ಅಂಚೇ ಕಚೇರಿಯಲ್ಲಿ ಕಾಲಿಡಲು ಜಾಗ ಇಲ್ಲ

| Published : Nov 07 2025, 02:30 AM IST

ಸಾರಾಂಶ

ಕೊಪ್ಪಳಕ್ಕೆ ಹತ್ತು ಸಾವಿರ ಕಿಟ್‌ ಆಗಮನ, ಟ್ ಸಂಗ್ರಹಿಸಲು ಗೋದಾಮು ಅಗತ್ಯ

ಸೋಮರಡ್ಡಿ ಅಳವಂಡಿ ಕೊಪ್ಪಳ

ಕೇಂದ್ರ ಸರ್ಕಾರ ಜಾರಿ ಮಾಡಿರುವ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯಡಿ ದೇಶದಲ್ಲಿನ ಕರಕುಶಲ ಫಲಾನುಭವಿಗಳಿಗೆ ಕಿಟ್ ಗಳನ್ನು ಅಂಚೆ ಕಚೇರಿ ಮೂಲಕ ವಿತರಣೆ ಮಾಡಲಾಗುತ್ತಿದ್ದು, ಅಂಚೆಯಲ್ಲಿ ಈಗ ಕಾಲಿಡಲು ಜಾಗ ಇಲ್ಲದಷ್ಟು ಕಿಟ್‌ಗಳು ಬಂದಿವೆ.

ಜಿಲ್ಲಾ ಕೇಂದ್ರ ಕೊಪ್ಪಳ ನಗರದಲ್ಲಿರುವ ಅಂಚೆ ಕಚೇರಿಯಲ್ಲಿ ಕಾಲಿಡಲು ಜಾಗ ಇಲ್ಲದಂತೆ ವಿಶ್ವಕರ್ಮ ಯೋಜನೆಯ ಕಿಟ್ ರಾಶಿ ರಾಶಿ ಹಾಕಲಾಗಿದೆ. ಆವರಣವೆಲ್ಲವೂ ಕಿಟ್ ಗಳಿಂದಲೇ ಭರ್ತಿಯಾಗಿ ಹೋಗಿದ್ದು, ಅಂಚೆ ಇಲಾಖೆಯ ಸಿಬ್ಬಂದಿಯ ಪಾಡು ದೇವರಿಗೆ ಪ್ರೀತಿ ಎನ್ನುವಂತಾಗಿದೆ.

ಕೊಪ್ಪಳ ಜಿಲ್ಲೆಯೊಂದಕ್ಕೆ ಇದುವರೆಗೂ ಬರೋಬ್ಬರಿ 10 ಸಾವಿರ ಕಿಟ್ ವಿತರಣೆ ಮಾಡಲಾಗಿದ್ದು, ಪ್ರತಿ ತಿಂಗಳು ಸಾವಿರಕ್ಕೂ ಅಧಿಕ ಕಿಟ್ ಬರುತ್ತಲೇ ಇದೆ.

ಇದರಲ್ಲಿ ಹೋಲಿಗೆ ಯಂತ್ರ, ಗೌಂಡಿ ಕೆಲಸ ಮಾಡುವವರ ಕಿಟ್, ಗಾರೆ ಕೆಲಸದ ಕಿಟ್, ಬಡಿಗತನದ ಕಿಟ್ ಸೇರಿದಂತೆ ವೈವಿದ್ಯಮಯ ಕರಕುಶಲ ಉದ್ಯೋಗ ಮಾಡುವವರಿಗೆ ನೀಡಲಾಗುತ್ತದೆ.

ಇದು, ಜಿಲ್ಲಾ ಕೇಂದ್ರದಲ್ಲಿರುವ ಅಂಚೆ ಕಚೇರಿಯ ಸ್ಥಿತಿಯಾದರೆ ಹಳ್ಳಿಗಳಲ್ಲಿ ಇರುವ ಪುಟ್ಟ ಪುಟ್ಟ ಅಂಚೆ ಕಚೇರಿಗಳಲ್ಲಿಯೂ ತೀವ್ರ ಸಮಸ್ಯೆಯಾಗಿದೆ. ಅಕ್ಕಪಕ್ಕದವರ ಮನೆಯಲ್ಲಿ ಸೇರಿದಂತೆ ವಿವಿಧೆಡೆ ಸಂಗ್ರಹಿಸಲಾಗುತ್ತಿದೆ.

