ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಚಿಕ್ಕಮಗಳೂರಿನಲ್ಲಿ ತಾಯಿ ಮಗು ಆಸ್ಪತ್ರೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಒಂದು ವರ್ಷದೊಳಗೆ ಪ್ರಾರಂಭ ಮಾಡುತ್ತೇವೆ ಎಂದು ಶಾಸಕ ಎಚ್‌.ಡಿ.ತಮ್ಮಯ್ಯ ಭರವಸೆ ನೀಡಿದರು.

ಪಿಳ್ಳೇನಹಳ್ಳಿಯಲ್ಲಿ ಸುಮಾರು ₹65 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಆಯುಷ್ಮಾನ್ ಆರೋಗ್ಯ ಕೇಂದ್ರದ ಕಾಮಗಾರಿಗೆ ಸೋಮವಾರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿರು. ಆರೋಗ್ಯ, ಶಿಕ್ಷಣ ಜನರ ಬದುಕಿನ ಆದ್ಯತೆಯಾಗಿದೆ. ಅದನ್ನು ಒದಗಿಸುವುದು ಚುನಾಯಿತ ಪ್ರತಿನಿಧಿಗಳ ಕರ್ತವ್ಯ. ಶಿಕ್ಷಣಕ್ಕೆ ಆದ್ಯತೆ ನೀಡಿ ಹೋಬಳಿ ಮಟ್ಟದಲ್ಲಿ ಕೆಪಿಎಸ್ ಶಾಲೆಗಳ ತೆರೆಯಬೇಕೆಂದು ಈಗಾಗಲೇ ಸಖರಾಯಪಟ್ಟಣದಲ್ಲಿ ಸುಮಾರು ₹4 ಕೋಟಿ ವೆಚ್ಚದಲ್ಲಿ ಕೆಪಿಎಸ್ ಶಾಲೆ ಮಂಜೂರಾಗಿದೆ. ಸದ್ಯದಲ್ಲೇ ಕೆಲಸ ಆರಂಭವಾಗಲಿದೆ. ದೇವನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದು ಕೋಟಿ ವೆಚ್ಚದಲ್ಲಿ ಇಡೀ ಸರ್ಕಾರಿ ಶಾಲೆಯನ್ನು ಅಭಿವೃದ್ಧಿ ಪಡಿಸಲಾಗಿದೆ. ಮುಂದಿನ ಬಾರಿ ಲಕ್ಯಾ ಹೋಬಳಿ ಕೆ.ಬಿ. ಹಾಳ್ ಶಾಲೆಯನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.

ಯುದ್ಧದಿಂದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿದೆ. ಆದರೆ, ಇಲ್ಲಿನ ಕೇಂದ್ರ ಸರ್ಕಾರ ಸರಿಯಾದ ರೀತಿಯಲ್ಲಿ ನಿಭಾಯಿ ಸುತ್ತಿಲ್ಲ. ಅಡುಗೆ ಅನಿಲದ ಬೆಲೆ ಏರಿಕೆಯಾಗಿದೆ. ಇಂತಹ ಬೆಲೆ ಏರಿಕೆಗಳ ನಡುವೆ ಸಾಮಾನ್ಯ ಜನರ ಬದುಕು ಕಟ್ಟಿಕೊಡಲು ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೊಟ್ಟಿರುವ ಪಂಚ ಗ್ಯಾರಂಟಿ ಯೋಜನೆಗಳಿಂದ ಸಾಧ್ಯವಾಗಿದೆ ಎಂದರು.

ಜಿಲ್ಲೆಗೆ 38 ಆಯುಷ್ಮಾನ್ ಆರೋಗ್ಯ ಕೇಂದ್ರ ಮಂಜೂರಾಗಿದ್ದು, ಈ ಪೈಕಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರಕ್ಕೆ 11 ಕೇಂದ್ರ ಗಳು ಮಂಜೂರಾಗಿವೆ ಎಂದು ತಿಳಿಸಿದರು.


ಎಪಿಎಂಸಿ ಮಾಜಿ ಸದಸ್ಯ ಲೋಕೇಶ್, ಶ್ರೀರಂಗನಾಥ ಸ್ವಾಮಿ ದೇವಾಲಯದ ಸಮಿತಿ ಅಧ್ಯಕ್ಷರಾದ ಬಸವರಾಜ್, ಕೃಷ್ಣಮೂರ್ತಿ ಸಂತೋಷ್, ಲಕ್ಷ್ಮಣ್, ಗ್ರಾಮ ಪಂಚಾಯಿತಿ ಸದಸ್ಯ ವಿನೋದ್ ಉಪಸ್ಥಿತರಿದ್ದರು.--- ಬಾಕ್ಸ್‌----

₹ 2.20 ಕೋಟಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ

ಪಿಳ್ಳೇನಹಳ್ಳಿ ಹಾಗೂ ಕುನ್ನಾಳಿನಲ್ಲಿ ತಲಾ ₹65 ಲಕ್ಷ ವೆಚ್ಚದಲ್ಲಿ ಆಯುಷ್ಮಾನ್ ಆರೋಗ್ಯ ಕೇಂದ್ರಗಳ ನಿರ್ಮಾಣಕ್ಕೆ ಸೋಮವಾರ ಗುದ್ದಲಿ ಪೂಜೆ ನೆರವೇರಿಸಲಾಗಿದೆ. ಜೋಡಿ ಲಿಂಗದಹಳ್ಳಿಯಲ್ಲಿ ₹40 ಲಕ್ಷ ವೆಚ್ಚದಲ್ಲಿ ರಸ್ತೆ ನಿರ್ಮಾಣ, ಜೋಡಿ ಲಿಂಗದಹಳ್ಳಿ ತಾಂಡ್ಯದಿಂದ ಸಿದ್ದಾಪುರದವರೆಗೆ ರಸ್ತೆ ನಿರ್ಮಾಣಕ್ಕೆ ₹30 ಲಕ್ಷ ಎಸ್.ಬಿದರೆ ಕಾಲೋನಿಯಲ್ಲಿ ₹20 ಲಕ್ಷ ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣ ಸೇರಿದಂತೆ ಒಟ್ಟು ₹2.20 ಕೋಟಿ ವೆಚ್ಚದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ ಎಂದು ಶಾಸಕ ಎಚ್‌.ಡಿ.ತಮ್ಮಯ್ಯ ತಿಳಿಸಿದರು.