ಕಬ್ಬಿಗೆ ಉತ್ತಮ ಬೆಲೆ ನಿಗದಿಗೆ ರೈತರ ಒತ್ತಾಯ

| Published : Nov 07 2025, 02:30 AM IST

ಸಾರಾಂಶ

ರೈತರು ಬೆಳೆದಿರುವ ಕಬ್ಬಿಗೆ ಕೇಂದ್ರ ಸರ್ಕಾರ ಶೇ. 9.50 ಸಕ್ಕರೆ ಇಳುವರಿ ಆಧಾರದಲ್ಲಿ ಪ್ರತಿ ಟನ್ ಕಬ್ಬಿಗೆ ₹5,500 ಬೆಂಬಲ ಬೆಲೆ ನಿಗದಿಪಡಿಸಿ ದೇಶದ ಐದು ಕೋಟಿ ಕಬ್ಬು ಬೆಳೆಗಾರರ ಹಿತರಕ್ಷಣೆ ಮಾಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ ಸಂಯೋಜಿತ ಕರ್ನಾಟಕ ಕಬ್ಬು ಬೆಳೆಗಾರರ ಸಂಘ ಆಗ್ರಹಿಸಿದೆ.

ಹೊಸಪೇಟೆ: ರೈತರು ಬೆಳೆದಿರುವ ಕಬ್ಬಿಗೆ ಕೇಂದ್ರ ಸರ್ಕಾರ ಶೇ. 9.50 ಸಕ್ಕರೆ ಇಳುವರಿ ಆಧಾರದಲ್ಲಿ ಪ್ರತಿ ಟನ್ ಕಬ್ಬಿಗೆ ₹5,500 ಬೆಂಬಲ ಬೆಲೆ ನಿಗದಿಪಡಿಸಿ ದೇಶದ ಐದು ಕೋಟಿ ಕಬ್ಬು ಬೆಳೆಗಾರರ ಹಿತರಕ್ಷಣೆ ಮಾಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ ಸಂಯೋಜಿತ ಕರ್ನಾಟಕ ಕಬ್ಬು ಬೆಳೆಗಾರರ ಸಂಘ ಆಗ್ರಹಿಸಿದೆ.ಸಂಘದ ವತಿಯಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಎಡಿಸಿ ಬಾಲಕೃಷ್ಣಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.ಬೆಳಗಾವಿ ರೈತರು ಕಬ್ಬು ಬೆಳೆಗೆ ಕನಿಷ್ಠ ₹3,550 ನಿಗದಿತ ಬೆಲೆಗೆ ಆಗ್ರಹಿಸಿ ನಡೆಸುತ್ತಿರುವ ಹೋರಾಟವನ್ನು ನಾವು ಸ್ವಾಗತಿಸುತ್ತೇವೆ. ನಮ್ಮ ಸಂಘಟನೆಯು ಶೇ. 9.50 ಸಕ್ಕರೆ ಇಳುವರಿ ಆಧಾರದಲ್ಲಿ ಪ್ರತಿ ಟನ್ ಕಬ್ಬಿಗೆ ₹5,500 ಬೆಂಬಲ ಬೆಲೆಗೆ ಒತ್ತಾಯ ಮಾಡುತ್ತಿದೆ. ರಾಜ್ಯ ಕಬ್ಬು ಬೆಳೆಯುವುದರಲ್ಲಿ ಮೂರನೇ ಸ್ಥಾನದಲ್ಲಿದೆ. ಸುಮಾರು ಆರು ಲಕ್ಷ ಹೆಕ್ಟೇರ್‌ ಭೂಮಿಯಲ್ಲಿ ಕಬ್ಬು ಬೆಳೆದು ರಾಜ್ಯದ 76 ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡುತ್ತಿದ್ದಾರೆ. ಈ ಸಕ್ಕರೆ ಕಾರ್ಖಾನೆ ಮಾಲೀಕರು ಕಬ್ಬಿನ ಜತೆ ರೈತರನ್ನು ಹಿಂಡಿ ಹಿಪ್ಪೆ ಮಾಡಿದ್ದಾರೆ. ಒಂದು ಟನ್ ಕಬ್ಬು ಬೆಳೆಯಲು ₹3,580 ಖರ್ಚು ಬರುತ್ತದೆ ಎಂದು ಕೃಷಿ ಬೆಲೆ ಆಯೋಗ ವರದಿ ನೀಡಿದೆ. ಇದಕ್ಕೆ ಕೃಷಿ ತಜ್ಞರಾದ ಡಾ. ಸ್ವಾಮಿನಾಥನ್ ಆಯೋಗದ ವರದಿ ಪ್ರಕಾರ ಉತ್ಪಾದನಾ ವೆಚ್ಚದ ಜತೆಗೆ ಶೇ. 50ರಷ್ಟು ಲಾಭಾಂಶ ಸೇರಿಸಿದರೆ ಒಂದು ಟನ್ ಕಬ್ಬಿಗೆ ₹5,370 ಗಳಾಗುತ್ತದೆ. ಹಾಗಾಗಿ ಟನ್ ಕಬ್ಬಿಗೆ ₹5,500 ಬೆಂಬಲ ಬೆಲೆ ನೀಡಬೇಕು ಎಂದು ಒತ್ತಾಯಿಸಿದರು.

