ಅಜೀಜ ಅಹ್ಮದ ಬಳಗಾನೂರ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಕಳೆದ ಒಂದೂವರೆ ತಿಂಗಳಿನಿಂದ ಬಿಸಿಲ ಬೇಗೆಯಿಂದ ಜನತೆ ತತ್ತರಿಸಿದ್ದು, ಜನಜೀವನವೇ ಅಸ್ತವ್ಯಸ್ತಗೊಂಡಿದೆ. ಈಗ ಬ್ಲಡ್‌ ಬ್ಯಾಂಕ್‌ಗಳಿಗೂ ಈ ಬಿಸಿಲು ಆಘಾತವನ್ನುಂಟು ಮಾಡಿದ್ದು ಜನರು ರಕ್ತದಾನ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಹುಬ್ಬಳ್ಳಿಯ ಕೆಎಂಸಿಆರ್‌ಐ ಸೇರಿದಂತೆ ಹಲವೆಡೆ ಬ್ಲಡ್‌ ಬ್ಯಾಂಕ್‌ಗಳಲ್ಲಿ ರಕ್ತದ ಕೊರತೆ ಕಂಡುಬರುತ್ತಿದೆ.

ಕೆಎಂಸಿಆರ್‌ಐಗೂ ಕಳೆದೊಂದು ತಿಂಗಳಿನಿಂದ ರಕ್ತದ ಕೊರತೆ ಕಂಡು ಬಂದಿದೆ. ಹೆರಿಗೆ, ತುರ್ತು ಚಿಕಿತ್ಸೆ, ಅಪಘಾತ ವಿಭಾಗಗಳಿಗೆ ನಿತ್ಯವೂ ಹೆಚ್ಚಿನ‌ ರಕ್ತದ ಬೇಡಿಕೆ ಇದ್ದೇ ಇರುತ್ತದೆ. ನಿತ್ಯ 40-50 ಯೂನಿಟ್ ರಕ್ತದ ಪ್ಯಾಕೆಟ್‌ಗಳನ್ನು ರೋಗಿಗಳಿಗೆ ನೀಡಲಾಗುತ್ತಿದೆ. ಆದರೆ, ಇತ್ತೀಚಿಗೆ ರಕ್ತದಾನಿಗಳ ಸಂಖ್ಯೆ ‌ಕಡಿಮೆಯಾಗಿದ್ದು, ತೀವ್ರ ಸಮಸ್ಯೆಯಾಗುತ್ತಿದೆ.

250 ಯೂನಿಟ್‌ ಮಾತ್ರ ಸಂಗ್ರಹ:


ಕೆಎಂಸಿಆರ್‌ಐ ಬ್ಲಡ್ ಬ್ಯಾಂಕ್‌ನಲ್ಲಿ ಜನವರಿಯಲ್ಲಿ 369, ಫೆಬ್ರವರಿ 300 ಯೂನಿಟ್‌ ರಕ್ತ ಸಂಗ್ರಹವಿದ್ದರೆ ಮಾರ್ಚ್‌ ಹಾಗೂ ಏಪ್ರಿಲ್‌ ತಿಂಗಳಲ್ಲಿ 250 ಯೂನಿಟ್‌ ಸಂಗ್ರಹವಿದೆ. ಜನರು ರಕ್ತದಾನಕ್ಕೆ ಮುಂದಾಗದಿದ್ದರೆ ಮುಂದೆ ಇನ್ನೂ ಹೆಚ್ಚಿನ ಪರಿಣಾಮ ಬೀರಲಿದೆ ಎಂದು ವೈದ್ಯರು ಹೇಳಿದ್ದಾರೆ.

ನಗರದ ರಾಷ್ಟ್ರೋತ್ಥಾನ ಬ್ಲಡ್ ಬ್ಯಾಂಕ್‌ನಲ್ಲಿ ನಿತ್ಯ 90ರಿಂದ 100 ಯೂನಿಟ್ ರಕ್ತ ಸಂಗ್ರಹವಾದರೆ ಅಷ್ಟೇ ಪ್ರಮಾಣದಲ್ಲಿ ವಿತರಿಸಲಾಗುತ್ತಿತ್ತು. ಆದರೆ, ಪ್ರಸ್ತುತ 10ರಿಂದ 15 ಯೂನಿಟ್‌ಗಳಿಗೆ ಕುಸಿದಿದೆ. ಈಗ ರಕ್ತದ ಅಭಾವದ ನಡುವೆಯೂ ಮೊಬೈಲ್ ‌ಕ್ಲಿನಿಕ್, ದಾನಿಗಳಿಗೆ ಫೋನ್ ಮಾಡಿ ರಕ್ತ ಪಡೆಯುವ ಕೆಲಸ ಮಾಡಲಾಗುತ್ತಿದೆ‌. 4-5 ದಾನಿಗಳು ಏಕಕಾಲಕ್ಕೆ ರಕ್ತದಾನ ಮಾಡಲು ಮುಂದೆ ಬಂದಲ್ಲಿ ಮೊಬೈಲ್‌‌ ಕ್ಲಿನಿಕ್‌ ಅನ್ನು ಅವರಿರುವ ಸ್ಥಳಕ್ಕೆ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಬೇಸಿಗೆಯಲ್ಲಿ ಏಕೆ ರಕ್ತದ ಕೊರತೆ?

ಬೇಸಿಗೆಯಾದರಿಂದ ರಕ್ತದಾನಿಗಳಿಗೆ ವಿಶ್ರಾಂತಿ ಅವಶ್ಯಕತೆ ಇದೆ. ಚಳಿಗಾಲ, ಮಳೆಗಾಲದಲ್ಲಿ 10-15 ನಿಮಿಷ ವಿಶ್ರಾಂತಿ ನಡೆಯುತ್ತದೆ. ಆದರೆ, ಬೇಸಿಗೆಯಲ್ಲಿ ಕನಿಷ್ಠ 30ರಿಂದ 45 ನಿಮಿಷ ಕಡ್ಡಾಯ ವಿಶ್ರಾಂತಿ ಮಾಡಬೇಕು. ಹೊರಗಡೆ ಹೆಚ್ಚಿನ ಬಿಸಿಲು ಇರುವುದರಿಂದ ತಲೆಸುತ್ತು, ಸುಸ್ತಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಕೋಟ್‌...

ಕಳೆದ ತಿಂಗಳಿನಿಂದ ಕೆಎಂಸಿಆರ್‌ಐನಲ್ಲಿ ರಕ್ತದ ಕೊರತೆಯಾಗುತ್ತಿರುವುದು ನಿಜ. ಬೇಸಿಗೆಯಲ್ಲೂ ರಕ್ತದಾನ ಮಾಡಿದರೆ ಯಾವುದೇ ಸಮಸ್ಯೆಯಾಗುವುದಿಲ್ಲ. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುವುದು.

ಡಾ.ಈಶ್ವರ ಹಸಬಿ, ಕೆಎಂಸಿಆರ್‌ಐನ ವೈದ್ಯಕೀಯ ಅಧೀಕ್ಷಕ