜಸ್ಥಾನಕ್ಕೆ ಹೋಗಿ ತರಬೇತಿ ಪಡೆಯುವುದು ಪಾಲಕರಿಗೆ ಆರ್ಥಿಕ ಹೊರೆಯಾಗುತ್ತದೆ. ರಾಜಸ್ಥಾನದಲ್ಲಿ ದೊರೆಯುವ ತರಬೇತಿಯನ್ನು ಮೋಷನ್ ಶಿಕ್ಷಣ ಸಂಸ್ಥೆಯು ಸೇಂಟ್ ಜೋಸಫ್ ಪದವಿ ಪೂರ್ವ ಕಾಲೇಜಿನಲ್ಲಿ ನೀಟ್, ಜೆಇಇ ಪರೀಕ್ಷೆ ತರಬೇತಿ ನೀಡುತ್ತದೆ. ಸ್ಥಳೀಯವಾಗಿ ಎಸ್ಎಸ್ಎಲ್‌ಸಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕು ಎಂದು ಹೇಳಿದರು.ಉಪ ಪ್ರಾಚಾರ್ಯ ಜಯತೀರ್ಥ ಪಂಢರಿ ಮಾತನಾಡಿ, ಕೇವಲ ಪರೀಕ್ಷೆಯಲ್ಲಿ ಉತ್ತಮ ಅಂಗಗಳನ್ನು ಪಡೆದು ವಿದ್ಯಾರ್ಥಿಗಳನ್ನು ರ‍್ಯಾಂಕ್ ತರುವುದು ನಮ್ಮ ಕಾಲೇಜಿನ ಉದ್ದೇಶವಲ್ಲ ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರ, ಮೌಲ್ಯಗಳನ್ನು ನಿರ್ಮಿಸಿ ಜವಾಬ್ದಾರಿಯುತ ಸತ್ಪ್ರಜೆಗಳನ್ನಾಗಿ ನಿರ್ಮಿಸುವುದಾಗಿದೆ ಎಂದರು. ಪ್ರಾಚಾರ್ಯ ಶಾಜು ಜೋಸೆಫ್ ಕಳೆದ ಶೈಕ್ಷಣಿಕ ಸಾಲಿನಲ್ಲಿ ಸ್ಪರ್ಧಾತ್ಮಕ ಹಾಗೂ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಮಾತನಾಡಿ, ಪದವಿ ಪೂರ್ವ ಶಿಕ್ಷಣವನ್ನು ವಿದ್ಯಾರ್ಥಿಗಳು ಲಘುವಾಗಿ ತೆಗೆದುಕೊಳ್ಳದೆ ಇದು ಒಂದು ತಪಸ್ಸು ಎಂದು ಶ್ರದ್ಧೆಯಿಂದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿದರೆ ನಿಮ್ಮ ಕನಸು ನನಸಾಗುತ್ತದೆ ಎಂದರು.
ಸಮಾರಂಭದಲ್ಲಿ ಗುತ್ತಿಗೆದಾರ ಎಸ್.ವಿ.ಪಾಟೀಲ, ಶಿಕ್ಷಣ ಸಂಯೋಜಕ ಜೆನಿಶಾ ನಾಯರ, ಶ್ರೀರಂಗ ಪರವತಿಕರ, ಶ್ರೀಧರ ನಾಯಕ, ಪಾರಸಾ ಇನಾಮದಾರ, ಆನಂದ ಬಿರಾದಾರ ಇದ್ದರು.