ಪರಿಶಿಷ್ಟ ಜಾತಿ ಒಳ ಮೀಸಲಾತಿಗಾಗಿ ಸಮೀಕ್ಷೆ ಆರಂಭ

| Published : May 06 2025, 12:15 AM IST

ಪರಿಶಿಷ್ಟ ಜಾತಿ ಒಳ ಮೀಸಲಾತಿಗಾಗಿ ಸಮೀಕ್ಷೆ ಆರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಹಲವು ದಿನಗಳಿಂದ ಕುತೂಹಲ ಕೆರಳಿಸಿದ್ದ ಒಳ ಮೀಸಲಾತಿ ಸಮೀಕ್ಷೆಗೆ ಸೋಮವಾರ ವಿದ್ಯುಕ್ತ ಚಾಲನೆ ದೊರೆತಿದೆ. ನಗರ ಮತ್ತು ಜಿಲ್ಲಾದ್ಯಂತ ಗಣತಿದಾರರು ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಮೈಸೂರು

ಪ.ಜಾತಿಯಲ್ಲಿ ಒಳ ಮೀಸಲಾತಿ ಹಂಚಿಕೆ ಮಾಡುವ ಕುರಿತು ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಆಯೋಗದ ಶಿಫಾರಸ್ಸಿನಂತೆ ಸೋಮವಾರದಿಂದ ಸಮೀಕ್ಷೆ ಕಾರ್ಯ ಆರಂಭವಾಗಿದೆ.

ಆ್ಯಪ್ ಡೌನ್‌ ಲೋಡ್‌ ಸಮಸ್ಯೆ ಮತ್ತು ಕೆಲಗೊಂದಲಗಳ ನಡುವೆಯು ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಂಡರು.

ಹಲವು ದಿನಗಳಿಂದ ಕುತೂಹಲ ಕೆರಳಿಸಿದ್ದ ಒಳ ಮೀಸಲಾತಿ ಸಮೀಕ್ಷೆಗೆ ಸೋಮವಾರ ವಿದ್ಯುಕ್ತ ಚಾಲನೆ ದೊರೆತಿದೆ. ನಗರ ಮತ್ತು ಜಿಲ್ಲಾದ್ಯಂತ ಗಣತಿದಾರರು ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಿದರು.

ಮೈಸೂರಿನ ಗಾಂಧಿನಗರ, ಎನ್‌.ಆರ್‌. ಮೊಹಲ್ಲಾ, ಅಶೋಕಪುರಂ, ಮೇಟಗಳ್ಳಿ, ದೇವರಾಜ ಅರಸು ಕಾಲೋನಿ ಸೇರಿದಂತೆ ದಲಿತ ಸಮುದಾಯದವರು ಹೆಚ್ಚು ವಾಸಿಸುವ ಬಡಾವಣೆಗಳಲ್ಲಿ ಗಣತಿದಾರರು ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಿದರು.

ಬಿಸಿಲನ್ನೂ ಲೆಕ್ಕಿಸದೆ ಅಧಿಕಾರಿಗಳು ಜಿಲ್ಲೆಯ ಎಲ್ಲೆಡೆ ಮನೆ ಮನೆ ಸಮೀಕ್ಷೆ ನಡೆಸಿದರು. ಮೂಲ ಸಮುದಾಯ, ಎಷ್ಟು ಜನ ವಾಸವಿದ್ದೀರಾ, ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಕುಟುಂಬದ ಮುಖ್ಯಸ್ಥರ ಉದ್ಯೋಗ, ಕುಟುಂಬದ ಕುಲ ಕಸುಬು ಏನು, ಜಮೀನು ಹೊಂದಿದ್ದಾರೆಯೇ ಎಂಬಿತ್ಯಾದಿ ಸಮೀಕ್ಷೆಗೆ ಪೂರಕವಾದ ದಾಖಲೆಗಳನ್ನು ಗಣತಿದಾರರು ಪಡೆದುಕೊಂಡು ಆ್ಯಪ್‌ ನಲ್ಲಿ ನಮೂದಿಸಿದರು. ಹೀಗಾಗಿ ದಲಿತ ಸಮುದಾಯದಲ್ಲಿನ ಎಡ- ಬಲ ಉಪ ಪಂಗಡಗಳು, ಜೊತೆಗೆ ಪ.ಜಾತಿಯಲ್ಲಿ ಅತ್ಯಂತ ಹಿಂದುಳಿದಿರುವ ಸೂಕ್ಷ್ಮಜಾತಿಗಳ ಅಂಕಿ- ಅಂಶಗಳನ್ನು ಗುರುತು ಮಾಡಿಕೊಂಡರು.

ಗಣತಿದಾರರು ಬರುವ ವಿಷಯ ತಿಳಿದಿದ್ದ ಬಡಾವಣೆಯ ಮುಖಂಡರು, ದಸಂಸ ಕಾರ್ಯಕರ್ತರು ನಿಖರ ಮಾಹಿತಿ ನೀಡುವಂತೆ ಸೂಚನೆ ನೀಡಿದರು. ತಂತಮ್ಮ ಮೂಲ ಜಾತಿಯನ್ನು ನಮೂದಿಸುವಂತೆ ಜಾಗೃತಿ ಮೂಡಿಸಿದರು. ಹೀಗಾಗಿ ಗಣತಿದಾರರಿಗೆ ಹೊರೆ ಕಡಿಮೆ ಆಯಿತು.

ನೈಜ ದತ್ತಾಂಶ ಸಂಗ್ರಹಕ್ಕಾಗಿ ಮೊದಲನೇ ಹಂತವಾಗಿ ಮನೆ ಮನೆ ಸಮೀಕ್ಷೆ ನಡೆದ ನಂತರ ಎರಡನೇ ಹಂತ ವಿಶೇಷ ಶಿಬಿರದ ಮೂಲಕ ನಡೆಯಲಿದೆ. ಇನ್ನು 3ನೇ ಹಂತ ಆನ್‌ ಲೈನ್ ಮೂಲಕ ನಡೆಯಲಿದೆ. ಅಲ್ಲೂ ಜನರಿಗೆ ಮಾಹಿತಿ ನೀಡಲು ಅವಕಾಶ ಇದೆ.

ಆ್ಯಪ್ ಡೌನ್‌ ಲೋಡ್‌ , ಪೂರಕ ಸಾಮಗ್ರಿ ಕೊರತೆ:

ಮೊದಲಿಗೆ ಗಣತಿದಾರರು ತಮ್ಮ ಗುರುತಿನ ಚೀಟಿ, ನಮೂನೆ- 4 ಫಾರಂ ಹಾಗೂ ವಾರ್ಡಿಗೆ ನೇಮಿಸಿರುವ ಪತ್ರವನ್ನು ಕಲೆ ಹಾಕಿದರು. ಬಳಿಕ ಕೆಲವರಿಗೆ ಆ್ಯಪ್ ಡೌನ್‌ ಲೋಡ್ ಆಗಲು ತೊಡಕಾಯಿತು. ತರಬೇತಿ ಸಮಯದಲ್ಲಿ ಟ್ರೈಯಲ್ ಆ್ಯಪ್ ಡೌನ್‌ ಲೋಡ್ ಮಾಡಿದ್ದ ಕಾರಣ ಆಪ್‌ ಡೇಟ್ ಆದ ಹೊಸ ಆ್ಯಪ್ ಡೌನ್‌ ಲೋಡ್ ಆಗುತ್ತಿರಲಿಲ್ಲ. ಇದರಿಂದ ಕೆಲಕಾಲ ತೊಡಕಾಯಿತು.