ಕೇವಲ ಕೊಪ್ಪಳ ಜಿಲ್ಲೆಯಲ್ಲಿ ಮಾತ್ರ ಸಮಸ್ಯೆ ಇಲ್ಲ. ರಾಜ್ಯಾದ್ಯಂತ ಇದು ಬಹುದೊಡ್ಡ ಸಮಸ್ಯೆಯಾಗಿದೆ. ಕೇಂದ್ರ ಸರ್ಕಾರ ಯೋಜನೆ ಜಾರಿ ಮಾಡುವ ಮುನ್ನ ಅಥವಾ ಕಿಟ್ ಕಳುಹಿಸುವ ಮುನ್ನ ಅಂಚೆ ಇಲಾಖೆಯ ಕಚೇರಿಯ ಸಾಮರ್ಥ್ಯವನ್ನಾದರೂ ಪರಿಗಣಿಸಬೇಕಾಗಿತ್ತು. ಇಲ್ಲವೇ ಗೋದಾಮಿನ ವ್ಯವಸ್ಥೆಯನ್ನಾದರೂ ಮಾಡಬೇಕಾಗಿತ್ತು. ಆದರೆ, ಅದ್ಯಾವುದನ್ನು ಮಾಡದೆ ದಿಢೀರ್ ಮಾಡಿದ್ದರಿಂದ ಸಮಸ್ಯೆಯಾಗಿದೆ.

ಅಂಚೆ ಇಲಾಖೆಯ ಸಿಬ್ಬಂದಿ ಮಾತ್ರ ಇದಕ್ಕಾಗಿ ಹರಸಾಹಸ ಪಡುತ್ತಿದ್ದಾರೆ. ಬಂದಿರುವ ಕಿಟ್ ಗಳನ್ನು ಗ್ರಾಮೀಣ ಅಂಚೆ ಕಚೇರಿಗೆ ಕಳುಹಿಸುವುದು ಮತ್ತು ಅಲ್ಲಿಂದ ವಿತರಣೆ ಮಾಡುವುದು ಸೇರಿದಂತೆ ಅಂಚೆ ಇಲಾಖೆಯ ಸಿಬ್ಬಂದಿಗೆ ಇದೇ ಕೆಲಸ ಆಗಿದೆ ಎನ್ನುವಂತಾಗಿದೆ.

ಏನಿದು ಯೋಜನೆ:

ಪಿಎಂ ವಿಶ್ವಕರ್ಮ ಯೋಜನೆಯನ್ನು ಸಂಪ್ರದಾಯಿಕ ಕರಕುಶಲಕರ್ಮಿಗಳಿಗೆ ಬೆಂಬಲ ನೀಡಲು ಕೇಂದ್ರ ಸರ್ಕಾರ ಜಾರಿ ಮಾಡಿದೆ.

ಕರಕುಶಲ ಕೆಲಸ ಮಾಡುತ್ತಿರುವವರು ಅರ್ಜಿ ಸಲ್ಲಿಸಿದರೆ ಅವರಿಗೆಲ್ಲ ತರಬೇತಿ ನೀಡಿ ಸುಮಾರು ₹ 50 ಸಾವಿರ ಮೌಲ್ಯದ ಅತ್ಯಾಧುನಿಕ ಕಿಟ್ ನೀಡಲಾಗುತ್ತದೆ. 18 ಬಗೆಯ ಕರಕುಶಲ ಗುರುತಿಸಿ ಅರ್ಜಿ ಸಲ್ಲಿಸಿದವರೆಲ್ಲರಿಗೂ ವಿತರಣೆ ಮಾಡುವ ಕಾರ್ಯ ನಡೆದಿದೆ. ಜತೆಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಸಹ ದೊರೆಯಲಿದೆ.

ವಿಶ್ವಕರ್ಮ ಯೋಜನೆಯ ಕಿಟ್ ದೊಡ್ಡ ಸಂಖ್ಯೆಯಲ್ಲಿ ಬಂದಿದ್ದರಿಂದ ಎಲ್ಲೆಂದರಲ್ಲಿ ಇಳಿಸಲಾಗಿದೆ. ಅವುಗಳ ವಿತರಣೆಗೆ ಸಮಸ್ಯೆಯಾಗುವುದಿಲ್ಲ, ಆದರೆ, ಅವುಗಳನ್ನು ಸಂರಕ್ಷಣೆ ಮಾಡಿಕೊಳ್ಳುವುದು ಕಷ್ಟವಾಗುತ್ತದೆ ಎಂದು ಕೊಪ್ಪಳ ಪ್ರಧಾನ ಅಂಚೆ ಕಚೇರಿ ಅಂಚೆಪಾಲಕ ಜಿ. ನಾಗರಾಜ ತಿಳಿಸಿದ್ದಾರೆ.

ವಿಶ್ವಕರ್ಮ ಯೋಜನೆಯಡಿ ಬಂದಿರುವ ಕಿಟ್ ಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿಕೊಳ್ಳಲು ಗೋದಾಮಿನ ವ್ಯವಸ್ಥೆಯಾದರೂ ಆಗಬೇಕು. ಇಲ್ಲದಿದ್ದರೆ ತೀವ್ರ ಸಮಸ್ಯೆಯಾಗುತ್ತದೆ ಎಂದು ಉಪಪಾಲಕರು ಪ್ರಧಾನ ಅಂಚೆ ಕಚೇರಿ ಜಿ.ಎನ್. ಹಳ್ಳಿ ತಿಳಿಸಿದ್ದಾರೆ.