2009ಕ್ಕಿಂತ ಮೊದಲು ಶೇ. 8.5 ಸಕ್ಕರೆ ಇಳುವರಿ ಆಧಾರದಲ್ಲಿ ಬೆಂಬಲ ಬೆಲೆ ನಿಗದಿ ಮಾಡುತ್ತಿದ್ದರು. 2010 ರಿಂದ 2018ರ ವರೆಗೆ ಶೇ. 9.5ಕ್ಕೆ, 2018ರಿಂದ 2022ರ ವರೆಗೆ ಶೇ. 10ಕ್ಕೆ, 2023ರಿಂದ ಶೇ. 10.25 ಸಕ್ಕರೆ ಇಳುವರಿ ಆಧಾರದಲ್ಲಿ ಎಫ್‌ಆರ್‌ಪಿ ನಿಗದಿ ಮಾಡುತ್ತಾರೆ. ಈ ನಿಗದಿಯೂ ಸರಿಯಾಗಿಲ್ಲ ಎಂದು ದೂರಿದರು.

ಒಂದು ಟನ್ ಕಬ್ಬಿಗೆ ಉಪ ಉತ್ಪನ್ನಗಳು ಸೇರಿದಂತೆ ₹12ರಿಂದ 13 ಸಾವಿರ ಆದಾಯ ಬರುತ್ತದೆ ಎಂದು ಕೊಯಂಬತ್ತೂರಿನ ಕಬ್ಬು ಪ್ರಜಾನನ ಸಂಸ್ಥೆಯ ವಿಜ್ಞಾನಿಗಳು ಹೇಳಿದ್ದಾರೆ. ಉಪ ಉತ್ಪನ್ನಗಳ ಲಾಭಾಂಶದಲ್ಲಿ ಶೇ. 50ರಷ್ಟು ಪಾಲನ್ನು ರೈತರಿಗೆ ನೀಡಬೇಕು ಎಂದು ಒತ್ತಾಯಿಸಿದರು.

ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ಹಗ್ಗದ ಬೆಲೆಗೆ ಮಾರಾಟ ಮಾಡುವುದು, ಮೂವತ್ತು-ನಲವತ್ತು ವರ್ಷಗಳಿಗೆ ಗುತ್ತಿಗೆ ನೀಡುವುದನ್ನು ನಿಲ್ಲಿಸಬೇಕು. ಕಬ್ಬು ಬೆಳೆಗಾರರ ಸಾಗಣೆ ವೆಚ್ಚ ಕಡಿಮೆಗೊಳಿಸಲು ಹೊಸಪೇಟೆಯಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡಬೇಕು. ರಾಜ್ಯ ಸರ್ಕಾರ 2022-23ನೇ ಸಾಲಿಗೆ ಪ್ರತಿ ಟನ್‌ಗೆ ₹150 ಎಸ್‌ಎಪಿ ನೀಡಲು ಆದೇಶಿಸಿದ್ದು, ಅದರ ಬಾಕಿ ಹಣವನ್ನು ರೈತರಿಗೆ ಶೀಘ್ರವಾಗಿ ನೀಡಬೇಕು. ಹರಿಯಾಣ, ಪಂಜಾಬ್ ಮಾದರಿಯಲ್ಲಿ ಎಫ್‌ಆರ್‌ಪಿ ಜತೆಗೆ ಅಲ್ಲಿನ ರಾಜ್ಯ ಸರ್ಕಾರ ಪ್ರತಿ ಟನ್‌ಗೆ ₹900 ಎಸ್‌ಎಪಿ ನಿಗದಿಪಡಿಸಿದೆ. ಅದೇ ರೀತಿ ನಮ್ಮ ಸರ್ಕಾರ ಕನಿಷ್ಠ ₹500 ಎಸ್‌ಎಪಿ ನಿಗದಿಪಡಿಸಬೇಕು. ಸಕ್ಕರೆ ಇಳುವರಿ ಪ್ರಕಟಣೆಯಲ್ಲಿ ಮತ್ತು ತೂಕದಲ್ಲಿ ಮೋಸ ನಡೆಯುತ್ತಿದ್ದು, ಅವು ಪಾರದರ್ಶಕವಾಗಿ ಪರೀಕ್ಷಿಸಲು ಪ್ರತಿ ಕಾರ್ಖಾನೆ ವ್ಯಾಪ್ತಿಗೆ ಸಮಿತಿ ರಚಿಸಬೇಕು. ಆ ಸಮಿತಿಗೆ ಐದು ಮಂದಿ ಕಬ್ಬು ಬೆಳೆಗಾರರ ನೇಮಿಸಬೇಕು ಎಂಬ ಬೇಡಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.

ರೈತ ಮುಖಂಡರಾದ ಎನ್‌. ಯಲ್ಲಾಲಿಂಗ, ಜಿ. ಕರಿಹನುಮಂತಪ್ಪ, ವೆಂಕೋಬ ಪೂಜಾರ ನಾಯಕ, ಬೆಳಗೋಡು ತಾಯಪ್ಪ, ಬಾಣದ ರಾಮಣ್ಣ, ಕಣಿಮೆಪ್ಪ, ಹುಲುಗಪ್ಪ, ಮರಡಿ ರಾಘವೇಂದ್ರ ಮತ್ತಿತರರಿದ್ದರು.