ಮೆದುಳಿನ ಎರಡೂ ಭಾಗ ಬಳಸಿ ಯಶಸ್ವಿ ವ್ಯಕ್ತಿಗಳಾಗಿ

| Published : Feb 03 2025, 12:30 AM IST

ಸಾರಾಂಶ

ಹಿರಿಯೂರು ತಾಲೂಕಿನ ಯರಬಳ್ಳಿಯ ಪಿಎಂಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಡಾ.ರವಿ ಪ್ರಸಾದ್ ಮಾತನಾಡಿದರು.

ಎಕ್ಸ್‌ಪರ್ಟ್ ಟಾಕ್ ವಿಚಾರ ಸಂಕಿರಣದಲ್ಲಿ ಡಾ.ಎಂ.ರವಿಪ್ರಸಾದ್ ಸಲಹೆ

ಕನ್ನಡಪ್ರಭ ವಾರ್ತೆ ಹಿರಿಯೂರು

ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಮೆದುಳಿನ ಎರಡೂ ಭಾಗಗಳನ್ನು ಉಪಯೋಗಿಸಿ ಅಧ್ಯಯನ ಮಾಡಬೇಕು ಎಂದು ಅಂತಾರಾಷ್ಟ್ರೀಯ ಸ್ಮರಣಶಕ್ತಿ ಮತ್ತು ವ್ಯಕ್ತಿತ್ವ ವಿಕಸನ ತರಬೇತುದಾರ ಡಾ.ಎಂ.ರವಿಪ್ರಸಾದ್ ಸಜ್ಜನ್ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.ತಾಲೂಕಿನ ಯರಬಳ್ಳಿಯ ಪಿಎಂಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಿಎಂಶ್ರೀ ಯೋಜನೆಯಡಿಯಲ್ಲಿ ಹಮ್ಮಿಕೊಂಡಿದ್ದ ಎಕ್ಸ್‌ಪರ್ಟ್ ಟಾಕ್ ವಿಚಾರ ಸಂಕಿರಣದಲ್ಲಿ ಸ್ಮರಣಶಕ್ತಿ ಮತ್ತು ವ್ಯಕ್ತಿತ್ವ ವಿಕಸನ ಕುರಿತು ಮಾತನಾಡಿದರು.

ನಮ್ಮ ಮೆದುಳಿನಲ್ಲಿ ಬಲ ಮೆದುಳು ಮತ್ತು ಎಡ ಮೆದುಳು ಎಂಬ ಎರಡು ಭಾಗಗಳಿದ್ದು ಅವುಗಳಲ್ಲಿ ಸಾಮಾನ್ಯ ಜನರು ಎಡಭಾಗದ ಮೆದುಳನ್ನು ಮಾತ್ರ ಉಪಯೋಗಿಸುತ್ತಾರೆ. ಆದರೆ ಅತ್ಯಂತ ಮೇಧಾವಿಗಳು ಮತ್ತು ಯಶಸ್ವಿ ವ್ಯಕ್ತಿಗಳು ತಮ್ಮ ಬಲ ಭಾಗದ ಮೆದುಳನ್ನು ಶೇ.2ರಷ್ಟು ಬಳಸುತ್ತಾರೆ. ಹಾಗಾಗಿಯೇ ಅವರು ಜೀವನದಲ್ಲಿ ಯಶಸ್ವಿ ವ್ಯಕ್ತಿಗಳಾಗಿದ್ದಾರೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಎಡ ಭಾಗದ ಮೆದುಳಿನ ಜೊತೆಗೆ ಬಲ ಭಾಗದ ಮೆದುಳನ್ನೂ ಸಹ ಬಳಸಿಕೊಳ್ಳುವುದರ ಮೂಲಕ ಯಶಸ್ವಿ ವ್ಯಕ್ತಿಗಳಾಗಬಹುದು ಎಂದರು.

ಜಗತ್ತು ಕಂಡ ಅತ್ಯದ್ಭುತ ಮೇಧಾವಿ ಆಲ್ಬರ್ಟ್ ಐನ್‍ಸ್ಟೀನ್ ಅವರು ಅವರ ಮೆದುಳಿನ ಒಟ್ಟು ಸಾಮರ್ಥ್ಯದ ಶೇ.7 ರಷ್ಟನ್ನು ಮಾತ್ರ ಬಳಸಿ ಮೇಧಾವಿಯಾಗಿದ್ದಾರೆ. ಆದರೆ ಜನಸಾಮಾನ್ಯರಾದ ನಾವು ನಮ್ಮ ಮೆದುಳಿನಲ್ಲಿ ಆಗಾಧ ಶಕ್ತಿ ಸಾಮರ್ಥ್ಯವಿದ್ದರೂ ಸಹ ನಾವು ಆ ಮೆದುಳಿನ ಸಂಪೂರ್ಣ ಉಪಯೋಗ ಪಡೆಯುತ್ತಿಲ್ಲ ಎಂದರು.

