ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ಜಿಲ್ಲೆಯಲ್ಲೇ ಮೊಟ್ಟ ಮೊದಲ ಬಾರಿಗೆ ಸುಪ್ರೀಂ ಕೋರ್ಟ್‌ ಪ್ರಕರಣವನ್ನು ರಾಜಿ ಸಂಧಾನದ ಮೂಲಕ 6 ಲಕ್ಷ ರು. ಹೆಚ್ಚುವರಿ ಪರಿಹಾರದೊಂದಿಗೆ ಅಪರಾಧ ಪ್ರಕರಣವನ್ನು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಇತ್ಯರ್ಥಪಡಿಸಿ ಸಾಧನೆ ಮಾಡಿದೆ.

ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ, ರಾಜಿ ಮಾಡಿಕೊಳ್ಳಲು ಯೋಗ್ಯ ಪ್ರಕರಣಗಳನ್ನು ಇತ್ಯರ್ಥಪಡಿಸುವ ಸಲುವಾಗಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಸಮಾಧಾನ ಸಮಾರೋಪ ಎಂಬ ವಿಶೇಷ ಲೋಕ ಅದಾಲತ್ ಹಮ್ಮಿಕೊಂಡಿದ್ದು, ಅದರಲ್ಲಿ ಸುಪ್ರೀಂ ಕೋರ್ಟ್‌ನ ಅಪಘಾತ ಪ್ರಕರಣವನ್ನು ಇತ್ಯರ್ಥಪಡಿಸಿದ್ದಾಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ.ಕೆ.ವೇಲಾ ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಲು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ದಾವಣಗೆರೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಸಮಾಧಾನ ಸಮಾರೋಹವೆಂಬ ವಿಶೇಷ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ. ಸುಪ್ರೀಂ ಕೋರ್ಟ್ ನಲ್ಲಿ ಬರುವ ಆಗಸ್ಟ್‌ 21, 22 ಮತ್ತು 23ರಂದು ವಿಶೇಷ ಲೋಕ ಅದಾಲತ್ ಸಹ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಜಿಲ್ಲೆಗೆ ಸಂಬಂಧಿಸಿದ ಒಟ್ಟು 30 ಪ್ರಕರಣಗಳನ್ನು ವಿಶೇಷ ಲೋಕ ಅದಾಲತ್‌ನಲ್ಲಿ ಇತ್ಯರ್ಥಪಡಿಸಲು ಗುರುತಿಸಲಾಗಿದೆ. ಪ್ರಕರಣದ ಎರಡೂ ಕಡೆಯ ಕಕ್ಷಿದಾರರಿಗೆ(ಪಾರ್ಟಿಗಳಿಗೆ) ಈಗಾಗಲೇ ಪ್ರಾಧಿಕಾರದಿಂದ ನೋಟಿಸ್‌ಗಳನ್ನು ಜಾರಿಗೊಳಿಸಲಾಗುತ್ತಿದೆ. ಕಕ್ಷಿದಾರರು ತಾಲೂಕುಗಳಲ್ಲಿದ್ದರೆ ಆಯಾ ತಾಲೂಕು ಕಾನೂನು ಸೇವಾ ಸಮಿತಿ ಮೂಲಕ, ದಾವಣಗೆರೆ ಜಿಲ್ಲೆಯಲ್ಲಿದ್ದರೆ ಜಿಲ್ಲಾ ಪ್ರಾಧಿಕಾರದ ಮೂಲಕ, ಒಂದು ವೇಳೆ ಕಕ್ಷಿದಾರರು ಹೊರ ಜಿಲ್ಲೆ, ಹೊರ ರಾಜ್ಯಗಳಲ್ಲಿದ್ದರೆ, ಆಯಾ ವ್ಯಾಪ್ತಿಯ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ನೋಟಿಸ್ ಜಾರಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಕಕ್ಷಿದಾರರು ಅದಾಲತ್‌ಗೆ ಖುದ್ದಾಗಿ ಭೇಟಿ ನೀಡಲು ಸಾಧ್ಯವಾಗದಿದ್ದಲ್ಲಿ, ಅಂತಹವರಿಗಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಲು ವಿಶೇಷ ಅವಕಾಶ ಕಲ್ಪಿಸಿಕೊಡಲಾಗಿದೆ ಎಂದಿದ್ದಾರೆ.