ಮನುಷ್ಯನ ಮೆದುಳಿನ ಶಕ್ತಿ ಸಾಮರ್ಥ್ಯ ಎಷ್ಟಿದೆ ಎಂದರೆ ಪ್ರತಿಯೊಂದು ವಿಶ್ವವಿದ್ಯಾನಿಲಯದಿಂದ 10 ಪದವಿಗಳಂತೆ 10 ವಿಶ್ವವಿದ್ಯಾನಿಲಯಗಳಿಂದ ಒಟ್ಟು 100 ಡಿಗ್ರಿಗಳನ್ನು ಪಡೆದುಕೊಂಡರೂ ಸಹ ನಮ್ಮ ಮೆದುಳಿನ ಶಕ್ತಿ ಸಾಮರ್ಥ್ಯದಲ್ಲಿ ಕೇವಲ ಶೇ.10ರಷ್ಟು ಮಾತ್ರ ಬಳಸಿರುತ್ತೇವೆ. ಮೆದುಳಿನ ಉಳಿದ ಶೇ.90ರಷ್ಟು ಶಕ್ತಿ ಸಾಮರ್ಥ್ಯ ಬಳಸದೇ ಹಾಗೆಯೇ ಉಳಿದಿರುತ್ತದೆ. ವಿದ್ಯಾರ್ಥಿಗಳು ಗುರಿ ಸಾಧಿಸುವಲ್ಲಿ ಏನೇ ಅಡೆತಡೆ, ತೊಡಕುಗಳು, ಕಷ್ಟಗಳು ಬಂದರೂ ಸಹ ಮುಂದಿಡುವ ಹೆಜ್ಜೆಯಿಂದ ಹಿಂದೆ ಸರಿಯಬಾರದು ಮತ್ತು ಎದೆ ಗುಂದಬಾರದು. ವಿದ್ಯಾರ್ಥಿ ಜೀವನದಲ್ಲಿ ಹಾಗೂ ಮುಂದಿನ ಜೀವನದಲ್ಲಿ ಧೈರ್ಯದಿಂದ ಮುನ್ನುಗ್ಗಬೇಕು. ವ್ಯಕ್ತಿಯು ಸಾಸಿವೆಯ ಕಾಳಿನಷ್ಟು ಆತ್ಮವಿಶ್ವಾಸ ಮತ್ತು ದೃಢ ಸಂಕಲ್ಪ ಹೊಂದಿದ್ದರೆ ಬೆಟ್ಟವನ್ನೂ ಸಹ ಅಲುಗಾಡಿಸಬಹುದು ಎಂದರು.

ಮುಖ್ಯಶಿಕ್ಷಕಿ ಎಂ.ವಿ.ಸವಿತಾ ಮಾತನಾಡಿದರು. ಇದೇ ವೇಳೆ ಡಾ.ಎಂ.ರವಿಪ್ರಸಾದ್ ಸಜ್ಜನ್‍ ಅವರು ತಾವು ನೆನಪಿನಲ್ಲಿಟ್ಟು ಕೊಂಡಿರುವ 800 ವರ್ಷಗಳ ಕ್ಯಾಲೆಂಡರ್‌ಗಳನ್ನು ಹಾಗೂ ಸಾವಿರ ಮೊಬೈಲ್ ನಂಬರ್‌ಗಳ ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು.

ಈ ವೇಳೆ ತೋಟಗಾರಿಕೆ ಕಾಲೇಜಿನ ನಿವೃತ್ತ ಡೀನ್, ಕೃಷಿ ವಿಜ್ಞಾನಿ ಡಾ. ಬಿ.ಮಹಂತೇಶ್, ಸಹ ಶಿಕ್ಷಕರಾದ ಅಂಬಿಕಾ, ವಿ.ವಿಜಯಮ್ಮ, ಎಲ್.ಶಾರದಮ್ಮ, ಸಿ.ಬಿ.ಮಂಜುನಾಥ, ಎನ್.ರಾಜಪ್ಪ ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಾಜರಿದ್ದರು.