ಸುಪ್ರೀಂ ಕೋರ್ಟ್‌ನಲ್ಲಿ ಮುಂಬರುವ ವಿಶೇಷ ಲೋಕ ಅದಾಲತ್ ಗಿಂತ ಮುಂಚಿತವಾಗಿ, ದಾವಣಗೆರೆ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪೂರ್ವ ರಾಜಿ ಸಂಧಾನ ಪ್ರಕ್ರಿಯೆಯು ಅತ್ಯಂತ ಯಶಸ್ವಿಯಾಗಿ ಜರುಗಿದೆ. ಹೈಕೋರ್ಟ್ ನ್ಯಾಯಮೂರ್ತಿ, ಆಡಳಿತಾತ್ಮಕ ನ್ಯಾಯಾಧೀಶ ರವಿ ಹೊಸಮನಿಯವರ ವರ್ಚುವಲ್ ಉಪಸ್ಥಿತಿ ಮತ್ತು ಮಾರ್ಗದರ್ಶನದಲ್ಲಿ ನಡೆದ ಸಂಧಾನದಲ್ಲಿ ದೀರ್ಘಕಾಲದ ಅಪಘಾತ ವಿಮಾ ಪರಿಹಾರದ ಪ್ರಕರಣವೊಂದು ಸೌಹಾರ್ದಯುತವಾಗಿ ಇತ್ಯರ್ಥಗೊಂಡಿದೆ ಎಂದು ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಹಂತದಲ್ಲಿದ್ದ ಅಪಘಾತ ಪರಿಹಾರದ ಕ್ಲೈಮ್ ಪ್ರಕರಣವೊಂದು ಸಂಧಾನದ ಮೂಲಕ ಯಶಸ್ವಿ ತೀರ್ಮಾನ ಕಂಡಿದೆ. ದಾವಣಗೆರೆ ನ್ಯಾಯಾಲಯದಲ್ಲಿ ಎಂವಿಸಿ ಸಂಖ್ಯೆ 856/2016 ರಡಿ ದಾಖಲಾಗಿದ್ದ ಪ್ರಕರಣ ಇದಾಗಿದ್ದು, ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ 875029 ರು. ಪರಿಹಾರ ನೀಡಲಾಗಿತ್ತು, ನಂತರ ಹೈಕೋರ್ಟ್ ಮೆಟ್ಟಿಲೇರಿತ್ತು. ಹೈಕೋರ್ಟ್ 4,53,473 ರು. ಹೆಚ್ಚುವರಿ ಪರಿಹಾರ ನೀಡಿ ಆದೇಶಿಸಿತ್ತು. ಸದರಿ ಪರಿಹಾರದ ಮೊತ್ತ ಸಾಲದೆಂದು ಕಕ್ಷಿದಾರರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಸುಪ್ರೀಂ ಕೋರ್ಟ್ ನಲ್ಲಿ ಪ್ರಕರಣವು ಎಸ್.ಎಲ್.ಪಿ ಸಂಖ್ಯೆ: 8750/2024 ರಡಿ ದಾಖಲಾಗಿತ್ತು ಎಂದು ಹೇಳಿದ್ದಾರೆ.

ಪ್ರಸ್ತುತ ಪೂರ್ವ ಸಂಧಾನ ಸಭೆಯಲ್ಲಿ ಇನ್ಶೂರೆನ್ಸ್ ಕಂಪನಿ ಹಾಗೂ ಕಕ್ಷಿದಾರರ ನಡುವೆ ಸಮಾಲೋಚನೆ ನಡೆಸಿ, ಹೈಕೋರ್ಟ್ ನೀಡಿದ್ದ ಮೊತ್ತವನ್ನು ಪರಿಷ್ಕರಿಸಿ ಒಟ್ಟು 6,00,000 ರು. ಹೆಚ್ಚುವರಿ ಪರಿಹಾರ ನೀಡಲು ಹೈಕೋರ್ಟ್ ನ್ಯಾಯಮೂರ್ತಿ ರವಿ ಹೊಸಮನಿ ಒಪ್ಪಿಸಿದ್ದಾರೆ. ಸಂಧಾನದ ತೀರ್ಮಾನದಂತೆ ಒಪ್ಪಿಗೆಯಾಗಿರುವ 6 ಲಕ್ಷ ರು. ಹೆಚ್ಚುವರಿ ಪರಿಹಾರದ ಮೊತ್ತವನ್ನು ಸಂಬಂಧಪಟ್ಟ ವಿಮಾ ಕಂಪನಿಯು ಮುಂಬರುವ ಆಗಸ್ಟ್ ತಿಂಗಳ ನಂತರ ನ್ಯಾಯಾಲಯದಲ್ಲಿ ಡೆಪಾಸಿಟ್ ಮಾಡಲಿದೆ ಎಂದು ನ್ಯಾಯಾಧೀಶ ಡಿ.ಕೆ.ವೇಲಾ ತಿಳಿಸಿದ್ದಾರೆ.